ರಾಜ್ಯ ಸರ್ಕಾರದ ಎಲ್ಲ ನಿಗಮಗಳಲ್ಲಿ ಹಗರಣ ನಡೆದಿದ್ದು ತನಿಖೆ ನಡೆಸಬೇಕು. ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.
ಕೋಲಾರ : ರಾಜ್ಯ ಸರ್ಕಾರದ ಎಲ್ಲ ನಿಗಮಗಳಲ್ಲಿ ಹಗರಣ ನಡೆದಿದ್ದು ತನಿಖೆ ನಡೆಸಬೇಕು. ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.
ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಡಾದಲ್ಲಿ ೫ ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಮುಡಾ ಕಚೇರಿಯಲ್ಲಿ ಇ.ಡಿ ದಾಳಿ ನಡೆದಿದ್ದು, ಸರಿಯಾಗಿ ದಾಖಲೆ ನೀಡುತ್ತಿಲ್ಲ. ತನಿಖೆಗೆ ಅಡ್ಡಿಪಡಿಸುತ್ತಿರುವ ಮುಖ್ಯಮಂತ್ರಿ ಅಧಿಕಾರದಲ್ಲಿ ಇರಬಾರದು ಎಂದರು.ಮುಡಾ ದಾಖಲೆಗಳ ತಿದ್ದುಪಡಿ
ಕೇಂದ್ರ ಸರ್ಕಾರ ಇ.ಡಿ, ಸಿಬಿಐಯನ್ನು ದುರ್ಬಳಕೆ ಮಾಡುತ್ತಿದೆ ಎಂಬುದಾಗಿ ರಾಜ್ಯ ಸರ್ಕಾರದ ಸಚಿವರು ಟೀಕಿಸುತ್ತಿದ್ದಾರೆ. ಇದನ್ನು ಸಚಿವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಸುತ್ತಿದ್ದಾರೆ. ಮುಡಾ ನಿವೇಶನನಕ್ಕೂ ತಮಗೂ ಸಂಬಂಧ ಇಲ್ಲವೆಂದ ಸಿದ್ದರಾಮಯ್ಯ ೬೫ ಕೋಟಿ ರುಪಾಯಿ ಕೊಟ್ಟರೆ ನಿವೇಶನಗಳನ್ನು ಬಿಟ್ಟುಕೊಡುವುದಾಗಿ ಹೇಳಿದ್ದು ಏಕೆ, ದಾಖಲೆಗಳನ್ನು ವೈಟ್ನರ್ ಹಾಕಿ ತಿದ್ದುಪಡಿಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಸರಿ ಇದೆ ಎಂದು ನ್ಯಾಯಾಲಯ ಕೂಡ ಹೇಳಿದೆ. ಭ್ರಷ್ಟಾಚಾರ ಮಾಡಿಲ್ಲ ಎನ್ನುವುದಾದರೆ ನಿವೇಶನ ಏಕೆ ವಾಪಸ್ ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ನೀಡಿದ್ದಾರೆ. ಆದರೆ, ರಾಜೀನಾಮೆ ನೀಡಲು ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಕರಪ್ಷನ್ ಪಕ್ಷ
ಅದು ಕಾಂಗ್ರೆಸ್ ಅಲ್ಲ, ಇಂಡಿಯನ್ ನ್ಯಾಷನಲ್ ಕರಪ್ಷನ್ ಪಾರ್ಟಿ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರರುವ ಹಗರಣದ ಹಿಂದಿನ ರೂವಾರಿ ಯಾರು, ಅವ್ಯವಹಾರ ನಡೆದಿರುವುದು ೧೮೭ ಕೋಟಿ ಅಲ್ಲ ೮೭ ಕೋಟಿ ಎಂದು ಮುಖ್ಯಮಂತ್ರಿ ವಿಧಾನಸಭೆ ಅಧಿವೇಶನದಲ್ಲಿ ಹೇಳಲಿಲ್ಲವೇ ಎಂದರು.
ತಮ್ಮನ್ನು ಔಟ್‌ಡೇಟೆಡ್ ಎಂದು ಎಂಎಲ್ಸಿ ನಸೀರ್ ಅಹ್ಮದ್ ಹೇಳಿದ್ದಾರೆ. ಅವರಂತೆ ತಾವು ನಾಮಿನೇಟೆಡ್ ಆಗಿರಲಿಲ್ಲ. ಏಳು ಲಕ್ಷ ಜನ ವೋಟ್ ಹಾಕಿ ಗೆಲ್ಲಿಸಿದ್ದರು. ಕೋಲಾರಕ್ಕೆ ನಸೀರ್ ಕೊಡುಗೆ ಏನು ಇಲ್ಲ. ೨೦೨೮ಕ್ಕೆ ನೋಡೋಣ. ಯಾರು ಔಟ್ ಡೇಟೆಡ್ ಎಂಬುದು ಗೊತ್ತಾಗುತ್ತದೆ. ಅವರು ಸ್ವಜನಪಕ್ಷಪಾತಿ. ಕೋಲಾರ ಮುಸ್ಲಿಮರ ಬಡಾವಣೆಗೆ ಬೀದಿದೀಪ ಕೊಡುವ ಯೋಗ್ಯತೆಯೂ ಅವರಿಗಿಲ್ಲ. ಮುಂದಿನ ದಿನಗಳಲ್ಲಿ ಅವರ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಕಾರ್ಯ ಸ್ಥಗಿತ
ಬೇಲಿ ಎದ್ದು ಹೊಲ ಮೇಯುತ್ತಿದೆ. ನಗರಸಭೆಯಲ್ಲಿ ಜಿಲ್ಲಾಧಿಕಾರಿ ಆಡಳಿತಾಧಿಕಾರಿ ಆಗಿದ್ದಾಗ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.