ಕನ್ನಡಿಗರ ಧ್ವನಿಯಾಗಲು ನನಗೆ ಅವಕಾಶ ನೀಡಿ: ಮನ್ಸೂರ್ ಖಾನ್‌

KannadaprabhaNewsNetwork |  
Published : Apr 20, 2024, 01:31 AM ISTUpdated : Apr 20, 2024, 05:18 AM IST
ರಾಜಾಜಿನಗರ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಮೇಯರ್ ಪದ್ಮಾವತಿ ಜೊತೆಯಾದರು. | Kannada Prabha

ಸಾರಾಂಶ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಅವರು ಪ್ರಚಾರ ನಡೆಸಿದರು. ಈ ವೇಳೆ ದೆಹಲಿಯಲ್ಲಿ ಕನ್ನಡಿಗರ ಧ್ವನಿ ಆಗಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

 ಬೆಂಗಳೂರು :  ಕಳೆದ 20 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನನಗೆ, ದಿಲ್ಲಿಯಲ್ಲಿ ಕನ್ನಡಿಗರ ಧ್ವನಿಯಾಗಲು ಜನರು ಈ ಬಾರಿ ಒಂದು ಅವಕಾಶ ನೀಡಬೇಕು ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮನವಿ ಮಾಡಿದರು.

ಶುಕ್ರವಾರ ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ನಡೆಸಿದ ಅವರು, ನಾನು ಕಳೆದ 20 ವರ್ಷಗಳಿಂದ ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇನೆ. ಕೋವಿಡ್-19 ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸಿದ್ದೇನೆ. ಕೋವಿಡ್ ರೋಗಿಗಳಿಗೆ ನೆರವಾಗಲು ಆ್ಯಂಬುಲೆನ್ಸ್, ಪಿಪಿಇ ಕಿಟ್ ವಿತರಣೆ ಮತ್ತು ಐಸಿಯು ಸ್ಥಾಪನೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿದ್ದೇನೆ. ಕೆಕೆ ಚಾರಿಟೇಬಲ್ ಟ್ರಸ್ಟ್ ಮೂಲಕ ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದೇನೆ ಎಂದರು.

ಸಮಾಜದ ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ನನ್ನದೇ ಆದ ಕನಸುಗಳಿವೆ. ನಿಮ್ಮೆಲ್ಲರ ಸೇವೆ ಮಾಡಲು ಆರೋಗ್ಯ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲು ನಾನು ಬದ್ಧನಾಗಿರುತ್ತೇನೆ. ಹೀಗಾಗಿ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಹಾಲಿ ಸಂಸದರಿಗೆ ಮೂರು ಅವಕಾಶಗಳನ್ನು ನೀಡಿದರೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಪ್ರಧಾನಿ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ತಾವು ಮಾಡಿದ ಕೆಲಸಗಳ ಬಗ್ಗೆ ಹೇಳಿಕೊಳ್ಳುತ್ತಿಲ್ಲ. ಏಕೆಂದರೆ, ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಹಾಲಿ ಸಂಸದರ ವಿರುದ್ಧ ಮನ್ಸೂರ್ ಅಲಿ ಖಾನ್ ಟೀಕಾ ಪ್ರಹಾರ ನಡೆಸಿದರು.

ಕನ್ನಡಿಗರ ಧ್ವನಿಯಾಗುತ್ತೇನೆ:

ಕೇಂದ್ರ ಲೋಕಸಭಾ ಕ್ಷೇತ್ರದಿಂದ ಜನರು ನನಗೆ ಆಶೀರ್ವಾದ ಮಾಡಿದರೆ ರಾಜ್ಯದ ಜನರ ಹಕ್ಕುಗಳ‍ು, ತೆರಿಗೆಗಾಗಿ ಸಂಸತ್ತಿನಲ್ಲಿ ರಾಜ್ಯದ ಧ್ವನಿಯಾಗುತ್ತೇನೆ. ರಾಜ್ಯದ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ. ನಮ್ಮ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ತೆರಿಗೆಗಾಗಿ ಹೋರಾಟ ಮಾಡುತ್ತೇನೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಮಾಜಿ ಮೇಯರ್‌ ಪದ್ಮಾವತಿ, ಬ್ಲಾಕ್‌ ಅಧ್ಯಕ್ಷರು, ವಾರ್ಡ್‌ ಅಧ್ಯಕ್ಷರು, ಸ್ಥಳೀಯ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗಿದ್ದರು.

ನ್ಯಾಯಯುತ ತೆರಿಗೆ ನೀಡಲಿ

15ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸ್ಸಿನಂತೆ ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡದೇ ಕರ್ನಾಟಕದ ಬಗ್ಗೆ ಮಲತಾಯಿ ಧೋರಣಿ ಅನುಸರಿಸುತ್ತಿದೆ. ಅದನ್ನು ಕೇಂದ್ರ ಸರ್ಕಾರದ ಎದುರು ಪ್ರಶ್ನಿಸಬೇಕಾದ ಬಿಜೆಪಿಯ 25 ಜನ ಸಂಸದರು ಮಾತನಾಡದೇ ಮೌನವಾಗಿದ್ದಾರೆ. ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದ್ದರೂ ಪ್ರಶ್ನಿಸದೆ, ಮತ ಹಾಕಿ ಆಯ್ಕೆ ಮಾಡಿದ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಮನ್ಸೂರ್ ಅಲಿ ಖಾನ್ ಆರೋಪಿಸಿದರು.

ಎಲ್ಲೆಲ್ಲಿ ಪ್ರಚಾರ

ಬಸವೇಶ್ವರ ನಗರ, ಶ್ರೀರಾಮನಗರ ಮುಖ್ಯರಸ್ತೆ, ಕೆರೆ ಕಲ್ಲು ಕಾಲೋನಿ, ಶಾರದಾ ಕಾಲೋನಿ, ಎಲ್‌ಐಸಿ ಕಾಲೋನಿ, ಮಂಜುನಾಥ ನಗರ, ದಯಾನಂದ ನಗರ, ಆರ್.ಜೆ ನಗರ, ಪ್ರಕಾಶ ನಗರ, ರಾಮಮಂದಿರ ವಾರ್ಡ್, ಗೋಪಾಲಪುರ ಮತ್ತು ಸಿದ್ಧರಾಮ ದಿಣ್ಣೆ ಸೇರಿದಂತೆ ರಾಜಾಜಿನಗರ ಕ್ಷೇತ್ರದ ಹಲವೆಡೆ ರೋಡ್ ಶೋ ನಡೆಸಿ ಮನೆ ಮನೆ ಪ್ರಚಾರ ಕಾರ್ಯ ನಡೆಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ