;Resize=(412,232))
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರದಿಂದ ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆರೋಪಿಸಿ ಎನ್‌ಡಿಎ ಮೈತ್ರಿ ಕೂಟದ ಬಿಜೆಪಿ-ಜೆಡಿಎಸ್ ನಾಯಕ ನಿಯೋಗವು ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಪ್ರತಿ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿ ಉಭಯ ಪಕ್ಷಗಳ ಹಲವು ನಾಯಕರು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರನ್ನು ಭೇಟಿಯಾಗಿ ಪೆನ್‌ಡ್ರೈವ್ ದಾಖಲೆ ಸಹಿತ ಲಿಖಿತ ದೂರು ನೀಡಿದರು.
‘ರಾಜ್ಯದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ತೀವ್ರ ಅಕ್ರಮ ನಡೆಯುತ್ತಿರುವುದರಿಂದ ವಿಶ್ವಾಸಾರ್ಹವಲ್ಲದ ಹಾಗೂ ದೋಷಪೂರಿತ ಮತದಾರರ ಪಟ್ಟಿ ಸೃಷ್ಟಿಯಾಗುವ ಅಪಾಯವಿದೆ. ಈ ಅಕ್ರಮ ಕುರಿತು ತ್ವರಿತವಾಗಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ರಮಗಳು ನಡೆದಿರುವ ಪ್ರದೇಶಗಳಲ್ಲಿ ಮರು ಎಸ್‌ಐಆರ್ ನಡೆಸಬೇಕು’ ಎಂದು ಎನ್‌ಡಿಎ ಮೈತ್ರಿಕೂಟದ ನಾಯಕರ ನಿಯೋಗ ಆಗ್ರಹಿಸಿದೆ.
ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿದ ಮಾರ್ಗಸೂಚಿ ಮತ್ತು ಕಾರ್ಯವಿಧಾನಗಳ ಮೂಲಕವೇ ಎಸ್‌ಐಆರ್ ನಡೆಯಬೇಕು. ಬಿಎಲ್‌ಒಗಳು ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸಬೇಕು. ಆದರೂ ರಾಜ್ಯದ ಹಲವೆಡೆ ಈ ನಿಯಮಗಳನ್ನು ಪಾಲಿಸದೆ ಸಮುದಾಯ ಭವನ, ಮಸೀದಿ ಹಾಗೂ ಬಿಎಲ್‌ಒಗಳ ಮನೆಗಳಲ್ಲಿ ಗಣತಿ ನಮೂನೆ ಭರ್ತಿ ಮಾಡಲಾಗುತ್ತಿದೆ. ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿ ಮತದಾರರನ್ನು ಒಂದು ಸ್ಥಳಕ್ಕೆ ಕರೆಸಿಕೊಂಡು ಗಣತಿ ನಮೂನೆ ಭರ್ತಿ ಮಾಡಿಸಲಾಗುತ್ತಿದೆ ಎಂದು ದೂರಲಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಫೋಟೋಗಳು ಹರಿದಾಡುತ್ತಿವೆ. ಮಾಧ್ಯಮಗಳು ಸಹ ಸುದ್ದಿ ಪ್ರಸಾರ ಮಾಡಿವೆ. ಈ ರೀತಿಯ ಬೆಳವಣಿಗೆಗಳು ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆ, ಚುನಾವಣಾ ಪ್ರಕ್ರಿಯೆ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. ಇವುಗಳು ಎಸ್‌ಐಆರ್‌ನ ಮೂಲ ಉದ್ದೇಶವನ್ನೇ ಸೋಲಿಸುತ್ತವೆ ಎಂದು ನಿಯೋಗವು ದೂರಿನಲ್ಲಿ ಉಲ್ಲೇಖಿಸಿದೆ.
ಹೀಗಾಗಿ ಈ ಅಕ್ರಮಗಳ ಬಗ್ಗೆ ತಕ್ಷಣ ತನಿಖೆಗೆ ಆದೇಶಿಸಬೇಕು. ಬಿಎಲ್‌ಒಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ಗಣತಿ ನಮೂನೆ ನೀಡಬೇಕು. ಈ ಅಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲಾ ಅಧಿಕಾರಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎನ್‌ಡಿಎ ಮೈತ್ರಿಕೂಟದ ನಾಯಕರು ಆಗ್ರಹಿಸಿದ್ದಾರೆ.
- ರಾಜ್ಯದ ಹಲವೆಡೆ ಮನೆ-ಮನೆ ಭೇಟಿ ಬದಲು ಸಮುದಾಯ ಭವನ, ಮಸೀದಿ, ಬಿಎಲ್‌ಒಗಳ ಮನೆಯಲ್ಲಿ ಗಣತಿ ನಮೂನೆ ಭರ್ತಿ
- ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿ ಮತದಾರರನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡು ಗಣತಿ ನಮೂನೆ ಭರ್ತಿ
- ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಫೋಟೋ ಹರಿದಾಡುತ್ತಿವೆ, ಮಾಧ್ಯಮಗಳೂ ವರದಿ ಮಾಡಿವೆ
- ಇಂಥ ಬೆಳವಣಿಗೆಗಳಿಂದ ಮತದಾರರ ಪಟ್ಟಿ ನಿಖರತೆ, ಪಾರದರ್ಶಕತೆ, ಚುನಾವಣಾ ಪ್ರಕ್ರಿಯೆ ವಿಶ್ವಾಸಾರ್ಹತೆಗೆ ಧಕ್ಕೆ
- ಈ ಬೆಳವಣಿಗೆಗಳಿಂದ ಮತದಾದರ ಪಟ್ಟಿ ವಿಶೇಷ ಪರಿಷ್ಕರಣೆಯ ಮೂಲ ಉದ್ದೇಶಕ್ಕೇ ಸೋಲುಂಟಾಗುತ್ತದೆ
ರಾಜ್ಯದಲ್ಲಿ ಎಸ್ಐಆರ್ ಅಕ್ರಮಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡಿದ್ದು, ಡಿ.ಕೆ.ಶಿವಕುಮಾರ್ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದಾರೆ. ಧಮ್ಕಿಯಿಂದ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ;
- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಆಶಯವೇ ಬುಡಮೇಲು
ರಾಜ್ಯ ಕಾಂಗ್ರೆಸ್ ಸರ್ಕಾರವು ಅಕ್ರಮ ಮತಗಳನ್ನು ಉಳಿಸಿಕೊಂಡು ಲಾಭ ಮಾಡಿಕೊಳ್ಳಲು ಆಡಳಿತ ಯಂತ್ರ ದುರುಪಯೋಗ ಮಾಡಿಕೊಳ್ಳುತ್ತಿದೆ, ಎಸ್‌ಐಆರ್ ಮೂಲ ಆಶಯವನ್ನೇ ಬುಡಮೇಲು ಮಾಡಲು ಹೊರಟಿದೆ.
- ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ನಿಯೋಗದ ವಾದವೇನು?
- ಅಕ್ರಮ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು
- ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು
- ಅಕ್ರಮ ನಡೆದಿರುವ ಕಡೆ ಮರು ಎಸ್‌ಐಆರ್ ನಡೆಸಬೇಕು
- ಚುನಾವಣಾಧಿಕಾರಿ ಅನ್ಬು ಕುಮಾರ್‌ಗೆ ವಿಪಕ್ಷ ಒತ್ತಾಯ
- ಜೋಶಿ, ಎಚ್ಡಿಕೆ, ಶೋಭಾ, ಅಶೋಕ್, ಇತರರ ಉಪಸ್ಥಿತಿ