ಎಲ್ಲಾ ೩೩೭೫ ಮನೆಗಳು ತುರುವೇಕೆರೆ ಕ್ಷೇತ್ರಕ್ಕೆ: ಶಾಸಕರ ಆಶಯ

KannadaprabhaNewsNetwork | Published : Nov 2, 2023 1:00 AM

ಸಾರಾಂಶ

ಕುಣಿಗಲ್ ಕ್ಷೇತ್ರಕ್ಕೆ ಮಂಜೂರು ಮಾಡಿದ್ದ ಕ್ರಮ ಪ್ರಶ್ನಿಸಿ ನ್ಯಾಯಾಲಯದ ಮೊರೆ । ಮನವಿ ಪುರಸ್ಕರಿಸಿದ ನ್ಯಾಯಾಲಯ । ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ
ಕನ್ನಡಪ್ರಭ ವಾರ್ತೆ, ತುರುವೇಕೆರೆ: ಕಳೆದ ಸರ್ಕಾರ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಬಸವ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರು ಮಾಡಿದ್ದ ಮನೆಗಳ ಪೈಕಿ ಅರ್ಧದಷ್ಟು ಮನೆಗಳನ್ನು ಕುಣಿಗಲ್ ಕ್ಷೇತ್ರಕ್ಕೆ ಮಂಜೂರು ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ತಮ್ಮ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಈಗಿನ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ಸರ್ಕಾರ ಈ ಕ್ಷೇತ್ರಕ್ಕೆ ೩೩೭೫ ಮನೆಗಳನ್ನು ಮಂಜೂರು ಮಾಡಿತ್ತು. ಆದರೆ, ಈ ಕಾಂಗ್ರೆಸ್ ಸರ್ಕಾರ ಬಂದ ನಂತರ ಕುಣಿಗಲ್ ಕ್ಷೇತ್ರಕ್ಕೆ ಅಷ್ಟೂ ಮನೆಗಳನ್ನು ಪರಬಾರೆ ಮಾಡಿತ್ತು. ನಂತರ ತಾವು ಸರ್ಕಾರದ ನಡೆಯನ್ನು ಖಂಡಿಸಿ ವಸತಿ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಲು ಮುಂದಾದ ಹಿನ್ನೆಲೆ ೧೫೦೫ ಮನೆಗಳನ್ನು ನಮ್ಮ ಕ್ಷೇತ್ರಕ್ಕೆ ಹಿಂತಿರುಗಿಸಿದರು. ಉಳಿದ ಮನೆಗಳನ್ನು ನೀಡುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ತಾವು ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ತಮ್ಮ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಮುಂಬರುವ ದಿನಗಳಲ್ಲಿ ನಮ್ಮ ಕ್ಷೇತ್ರಕ್ಕೆ ಈ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಎಲ್ಲಾ ಮನೆಗಳು ಬರುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಕ್ಷೇತ್ರದಲ್ಲಿರುವ ಎಲ್ಲಾ ವಸತಿಹೀನರಿಗ ಮನೆ ದೊರೆಯುವುದು ಶತಸ್ಸಿದ್ಧ. ಎಲ್ಲ ಅರ್ಹರಿಗೂ ಮನೆಗಳನ್ನು ಮಂಜೂರು ಮಾಡುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಹೋರಾಟ: ಈ ಕಾಂಗ್ರೆಸ್ ಸರ್ಕಾರ ತಮ್ಮ ಪಕ್ಷದ ಶಾಸಕರಿಗೆ ಒಂದು ನೀತಿ, ಬೇರೆ ಶಾಸಕರಿಗೆ ಒಂದು ನೀತಿ ಮಾಡಲು ಹೊರಟಿತ್ತು. ಇದರ ವಿರುದ್ಧವಾಗಿ ತಾವು ಹೋರಾಡಿದ್ದರ ಫಲವಾಗಿ ಎಲ್ಲಾ ೩೩೭೫ ಮನೆಗಳು ಸಹ ಪುನಃ ಬರಲಿವೆ. ಇದು ತಾವು ಮಾಡಿದ ಹೋರಾಟಕ್ಕೆ ಸಂದ ಜಯ ಎಂದು ಕೃಷ್ಣಪ್ಪ ಹೇಳಿದರು. ನೀರು ಬಿಡಲು ಆಗ್ರಹ - ತುಮಕೂರು ಜಿಲ್ಲೆಗೆ ಹೇಮಾವತಿ ನೀರನ್ನು ಹರಿಸಬೇಕೆಂದು ಐಸಿಸಿ ಸಭೆಯಲ್ಲಿ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಹೇಮಾವತಿ ನೀರನ್ನು ಬಿಡಲಾಗುತ್ತಿದೆ. ರೈತಾಪಿಗಳು ಸಂಯಮದಿಂದ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ರೈತಾಪಿಗಳಲ್ಲಿ ಮನವಿ ಮಾಡಿಕೊಂಡರು. ಅವೈಜ್ಞಾನಿಕ: ದೆಹಲಿಯಲ್ಲಿರುವ ನೀರು ನಿರ್ವಹಣಾ ಸಮಿತಿಯು ಅವೈಜ್ಞಾನಿಕವಾಗಿ ಇಲ್ಲಿನ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ಕೊಟ್ಟಿದೆ. ವಾಸ್ತವವಾಗಿ ಆ ಅಧಿಕಾರಿಗಳು ಜಲಾಶಯಗಳ ವಸ್ತುಸ್ಥಿತಿ ಅರಿತು ತೀರ್ಮಾನ ನೀಡದೆ ಏಸಿ ಕೊಠಡಿಯೊಳಗೆ ಕುಳಿತು ತೀರ್ಮಾನ ಕೊಡುವುದು ಸರಿಯಲ್ಲ. ಇದು ರಾಜ್ಯದ ರೈತರು ಹಾಗೂ ಕರ್ನಾಟಕಕ್ಕೆ ಮಾಡಿದ ದ್ರೋಹ. ಎಲ್ಲೋ ಕುಳಿತು ಆದೇಶ ನೀಡುವುದರ ಬದಲು ಸ್ಥಳ ಪರಿಶೀಲಿಸಿ ಆದೇಶ ನೀಡಬೇಕು. ನೀರು ನಿರ್ವಹಣಾ ಸಮಿತಿ ಯಾವುದೇ ಆದೇಶ ನೀಡಿದರೂ ಆದೇಶಕ್ಕೆ ಸೊಪ್ಪು ಹಾಕದೆ, ರೈತರ ಹಿತ ಕಾಪಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ತರಾಟೆ: ತಾಲೂಕಿನ ಪೊಲೀಸ್ ಅಧಿಕಾರಿಗಳು ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜನರಿಗೆ ರಕ್ಷಣೆ ಕೊಡದೆ ಅವರನ್ನು ಸುಲಿಗೆ ಮಾಡುತ್ತಿದ್ದಾರೆಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಕೃಷ್ಣಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ವೆಂಕಟಾಪರ ಯೋಗೀಶ್, ಮಂಗಿಕುಪ್ಪೆ ಬಸವರಾಜು ಇದ್ದರು. ಫೋಟೊ....... ೧ ಟಿವಿಕೆ ೨ ತುರುವೇಕೆರೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಪತ್ರಿಕಾಗೋಷ್ಠಿ ನಡೆಸಿದರು.

Share this article