ಎಸ್‌ಟಿ ತಟ್ಟೆಗೆ ಕುರುಬರ ಕೈ : ವಿ.ಎಸ್‌.ಉಗ್ರಪ್ಪ ಆಕ್ಷೇಪ

KannadaprabhaNewsNetwork |  
Published : Oct 08, 2025, 02:03 AM ISTUpdated : Oct 08, 2025, 06:03 AM IST
Siddaramaiah Koppal

ಸಾರಾಂಶ

ದಯವಿಟ್ಟು ಕುರುಬರನ್ನು ಎಸ್‌ಟಿಗೆ ಸೇರಿಸುವ ಪ್ರಯತ್ನದಲ್ಲಿ ನಮ್ಮ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಲು ಹೋಗಬೇಡಿ’ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರು :‘ದಯವಿಟ್ಟು ಕುರುಬರನ್ನು ಎಸ್‌ಟಿಗೆ ಸೇರಿಸುವ ಪ್ರಯತ್ನದಲ್ಲಿ ನಮ್ಮ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಲು ಹೋಗಬೇಡಿ’ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಬೇಕಿದ್ದರೆ ನಿಮ್ಮ ತಟ್ಟೆ, ಅನ್ನವನ್ನು ತಂದು (ಮೀಸಲಾತಿ ಹೆಚ್ಚಳ) ನಮ್ಮೊಂದಿಗೆ ಕುಳಿತು ಊಟ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಕೊನೆಯ ಉಸಿರಿರುವವರೆಗೆ ಯಾರೇ ತಪ್ಪು ಮಾಡಿದರೂ ಅದನ್ನು ಬಹಿರಂಗವಾಗಿ ಖಂಡಿಸುತ್ತೇನೆ. ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡುವುದಕ್ಕೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಫಾರಸು ಮಾಡಿದ್ದರು. ಆದರೆ, ಈ ಕ್ರಮದಿಂದ ನಮ್ಮ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಂಡಂತಾಗುತ್ತದೆ. ನಮ್ಮೊಂದಿಗೆ ಕುಳಿತು ಊಟ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ನಮ್ಮ ಅನ್ನ ಕಿತ್ತುಕೊಳ್ಳುವುದು ಸರಿಯಲ್ಲ. ಒಂದು ವೇಳೆ, ಮೀಸಲಾತಿ ಹೆಚ್ಚಿಸದೆ ಕುರುಬರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಿದರೆ, ಜನರೊಂದಿಗೆ ಸೇರಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಕುರುಬರನ್ನು ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡುವುದಕ್ಕೂ ಮುನ್ನ ಕುಲಶಾಸ್ತ್ರ ಅಧ್ಯಯನ ಮಾಡಬೇಕು. ಕುರುಬರು ಬುಡಕಟ್ಟು ಸಮುದಾಯಕ್ಕೆ ಸೇರಿದವರೇ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಕುರುಬರು ಒಬಿಸಿಯಿಂದ ಎಸ್ಟಿಗೆ ಸೇರ್ಪಡೆಯಾಗುತ್ತಾರೆ ಎಂದಾದರೆ ಆ ಕ್ಷಣದಿಂದಲೇ ಶಿಕ್ಷಣ, ಉದ್ಯೋಗ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿನ ಎಸ್ಟಿ ಮೀಸಲಾತಿಯನ್ನು ಶೇ. 14ಕ್ಕೆ ಹೆಚ್ಚಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರದಿಂದ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ನೀವೂ ಮಾಜಿಗಳಾಗುತ್ತೀರಿ:

ಎಸ್ಟಿ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಹೆಚ್ಚಿಸಬೇಕು. ಮುಂದೊಂದು ದಿನ ವಾಲ್ಮೀಕಿ ಸಮುದಾಯದವರು ರಾಜ್ಯದ ಮುಖ್ಯಮಂತ್ರಿಗಳಾಗಬೇಕು. ಸಿದ್ದರಾಮಯ್ಯ ಅವರೇ ನೀವೂ ಒಂದಲ್ಲ ಒಂದು ದಿನ ಮಾಜಿಗಳಾಗುತ್ತೀರಿ. ಅದಕ್ಕೂ ಮುನ್ನ ದೇವರಾಜ ಅರಸು, ಇಂದಿರಾ ಗಾಂಧಿ ಮಾದರಿ ಎಲ್ಲ ವರ್ಗದವರನ್ನೂ ಗುರುತಿಸಿ ನಾಯಕರನ್ನು ಸಿದ್ಧಪಡಿಸಿ ಎಂದು ಇದೇ ವೇಳೆ ಉಗ್ರಪ್ಪ ಹೇಳಿದರು.

ಸದ್ಯ ಎಸ್ಟಿ ವರ್ಗಕ್ಕೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 15 ಕ್ಷೇತ್ರಗಳು ಮತ್ತು 28 ಲೋಕಸಭಾ ಕ್ಷೇತ್ರಗಳಲ್ಲಿ 2 ಕ್ಷೇತ್ರಗಳಲ್ಲಿ ಮಾತ್ರ ಮೀಸಲಾತಿ ಇದೆ. ರಾಜಕೀಯ ಮೀಸಲಾತಿ ಹೆಚ್ಚಿಸಿದರೆ ಆಗ 15 ಕ್ಷೇತ್ರಗಳು 50ಕ್ಕೆ, 2 ಕ್ಷೇತ್ರಗಳು 10ಕ್ಕೆ ಹೆಚ್ಚುವ ಸಾಧ್ಯತೆಗಳಿವೆ. ಅದರಿಂದ ಎಸ್ಟಿ ಸಮುದಾಯದಿಂದ ಜನಪ್ರತಿನಿಧಿಗಳು ಹೊರಹೊಮ್ಮುತ್ತಾರೆ ಎಂದು ಹೇಳಿದರು.

 ಯಾರ ತಟ್ಟೆಗೂ ಕುರುಬರು ಕೈ ಹಾಕೋಲ್ಲ: ಸಿಎಂ ಸಿದ್ದು 

 ಬೆಂಗಳೂರು : ‘ಕುರುಬ ಸಮುದಾಯದವರು ಯಾರ ತಟ್ಟೆಗೂ ಕೈ ಹಾಕುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

‘ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರದ ನಿರ್ಧರಿಸಿದರೆ ಪರಿಶಿಷ್ಟ ಪಂಗಡಕ್ಕೆ ನಿಗದಿ ಮಾಡಿರುವ ಮೀಸಲಾತಿಯನ್ನು ದುಪ್ಪಟ್ಟು ಹೆಚ್ಚಿಸುವಂತೆ ರಾಜ್ಯ ಸರ್ಕಾರದಿಂದಲೇ ಶಿಫಾರಸು ಮಾಡಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡುವುದಕ್ಕೆ ಶಿಫಾರಸು ಮಾಡಿದ್ದು ನಾವಲ್ಲ. ಬಿಜೆಪಿ ಸರ್ಕಾರವಿದ್ದಾಗ ಕೆ.ಎಸ್‌.ಈಶ್ವರಪ್ಪ ಒತ್ತಾಯದ ಮೇರೆಗೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರುಬರನ್ನು ಎಸ್ಟಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಿದ್ದರು. ಈಗ ಅದರ ಬಗೆಗಿನ ಗೊಂದಲ ಬಗೆಹರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದು, ಅದರ ಬಗ್ಗೆ ವರದಿ ನೀಡಲಾಗುತ್ತಿದೆ ಎಂದರು.

ವಾಲ್ಮೀಕಿ ಸೇರಿದಂತೆ ಎಸ್ಟಿ ಸಮುದಾಯಕ್ಕಿರುವ ಮೀಸಲಾತಿಯನ್ನು ಕುರುಬರು ಪಡೆಯಲು ಮುಂದಾಗಿಲ್ಲ. ಯಾರೂ ಯಾರ ತಟ್ಟೆಗೂ ಕೈ ಹಾಕಬಾರದು ಮತ್ತು ಹಾಕುವುದೂ ಇಲ್ಲ. ಹಾಗೆಯೇ ಯಾರೂ ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ. ಒಂದು ವೇಳೆ ಕುರುಬರನ್ನು ಎಸ್ಟಿಗೆ ಸೇರಿಸುವುದಾದರೆ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು. ಹಾಗೆಯೇ, ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಲಾಗುವುದು. ಹಾಲಿ ಇರುವ ಎಸ್ಟಿ ಮೀಸಲಾತಿ ಶೇ. 7ರಿಂದ ಶೇ. 14ರಿಂದ 20ರವರೆಗೆ ಹೆಚ್ಚಿಸಬೇಕು ಎಂದು ನಾನೇ ಆಗ್ರಹಿಸುತ್ತೇನೆ ಮತ್ತು ಶಿಫಾರಸು ಮಾಡುತ್ತೇನೆ ಎಂದು ತಿಳಿಸಿದರು. 

ಉಗ್ರಪ್ಪ ಆಕ್ರೋಶ ತಣ್ಣಗಾಗಿಸಲು ಯತ್ನಿಸಿದ ಸಿಎಂ:

ತಮ್ಮ ಭಾಷಣಕ್ಕೂ ಮುನ್ನ ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ್ದ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಅವರನ್ನು ಶಾಂತವಾಗಿಸುವಂತೆ ಮಾತನಾಡಿದ ಸಿದ್ದರಾಮಯ್ಯ, ವಾಲ್ಮೀಕಿ ರಾಮಾಯಣದಂಥ ಮಹಾಕಾವ್ಯ ಬರೆದರು. ಅವರ ಮೌಲ್ಯಗಳನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ವಾಲ್ಮೀಕಿ ಅವರ ಪ್ರತಿಮೆ ಸ್ಥಾಪಿಸಿ, ತಪೋವನ ಮಾಡುವಂತೆ ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಉಗ್ರಪ್ಪ ಸಲಹೆ ನೀಡಿದರು. ಅದರಂತೆ ವಾಲ್ಮೀಕಿ ಪ್ರತಿಮೆ ಸ್ಥಾಪಿಸಿ ತಪೋವನ ಮಾಡಿದೆ ಎಂದರು.ವಾಲ್ಮೀಕಿ (ನಾಯಕ) ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವಲ್ಲಿ ಉಗ್ರಪ್ಪ ಪಾತ್ರ ದೊಡ್ಡದಿದೆ. ಈ ಹಿಂದೆ ಚಂದ್ರಶೇಖರ್‌ ಅವರು ಪ್ರಧಾನಿಯಾಗಿದ್ದಾಗ ಅವರಿಗೆ ಆಪ್ತರಾಗಿದ್ದ ಎಚ್‌.ಡಿ.ದೇವೇಗೌಡ ಅವರಿಗೆ ಉಗ್ರಪ್ಪ ದಂಬಾಲು ಬಿದ್ದು ನಾಯಕ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಮಾಡಿದರು ಎಂದು ಶ್ಲಾಘಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯಪಾಲರು, ಸಂವಿಧಾನಕ್ಕೆ ಕೈನಿಂದ ಅಪಮಾನ: ಅಶೋಕ್‌
ಜನಪ್ರತಿನಿಧಿಗಳಿಗೆ ಗೌರ್‍ನರ್‌ ಅಪಮಾನ : ಸಿದ್ದರಾಮಯ್ಯಆಕ್ರೋಶ