ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಎಲ್.ಆರ್.ಶಿವರಾಮೇಗೌಡರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸುದ್ದಿಗಾರರೊಂದಿಗೆ ಖಂಡಿಸಿ, ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಾಗ ಎಲ್‌ಆರ್ ಎಸ್ ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ರಾಷ್ಟ್ರೀಯ ಪಕ್ಷದಿಂದ ಪತ್ನಿಯನ್ನು ನಿಲ್ಲಿಸಿ ಹೀನಾಯ ಸೋಲು ಕಂಡಿದ್ದರೂ ಎಲ್.ಆರ್.ಎಸ್ ಪಾಠ ಕಲಿತಿಲ್ಲ. ನಾಗಮಂಗಲ ಜನತೆ ನಿಮಗೆ ಯಾವ ರೀತಿ ಗೌರವ ಕೊಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಲೇವಡಿ ಮಾಡಿದರು.ರಾಜಕೀಯವಾಗಿ ಮೂಲೆಗುಂಪಾಗಿದ್ದ ಶಿವರಾಮೇಗೌಡರನ್ನು ಸಂಸದರನ್ನಾಗಿ ಮಾಡಿದ್ದು ಜೆಡಿಎಸ್, ದೇವೇಗೌಡರ ಕುಟುಂಬ. ಆದರೆ, ಅದಕ್ಕೂ ಮುನ್ನ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಎದುರು ಹೀನಾಯವಾಗಿ ಸೋಲು ಕಂಡಿದ್ದೀರಿ ಎಂದು ಕಿಡಿಕಾರಿದರು.
ನಾಗಮಂಗಲ ಕ್ಷೇತ್ರದ ಮತದಾರರು ನಿಮ್ಮನ್ನು ಕ್ಷೇತ್ರದಿಂದ ಓಡಿಸಿದ್ದಾರೆ. ಇದನ್ನು ಮೊದಲು ಅರಿಯಬೇಕು. ಶಿವರಾಮೇಗೌಡ ಓರ್ವ ಪಕ್ಷಾಂತರಿ ನಾಯಕ. ಆತನಿಂದ ನಮ್ಮ ನಾಯಕರು ಕಲಿಯುವಂತದ್ದು ಏನೂ ಇಲ್ಲ. ನಿಮಗೆ ಆತ್ಮಸಾಕ್ಷಿ ಇದ್ದರೆ ಎಚ್ಡಿಕೆ ಬಗ್ಗೆ ಮಾತನಾಡುತ್ತಿರಲಿಲ್ಲ ಆಕ್ರೋಶ ವ್ಯಕ್ತಪಡಿಸಿದರು.
ನಿಖಿಲ್ ಗೆಲುವು ನಿಶ್ಚಿತ:
ರಾಜ್ಯ ಮೂಲೆ ಮೂಲೆಯಿಂದಲೂ ಜೆಡಿಎಸ್ ಕಾರ್ಯಕರ್ತರು ಚನ್ನಪಟ್ಟಣದಲ್ಲಿ ಬೀಡುಬಿಟ್ಟು ನಿಖಿಲ್ ಪರ ಪ್ರಚಾರ ಮಾಡುತ್ತಿದ್ದಾರೆ. ಚನ್ನಪಟ್ಟಣದ ಯುವಕರು ತನ್ನ ನಾಯಕನನ್ನು ನಿಖಿಲ್ ಮೂಲಕ ಕಂಡುಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಉತ್ಸಾಹದಿಂದ ನಿಖಿಲ್ ಪರ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಮತದಾರರು ಭ್ರಮನಿರಸನಗೊಂಡಿದ್ದು ನಿಖಿಲ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.