ತುಮಕೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆ ಹಾಡಬಹುದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ವೇದಿಕೆಯಲ್ಲಿ ಕೂರಬಹುದು. ಹೀಗೆ ಏನು ಬೇಕಾದರೂ ಮಾಡಬಹುದು. ಆದರೆ, ನಾವು ಮಾತ್ರ ಏನು ಮಾತನಾಡುವಂತಿಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳದ ಸಂದರ್ಭದಲ್ಲಿ ಪ್ರಯಾಗರಾಜ್‌ನ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ನಿವಾರಣೆಯಾಗುವುದಿಲ್ಲ ಎಂದಿದ್ದರು. ಅವರ ಹೇಳಿಕೆ ಬಳಿಕವೂ ಡಿ.ಕೆ.ಶಿವಕುಮಾರ್ ಅವರು ಗಂಗೆಯಲ್ಲಿ ಸ್ನಾನ ಮಾಡಿದರು. ಅಲ್ಲದೇ ಅಂಬಾನಿ ಮಗನ ಮದುವೆಯ ಆಮಂತ್ರಣವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ವೀಕರಿಸಲಿಲ್ಲ. ಆದರೆ, ಡಿಕೆಶಿ ಕುಟುಂಬ ಸಮೇತರಾಗಿ ಅಂಬಾನಿ ಮಗನ ಮದುವೆಗೆ ಹೋದರು.
ನಾವು ಮಂತ್ರಿಗಳ, ಶಾಸಕರ ಸಭೆ ಕರೆಯುವಂತಿಲ್ಲ. ಆದರೆ ಬೇರೆಯವರು ಕರೆಯಬಹುದು ಎಂದು ಡಿಕೆಶಿಗೆ ತಿರುಗೇಟು ನೀಡಿ, ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ಹೇಳಿದರು.
ಧರ್ಮಸ್ಥಳ ಪ್ರಕರಣದಲ್ಲಿ ಎಲ್ಲರೂ ಎಡವಿದ್ದಾರೆ: ರಾಜಣ್ಣ ಆಕ್ರೋಶ
ಧರ್ಮಸ್ಥಳ ಪ್ರಕರಣದಲ್ಲಿ ಎಲ್ಲರೂ ಆರಂಭದಲ್ಲಿಯೇ ಎಡವಿದ್ದು, ತಲೆ ಬುರುಡೆ ಇಟ್ಟುಕೊಂಡು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ದೇಶದಲ್ಲಿ ಅಪಕೀರ್ತಿ ತರುವ ಪ್ರಯತ್ನ ನಡೆಸಲಾಯಿತು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಮೃತದೇಹವನ್ನು ಮಣ್ಣು ಮಾಡಿದ ಮೇಲೆ ಅದನ್ನು ತೆಗೆಯುವ ಅಧಿಕಾರ ನಮಗೆ ಇರುವುದಿಲ್ಲ. ಹಾಗೆ ತೆಗೆಯಬೇಕು ಎಂದರೆ ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ತೆಗೆಯಬೇಕು. ಮಣ್ಣು ಮಾಡಿದ ಮೇಲೆ ಅದರ ಅಧಿಕಾರ ಯಾರಿಗಿದೆ, ಏನಿದೆ ಎಂಬುದು ಕಾನೂನಿನಲ್ಲಿ ಇದೆ. ಆ ತಲೆ ಬುರುಡೆಯನ್ನು ಎಲ್ಲಿಂದ ಹೊರತೆಗೆದರು? ಎಂದು ವಿಚಾರಣೆ ಮಾಡಬೇಕಿತ್ತು ಎಂದು ಹೇಳಿದರು.
ಆರಂಭದಲ್ಲಿ ಏನನ್ನೂ ವಿಚಾರಣೆ ಮಾಡದೆ ತಲೆ ಬುರುಡೆ ಇಟ್ಟುಕೊಂಡು ಧರ್ಮಸ್ಥಳಕ್ಕೆ ದೇಶದಲ್ಲಿ ಅಪಕೀರ್ತಿ ತರುವ ಪ್ರಯತ್ನ ನಡೆದಿದೆ. ಕೆಲ ತನಿಖಾ ತಂಡಗಳು ವಿನಾಕಾರಣ ಈ ಪ್ರಕರಣವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದವು. ಕಂಡ ಕಂಡಲ್ಲಿ ಗುಂಡಿ ತೆಗೆಯುವ ಮೂಲಕ ಅಲ್ಲಿನ ನಿವಾಸಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಸಾಮಾನ್ಯ ಜ್ಞಾನ ಬಳಸಿಲ್ಲ:
ಪ್ರಾರಂಭಿಕ ಹಂತದಲ್ಲಿ ಸಾಮಾನ್ಯ ಜ್ಞಾನ ಬಳಸಿ ವಿಚಾರಣೆ ಮಾಡಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ. ಇದು ಎಡಪಂಥೀಯರು, ಬಲಪಂಥೀಯರು ಅನ್ನುವುದನ್ನು ನಾನು ಒಪ್ಪುವುದಿಲ್ಲ. ದೂರು ಕೊಡಲು ಬಂದವನ ಪೂರ್ವಪರ ವಿಚಾರಿಸಬೇಕಿತ್ತು. ಅದನ್ನು ಬಿಟ್ಟು ನ್ಯಾಯಾಧೀಶರ ಮುಂದೆ ‘164 ಸ್ಟೇಟ್ಮೆಂಟ್’ ಮಾಡಿಕೊಂಡು ಎಸ್ಐಟಿ ರಚಿಸಿಕೊಂಡು ಇಷ್ಟು ರಾದ್ಧಾಂತ ಮಾಡಿದ್ದಾರೆ. ಪ್ರಾರಂಭವಿಕವಾಗಿ ತಲೆ ಬುರುಡೆ ತಂದವನನ್ನೇ ವಿಚಾರಣೆ ಮಾಡಬೇಕಾಗಿತ್ತು. ಮೊದಲೇ ಇದನ್ನೆಲ್ಲಾ ಮಾಡಿದ್ದರೆ ಈ ರಾದ್ಧಾಂತಗಳು ನಡೆಯುತ್ತಿರಲಿಲ್ಲ ಎಂದು ರಾಜಣ್ಣ ಹೇಳಿದರು.