ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪಟ್ಟಿ ಒಂದೇ ಬಾರಿಗೆ ಬಿಡುಗಡೆ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork | Updated : Feb 13 2024, 07:42 AM IST

ಸಾರಾಂಶ

ಮಂಡ್ಯ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪಟ್ಟಿ ಒಂದೇ ಬಾರಿಗೆ ಬಿಡುಗಡೆಯಾಗಲಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಂಡ್ಯ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪಟ್ಟಿ ಒಂದೇ ಬಾರಿಗೆ ಬಿಡುಗಡೆಯಾಗಲಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನರು ನಮ್ಮ ಕುಟುಂಬದ ಮೇಲೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಿಂದ ಕುಮಾರಸ್ವಾಮಿ ಅವರನ್ನು ಸ್ಪರ್ಧಿಸುವಂತೆ ಒತ್ತಡ ಹಾಕುತ್ತಿದ್ದಾರೆ. 

ಆದರೆ, ಅವರ ಸ್ಪರ್ಧೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ರಾಜ್ಯ ರಾಜಕಾರಣದಲ್ಲಿಯೇ ಉಳಿಯಬೇಕು ಎನ್ನುವುದು ಸಹ ಕೆಲವು ಶಾಸಕರು, ಮುಖಂಡರ ಅಭಿಪ್ರಾಯವಾಗಿದೆ ಎಂದರು.

ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳಾಗಲು ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಹಲವು ನಾಯಕರ ಆಕಾಂಕ್ಷಿತರ ದಂಡೇ ಇದೆ. 

ಅಭ್ಯರ್ಥಿಯನ್ನು ತೀರ್ಮಾನಿಸುವ ಜವಾಬ್ದಾರಿ ಪಕ್ಷ ವರಿಷ್ಠರು, ಹೈಕಮೆಂಡ್ ನಾಯಕರಿಗೆ ಬಿಟ್ಟಿದ್ದು ಎಂದರು.

ಕೇವಲ ಮಂಡ್ಯ ಕ್ಷೇತ್ರ ಮಾತ್ರವಲ್ಲಿ ಒಂದೇ ಬಾರಿ ರಾಜ್ಯದ ಕ್ಷೇತ್ರಗಳ ಬಿಜೆಪಿ+ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಮದ್ದೂರಿನಲ್ಲಿ ಶಾಸಕ ಕೆ.ಎಂ.ಉದಯ್ ಹೇಳಿಕೆಗೆ ಕಾಲವೇ ಉತ್ತರಿಸಲಿದೆ ಎಂದು ನಯವಾಗಿ ಪ್ರತಿಕ್ರಿಯಿಸಿದರು.

ಎಚ್ಡಿಕೆ, ನಿಖಿಲ್ ಸ್ಪರ್ಧೆ ಮಾಡಬೇಕು ಒತ್ತಾಯ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮಂಡ್ಯ ಲೋಕಸಭೆಗೆ ನಮ್ಮ ಪಕ್ಷದ ನಾಯಕರಾದ ಎಚ್.ಡಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಬೇಕು ಎನ್ನುವುದು ನಮ್ಮ ಎಲ್ಲಾ ನಾಯಕ ಬೇಡಿಕೆಯಾಗಿದೆ ಎಂದರು.

ಕಳೆದ ಚುನಾವಣೆಯಲ್ಲಿ ನಿಖಿಲ್ ಅವರಿಗೆ ಅನ್ಯಾಯವಾಗಿತ್ತು. ಅವರಿಗೆ ಈ ಚುನಾವಣೆಯಲ್ಲಿ ಅವಕಾಶ ಕೊಡಬೇಕು ಎನ್ನುವುದು ನಮ್ಮೆಲ್ಲರ ಒತ್ತಾಯವಾಗಿದೆ. 

ಈ ಬಗ್ಗೆ ನಮಗೆ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತೆ ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.

ನಿಖಿಲ್ ಅವರಿಗೆ ಮಂಡ್ಯ ಜಿಲ್ಲೆಯ ಜನ ಕಳೆದ ಬಾರಿ ಮನಸ್ಸಿಗೆ ನೋವು ಮಾಡಿದ್ದೇವೆ. ಅದನ್ನು ಸರಿ ಪಡಿಸಲು ಈಗಲೂ ನಿಖಿಲ್ ಅಭ್ಯರ್ಥಿ ಆಗಬೇಕೆಂದು ಕೇಳಿಕೊಳ್ಳುತ್ತೇವೆ. ಕುಮಾರಣ್ಣ ಅಥವಾ ನಿಖಿಲ್ ಇಬ್ಬರಲ್ಲಿ ಯಾರೇ ಬಂದರು ಸ್ವಾಗತ ಮಾಡುತ್ತೇವೆ ಎಂದರು.

ಈ ವೇಳೆ ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ಜೆಡಿಎಸ್ ಯುವ ಮುಖಂಡ ಶಿವರಾಜ್ ಪುಟ್ಟರಾಜು ಸೇರಿದಂತೆ ಹಲವರು ಇದ್ದರು.

Share this article