;Resize=(412,232))
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ಸ್ಟಿಂಗ್ ಆಪರೇಷನ್ ಸಂಬಂಧ ಶನಿವಾರ ನಾಟಕೀಯ ಬೆಳವಣಿಗೆ ನಡೆದಿದ್ದು, ಪ್ರಕರಣದಲ್ಲಿ ಬೆಳಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಂದ ಬಂಧಿತನಾಗಿ ಸಂಜೆ ವೇಳೆಗೆ ಜಾಮೀನು ಪಡೆದು ದೆಹಲಿ ಮೂಲದ ವ್ಯಕ್ತಿ ಬಿಡುಗಡೆಯಾಗಿದ್ದಾನೆ.
ಪ್ರಕರಣದಲ್ಲಿ ಮೊದಲ ಬಂಧನವೂ ಇದಾಗಿದೆ. ದೆಹಲಿ ಮೂಲದ ರಿತೇಶ್ ಪಾಂಡೆ ಬಂಧಿತನಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸ್ಟಿಂಗ್ ಆಪರೇಷನ್ ವಿಡಿಯೋಗಳ ಹಂಚಿಕೆ ಹಾಗೂ ಆ ವಿಡಿಯೋಗಳ ಅಪ್‌ಲೋಡ್‌ಗೆ ಬಳಕೆಯಾಗಿದ್ದ ಎರಡು ಮೊಬೈಲ್‌ಗಳ ಖರೀದಿಯಲ್ಲಿ ಪಾಂಡೆ ಪಾತ್ರವಹಿಸಿದ್ದಾನೆ. ದೆಹಲಿಯಲ್ಲಿ ತಾಂತ್ರಿಕ ಮಾಹಿತಿ ಆಧರಿಸಿ ಆತನನ್ನು ಬಂಧಿಸಿ ನಗರಕ್ಕೆ ಪೊಲೀಸರು ಕರೆತಂದಿದ್ದರು. ತರುವಾಯ ಶನಿವಾರ ಸಂಜೆ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದರು. ಆಗ ಆತನಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಜಾಮೀನು ಪಡೆದ ಬೆನ್ನಲ್ಲೇ ರಿತೇಶ್ ಪಾಂಡೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಪಾಂಡೆಗೆ ಕೊಟ್ಟವರ ಬಗ್ಗೆ ಮಾಹಿತಿ ಪಡೆಯಬೇಕಿದೆ. ಆದರೆ ಈವರೆಗಿನ ವಿಚಾರಣೆ ವೇಳೆ ಈ ಬಗ್ಗೆ ಆರೋಪಿ ನಿಖರವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಮತ್ತೆ ಆತನನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಮೂಲಗಳು ಹೇಳಿವೆ.