- ಸಭೆ ಮಾತ್ರವಲ್ಲ, ಅವರು ಫೋನೂ ಮಾಡಿಲ್ಲ
- ಆಡಳಿತದಲ್ಲಿ ಕೈ ಉಸ್ತುವಾರಿ ಹಸ್ತಕ್ಷೇಪ ಮಾಡಲ್ಲ----‘ಆಡಳಿತದಲ್ಲಿ ಸುರ್ಜೇವಾಲಾ ಹಸ್ತಕ್ಷೇಪಕ್ಕೆ ಸಚಿವರ ಆಕ್ಷೇಪ’ ವರದಿ ಕನ್ನಡಪ್ರಭದಲ್ಲಿ ಮಾತ್ರ ನಿನ್ನೆಯೇ ಪ್ರಕಟವಾಗಿತ್ತು
-----ಕನ್ನಡಪ್ರಭ ವಾರ್ತೆ ಅರಸೀಕೆರೆ
‘ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗಲಿ ಅಥವಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಾಗಲಿ ರಾಜ್ಯದಲ್ಲಿ ಅಧಿಕಾರಿಗಳ ಸಭೆ ನಡೆಸಿಲ್ಲ. ಯಾವ ಅಧಿಕಾರಿಯನ್ನೂ ಭೇಟಿ ಮಾಡಿಲ್ಲ, ಯಾವ ಅಧಿಕಾರಿಗೂ ಈವರೆಗೆ ಫೋನ್ ಮಾಡಿಲ್ಲ, ಫೋನ್ ಮಾಡುವುದೂ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿಮಠಕ್ಕೆ ಶನಿವಾರ ಭೇಟಿ ನೀಡಿದ ಡಿಕೆಶಿ, ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ, ಸುರ್ಜೇವಾಲಾ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ ಎಂದು ಸಚಿವ ಕೆ.ಎನ್, ರಾಜಣ್ಣ ಹಾಗೂ ಕೆಲವು ಸಚಿವರು ನೀಡಿದ್ದಾರೆ ಎನ್ನಲಾದ ಬಗ್ಗೆ ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಏನಾದರೂ ವಿಷಯವಿದ್ದರೆ ಅವರು ನಮಗೇ ಹೇಳ್ತಾರೆ. ನಮ್ಮಲ್ಲಿ ಏನಾದರೂ ತಪ್ಪುಗಳಿದ್ದರೆ ತಿದ್ದಿಕೊಳ್ತೀವಿ. ಅದನ್ನು ಬಿಟ್ಟು, ಸುರ್ಜೇವಾಲಾ ಆಗಲಿ ಅಥವಾ ಮಲ್ಲಿಕಾರ್ಜುನ ಖರ್ಗೆಯವರಾಗಲಿ ರಾಜ್ಯದ ಯಾವ ಅಧಿಕಾರಿಯನ್ನೂ ಭೇಟಿ ಮಾಡಿಲ್ಲ. ಯಾವ ಅಧಿಕಾರಿಗೂ ಈವರೆಗೆ ಫೋನ್ ಮಾಡಿಲ್ಲ. ಅವರು ಹಾಗೆಲ್ಲಾ ಫೋನ್ ಮಾಡುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.ಮೊಳಗಿದ ಡಿಕೆಶಿ ಸಿಎಂ ಎಂಬ ಘೋಷಣೆ:
ಮಠಕ್ಕೆ ಭೇಟಿ ನೀಡಿರುವ ವಿಷಯವಾಗಿ ಮಾತನಾಡಿ, ‘ಸ್ವಾಮೀಜಿಯವರ ಆಶೀರ್ವಾದ ಪಡೆದು, ಶಿವಲಿಂಗ ಅಜ್ಜಯ್ಯ ಗದ್ದುಗೆಗೆ ಪೂಜೆ ಸಲ್ಲಿಸಿದ್ದೇನೆ. ನನಗೆ ಧರ್ಮ, ದೇವರು, ಸಂಸ್ಕೃತಿಯ ಬಗ್ಗೆ, ನಮ್ಮ ಆಚಾರವಿಚಾರಗಳ ಬಗ್ಗೆ ನಂಬಿಕೆ ಜಾಸ್ತಿ. ಯಾವುದೇ ಧರ್ಮದ, ಯಾವುದೇ ಪದ್ಧತಿಗಳು, ತನ್ನದೇ ಆದಂತಹ ಶಕ್ತಿಯನ್ನು ಹೊಂದಿವೆ. ಕೆಲವರು ನಂಬದೇ ಇರಬಹುದು, ಆದರೆ ಇದನ್ನು ನಾನು ನಂಬುತ್ತೇನೆ’ ಎಂದರು.’ಬಹಳ ವರ್ಷದ ನಂತರ ಇಲ್ಲಿಗೆ ಬಂದಿದ್ದೇನೆ. ಕೋಡಿಶ್ರೀಗಳು ಮಠದಲ್ಲೇ ಇದ್ದಾರೆನ್ನುವ ಮಾಹಿತಿ ಸಿಕ್ಕಿತು. ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ. ಎಲ್ಲವೂ ಒಳ್ಳೆದಾಗುತ್ತೆ ಎನ್ನುವ ನಂಬಿಕೆಯಿದೆ’ ಎಂದು ಹೇಳಿದರು. ಈ ವೇಳೆ, ನೆರೆದಿದ್ದ ಅಭಿಮಾನಿಗಳು, ‘ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ’ ಎನ್ನುವ ಘೋಷಣೆ ಕೂಗಿದರು.
ಇದಕ್ಕೂ ಮೊದಲು ಅವರು, ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ಬೆಟ್ಟದ ಮೆಟ್ಟಿಲುಗಳಿಗೆ ಪೂಜೆ ಸಲ್ಲಿಸಿದರು. ಬಳಿಕ, ಜೇನುಕಲ್ಲು ಸಿದ್ದೇಶ್ವರ ದೇಗುಲಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. 1 ಗಂಟೆ ರಹಸ್ಯ ಮಾತುಕತೆ:ಡಿಕೆಶಿಯವರು ಕೋಡಿಮಠದ ಶ್ರೀಗಳ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮುಂದಿನ ತಮ್ಮ ರಾಜಕೀಯ ಭವಿಷ್ಯ ಹಾಗೂ ಮುಖ್ಯಮಂತ್ರಿ ಪದವಿ ದೊರೆಯುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದರು. ತಮ್ಮ ರಾಜಕೀಯ ಏಳಿಗೆ ಕುರಿತು ಭವಿಷ್ಯ ಕೇಳಿದರು ಎಂದು ತಿಳಿದು ಬಂದಿದೆ.