ಜಮೀನು ಸರ್ವೇ ಸೇಡಿನ ರಾಜಕೀಯದ ಭಾಗ - ಸಿಎಂ ರೀತಿ ಸುಳ್ಳು ದಾಖಲೆ ಸೃಷ್ಟಿಸಿ ಪಡೆದಿಲ್ಲ : ಎಚ್ಡಿಕೆ

Published : Feb 20, 2025, 11:30 AM IST
HD Kumaraswamy

ಸಾರಾಂಶ

ಕೇತಗಾನಹಳ್ಳಿಯ ತಮ್ಮ ಜಮೀನು ಸಮೀಕ್ಷೆ ಸೇಡಿನ ರಾಜಕೀಯದ ಭಾಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿ ನಾನು ಸರ್ಕಾರಿ ಭೂಮಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಪಡೆದಿಲ್ಲ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು : ಕೇತಗಾನಹಳ್ಳಿಯ ತಮ್ಮ ಜಮೀನು ಸಮೀಕ್ಷೆ ಸೇಡಿನ ರಾಜಕೀಯದ ಭಾಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿ ನಾನು ಸರ್ಕಾರಿ ಭೂಮಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಪಡೆದಿಲ್ಲ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬುಧವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿ, ಇಷ್ಟು ದಿನ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಲಾಗುತ್ತಿತ್ತು. ಈಗ ಐಎಎಸ್ ಅಧಿಕಾರಿಗಳ ಎಸ್‌ಐಟಿಯನ್ನೂ ರಚಿಸಲಾಗುತ್ತಿದೆ. ಸಿದ್ದರಾಮಯ್ಯಗೆ ಅಧಿಕಾರ ಇದ್ದು, ಏನು ಬೇಕಾದರೂ ಮಾಡುತ್ತಾರೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ವಾಗ್ದಾಳಿ ನಡೆಸಿದರು.

ನನ್ನನ್ನು ಗುರಿಯಾಗಿಸಿಕೊಂಡು ಸಮೀಕ್ಷೆ ಮಾಡಿಸಲಾಗುತ್ತಿದೆ. ಇದರಲ್ಲಿ ಸಂಶಯವೇ ಬೇಡ. ಯಾವುದೇ ತನಿಖೆ ಮಾಡಲಿ, ನಾನು ಮುಕ್ತವಾಗಿದ್ದೇನೆ. ಆ ಭೂಮಿ ಖರೀದಿಸಿ 40 ವರ್ಷವಾಗಿದೆ. ಅಷ್ಟೂ ವರ್ಷಗಳಿಂದ ಈ ವಿಷಯವನ್ನು ಜೀವಂತವಾಗಿಟ್ಟು ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. 1984ರಲ್ಲಿ ಈ ಭೂಮಿ ಖರೀದಿಸಿದ್ದು. ಅಂದಿನಿಂದಲೂ ಈ ಭೂಮಿ ಮೇಲೆ ಕೆಲವರ ಕಣ್ಣು ಬಿದ್ದಿದೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದ ಅಸಹಾಯಕತೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸಮೀಕ್ಷೆ ಮೂಲಕ ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

2012ರಿಂದಲೂ ನನ್ನ ವಿರುದ್ದ ತನಿಖೆ ನಡೆಸುತ್ತಿದ್ದರೂ ಏನೂ ಸಿಕ್ಕಿಲ್ಲ. ಈಗ ಆಗಿರುವ ಎಲ್ಲಾ ತನಿಖೆಗಳು ಸಾಕಾಗುವುದಿಲ್ಲ ಎಂದು ಈಗ ಐಎಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಮಾಡಿಸಲಾಗುತ್ತಿದೆ ಎಂದರು.

ಕೇತಗಾನಹಳ್ಳಿಯ ತಮ್ಮ ಜಮೀನಿಗೆ ಸಂಬಂಧಿಸಿ ಕಾಂಗ್ರೆಸ್‌ನ ಕೆಲ ಪುಢಾರಿಗಳು ದೂರುದಾರನನ್ನು ಕರೆಸಿ ಮಾತನಾಡಿಸಿದ್ದಾರೆ. 40 ವರ್ಷ ಇಲ್ಲದ ದೂರುದಾರರು ಈಗ ಹೇಗೆ ಉದ್ಭವವಾದರು? ಎಂದು ಕುಮಾರಸ್ವಾಮಿ ಕಿಡಿಕಾರಿದರು.

ನೋಟಿಸ್‌ ನೀಡದೆ ಸಮೀಕ್ಷೆ:

ಕಾಂಗ್ರೆಸ್ ಸರ್ಕಾರದ ಎಸ್‌ಐಟಿ ಯಾವುದೇ ನೊಟೀಸ್ ನೀಡದೆ ಸಮೀಕ್ಷೆ ಮಾಡಲು ಮುಂದಾಗಿತ್ತು. ಆದರೆ, ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ ಮಾತನಾಡಿ, ನೋಟಿಸ್ ಕೊಟ್ಟು ಸಮೀಕ್ಷೆ ನಡೆಸುವಂತೆ ತಿಳಿಸಿದ್ದೇನೆ. ಜಾಗತಿಕ ಮಟ್ಟದ ಭೂಮಾಪಕರನ್ನು ಕರೆತಂದು ಸಮೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದೇನೆ. ಖರೀದಿ ಮಾಡಿರುವ ಭೂಮಿಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಸಾಂವಿಧಾನಿಕ ಸಂಸ್ಥೆಗಳನ್ನು, ತನಿಖಾ ವ್ಯವಸ್ಥೆಯನ್ನು ಹೇಗೆಲ್ಲ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಿದೆ. ಅವರ ಹಣೆಬರಹದ ದಾಖಲೆಗಳೂ ನನ್ನ ಬಳಿ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಸಿಎಂ ವಿರುದ್ಧ ವಾಗ್ದಾಳಿ: 

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಚಿಯರ್ ಲೀಡರ್ ಎಂದು ಸಿದ್ದರಾಮಯ್ಯ ಅಗೌರವದ ಹೇಳಿಕೆ ನೀಡಿದ್ದಾರೆ. ದೇವೆಗೌಡರ ಬಗ್ಗೆ ಮಾತನಾಡುವ ಮುನ್ನ ಅವರು ತಮ್ಮ ಯೋಗ್ಯತೆ ಅರಿತುಕೊಂಡರೆ ಉತ್ತಮ. ರಾಜ್ಯದ ನೀರಾವರಿಗೆ ದೇವೇಗೌಡರು ಏನು ಮಾಡಿದ್ದಾರೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯ ಏನು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ಅವರ ಕೊಡುಗೆ ಏನು? ಎಂದು ವಾಗ್ದಾಳಿ ನಡೆಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!