ಬಹಿರಂಗ ಹೇಳಿಕೆ ನೀಡದೆ ತೆಪ್ಪಗಿರಿ : ಪಕ್ಷದಲ್ಲಿ ಗೊಂದಲ ಸೃಷ್ಟಿಸದಂತೆ ರಾಜಣ್ಣಗೆ ಖರ್ಗೆ ಎಚ್ಚರಿಕೆ

ಸಾರಾಂಶ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಅನಗತ್ಯವಾಗಿ ಹೇಳಿಕೆ ನೀಡದಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಅನಗತ್ಯವಾಗಿ ಹೇಳಿಕೆ ನೀಡದಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಪ್ರಸ್ತಾಪ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ರಾಜಣ್ಣ ಅವರಿಗೆ ಖರ್ಗೆ ಎಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆ ಮಾತನಾಡುತ್ತಿದ್ದ ರಾಜಣ್ಣ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಸಿದ್ದರಾಮಯ್ಯ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂಬ ಡಿ.ಕೆ.ಶಿವಕುಮಾರ್ ಸಲಹೆಗೆ ಪ್ರತಿಕ್ರಿಯೆಯಾಗಿ, ‘ಡಿ.ಕೆ.ಶಿವಕುಮಾರ್‌ ಅವರೇ ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಅದನ್ನು ನಿಲ್ಲಿಸಲಿ. ಅವರ ಎಚ್ಚರಿಕೆ ಗಿಚ್ಚರಿಕೆ ಎಲ್ಲ ನಡೆಯಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರಿಗೆ ಖುದ್ದು ಖರ್ಗೆ ಅವರೇ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು‌. ಸೂಕ್ತ ಸಮಯದಲ್ಲಿ ನಾನು ಏನು ಮಾಡಬೇಕೋ ಮಾಡುತ್ತೇನೆ. ಅನಗತ್ಯವಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ. ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡಬೇಡಿ ಎಂದು ತಿಳಿಸಿದ್ದಾಗಿ ಹೇಳಲಾಗಿದೆ. 

 - ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದ ರಾಜಣ್ಣ

- ಸಿದ್ದು ಹೆಸರು ದುರ್ಬಳಕೆ ಮಾಡಿಕೊಳ್ಳಬೇಡಿ ಎಂಬ ಡಿಕೆಶಿ ಮಾತಿಗೂ ಸಡ್ಡು

- ಅಧ್ಯಕ್ಷರ ವಿರುದ್ಧವೇ ಹೇಳಿಕೆ. ಈ ಹಿನ್ನೆಲೆಯಲ್ಲಿ ರಾಜಣ್ಣ ಜತೆ ಖರ್ಗೆ ಮಾತು

- ಏನು ಮಾಡಬೇಕೋ ಅದನ್ನು ಸೂಕ್ತವಾದ ಸಮಯದಲ್ಲಿ ನಾವು ಮಾಡುತ್ತೇವೆ

- ನೀವು ಗೊಂದಲ ಸೃಷ್ಟಿಸಬೇಡಿ, ಬಹಿರಂಗ ಹೇಳಿಕೆ ಕೊಡಬೇಡಿ ಎಂದು ಸೂಚನೆ

Share this article