ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆ.28ರಂದು ನಿಗದಿಯಾಗಿದ್ದು, ಜೆಡಿಎಸ್‌ನಲ್ಲಿ ನಿಷ್ಠೆ ಕಾಯ್ದುಕೊಂಡಿರುವ 17 ಸದಸ್ಯರು ಈಗಾಗಲೇ ದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿಕೊಂಡು ಬಂದಿದ್ದಾರೆ.
ಮಂಡ್ಯ : ನಗರಸಭೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರ ಪಕ್ಷಾಂತರ ತಡೆಗೆ ಹೈಕಮಾಂಡ್ ವ್ಹಿಪ್ ಅಸ್ತ್ರ ಬಳಸಿದೆ.
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆ.28ರಂದು ನಿಗದಿಯಾಗಿದ್ದು, ಜೆಡಿಎಸ್‌ನಲ್ಲಿ ನಿಷ್ಠೆ ಕಾಯ್ದುಕೊಂಡಿರುವ 17 ಸದಸ್ಯರು ಈಗಾಗಲೇ ದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿಕೊಂಡು ಬಂದಿದ್ದಾರೆ. ಎಲ್ಲರೂ ಒಗ್ಗಟ್ಟಾಗಿರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎಚ್.ಎಸ್.ಮಂಜು ಅವರು ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ತಮ್ಮ ಪ್ರಭಾವ ಬೀರಿ ಹಳೇ ಮೀಸಲನ್ನೇ ಮತ್ತೆ ನಿಗದಿಪಡಿಸಿಕೊಂಡು ಬಂದಿರುವ ಅವರು ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆ ಬಯಸಿ ಜೆಡಿಎಸ್ ಪಕ್ಷದವರನ್ನು ಸೆಳೆಯುವ ತಂತ್ರ ನಡೆಸುತ್ತಿದ್ದಾರೆ.
ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಜೆಡಿಎಸ್ ಈಗಾಗಲೇ ಎಚ್.ಎಸ್.ಮಂಜು ಸೇರಿದಂತೆ ಪಕ್ಷದ 18 ಸದಸ್ಯರಿಗೂ ವ್ಹಿಪ್ ಜಾರಿಗೊಳಿಸಿದೆ. ಅಷ್ಟೇ ಅಲ್ಲದೇ, ಸದಸ್ಯರಿಂದ ಸ್ವೀಕೃತಿ ಪತ್ರವನ್ನೂ ಜಿಲ್ಲಾಧ್ಯಕ್ಷರು ಪಡೆದುಕೊಂಡಿದ್ದಾರೆ. ಆ ಮೂಲಕ ಸದಸ್ಯರ ಪಕ್ಷಾಂತರಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ನಗರ ಸಭೆಯಲ್ಲಿ ಬಿಜೆಪಿಯ ಇಬ್ಬರು ಸದಸ್ಯರಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೂಲಕ ಆ ಸದಸ್ಯರಿಗೂ ಕಟ್ಟುನಿಟ್ಟಿನ ಸೂಚನೆ ಕೊಡಿಸಲಾಗಿದೆ. ಸಂಸದರೂ ಸೇರಿದಂತೆ 20 ಸದಸ್ಯರ ಬಲವನ್ನು ಕೊನೆಯವರೆಗೂ ಕಾಯ್ದುಕೊಳ್ಳುವುದಕ್ಕೆ ಜೆಡಿಎಸ್ ಟೊಂಕಕಟ್ಟಿ ನಿಂತಿದೆ.
ಜೆಡಿಎಸ್ ಪಕ್ಷದಿಂದ ಒಂದನೇ ವಾರ್ಡ್‌ನ ನಾಗೇಶ್, ೩೩ನೇ ವಾರ್ಡ್‌ನ ವಿದ್ಯಾ ಮಂಜುನಾಥ್, 15ನೇ ವಾರ್ಡ್‌ನ ಮೀನಾಕ್ಷಿ ಪುಟ್ಟಸ್ವಾಮಿ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ಅಂತಿಮವಾಗಿ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.
ಪಕ್ಷೇತರ ಸದಸ್ಯರು ಬಹುತೇಕ ಎಚ್.ಎಸ್.ಮಂಜು ಅವರ ಪರವಾಗಿ ನಿಂತಿರುವಂತೆ ಕಂಡುಬರುತ್ತಿದ್ದಾರೆ. ಎಚ್.ಎಸ್.ಮಂಜು ಸೇರಿದಂತೆ ಕಾಂಗ್ರೆಸ್‌ನಲ್ಲಿ ಈಗ 11 ಸದಸ್ಯರಿದ್ದಾರೆ. ಪಕ್ಷೇತರ-5, ಇಬ್ಬರು ಶಾಸಕರು ಸೇರಿ 18 ಮಂದಿ ಇದ್ದಾರೆ. ಎಚ್.ಎಸ್.ಮಂಜು ಅಧಿಕಾರಕ್ಕೇರಬೇಕಾದರೆ ಮೂವರು ಸದಸ್ಯರ ಅವಶ್ಯಕತೆ ಇದೆ. ಜೆಡಿಎಸ್ ಪಕ್ಷದಿಂದಲೇ ಸದಸ್ಯರನ್ನು ಸೆಳೆಯಬೇಕಿದ್ದು, ಸದ್ಯಕ್ಕೆ ಜೆಡಿಎಸ್‌ನ 17 ಸದಸ್ಯರೂ ಒಗ್ಗಟ್ಟಾಗಿದ್ದಾರೆ. ಚುನಾವಣೆ ವೇಳೆಗೆ ಏನಾದರೂ ರಾಜಕೀಯ ಬೆಳವಣಿಗೆಗಳಾಗಬಹುದೇ ಎಂಬುದನ್ನು ಕಾದುನೋಡಬೇಕಿದೆ.
ನಮ್ಮ ಪಕ್ಷದಲ್ಲಿ 17 ಸದಸ್ಯರು ಒಗ್ಗಟ್ಟಾಗಿದ್ದಾರೆ. ಎಲ್ಲಾ ಸದಸ್ಯರಿಗೂ ವ್ಹಿಪ್ ಜಾರಿ ಮಾಡಿ ಸ್ವೀಕೃತಿ ಪತ್ರ ಪಡೆದುಕೊಂಡಿದ್ದೇವೆ. ಪಕ್ಷಾಂತರ ಮಾಡುವವರು ಯಾರೂ ನಮ್ಮಲ್ಲಿ ಇಲ್ಲ. ಪಕ್ಷಾಂತರ ಯತ್ನ ಮಾಡಿದರೆ ಕಾನೂನಾತ್ಮಕವಾಗಿ ಅವರ ವಿರುದ್ಧ ಕ್ರಮ ಆಗಲಿದೆ. ಸದಸ್ಯತ್ವವನ್ನು ಕಳೆದುಕೊಂಡು ಅನರ್ಹರಾಗಬೇಕಾಗುತ್ತದೆ.
- ಡಿ.ರಮೇಶ್, ಜೆಡಿಎಸ್ ಜಿಲ್ಲಾಧ್ಯಕ್ಷರು
ಮುನ್ನಾರ್‌ನಲ್ಲಿ ಬೀಡುಬಿಟ್ಟ ಜೆಡಿಎಸ್-ಬಿಜೆಪಿ ಸದಸ್ಯರು..!
ಮಂಡ್ಯ ನಗರಸಭೆ ಚುನಾವಣೆ ಆ.28 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ 19 ಸದಸ್ಯರು ಕೇರಳದ ಮುನ್ನಾರ್‌ನಲ್ಲಿ ಬೀಡುಬಿಟ್ಟಿದ್ದಾರೆ. ಚುನಾವಣೆ ನಡೆಯುವ ಹಿಂದಿನ ದಿನದವರೆಗೂ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಅಧಿಕಾರ ಸಿಗಬಾರದು, ಜೆಡಿಎಸ್-ಬಿಜೆಪಿ ಸದಸ್ಯರು ಕಾಂಗ್ರೆಸ್‌ನವರು ಒಡ್ಡುವ ಆಮಿಷಗಳಿಗೆ ಒಳಗಾಗದಂತೆ ತಡೆಯಲು ಎಲ್ಲರನ್ನೂ ಕೇರಳ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಎಚ್.ಎಸ್.ಮಂಜು ಅವರು ಜೆಡಿಎಸ್-ಬಿಜೆಪಿ ಸದಸ್ಯರನ್ನು ಸೆಳೆಯಬಹುದೆಂಬ ಉದ್ದೇಶದಿಂದ ಚುನಾವಣೆ ದಿನದವರೆಗೂ ಅಲ್ಲೇ ವಾಸ್ತವ್ಯ ಹೂಡುವಂತೆ ಮಾಡಿ ಚುನಾವಣೆ ದಿನವಾದ ಆ.28 ರಂದು ಬೆಳಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ಆಗಮಿಸಲು ನಿರ್ಧರಿಸಿದ್ದಾರೆ.
ಆ.28ರಂದು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ
ಮಂಡ್ಯ ನಗರಸಭೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆ.28ರಂದು ನಡೆಯಲಿದೆ ಎಂದು ಉಪ ವಿಭಾಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಮಧ್ಯಾಹ್ನ 12 ಗಂಟೆಗೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಸಲಾಗುವುದು. ನಿಗದಿತ ನಮೂನೆಯಲ್ಲಿ ನಾಮಪತ್ರವನ್ನು ನಗರಸಭೆಯ ಯಾವುದೇ ಚುನಾಯಿತ ಸದಸ್ಯರು ಸಭೆ ನಡೆಯಲು ನಿಗದಿಯಾಗಿರುವ ದಿನದಂದು ಸಭೆ ಪ್ರಾರಂಭವಾಗಲು ನಿಗದಿಪಡಿಸಿದ ಸಮಯಕ್ಕೆ ಎರಡು ಗಂಟೆ ಮುಂಚಿತವಾಗಿ ಅಂದರೆ ಬೆಳಗ್ಗೆ 9 ರಿಂದ 10 ಗಂಟೆಯವರೆಗೆ ನಗರಸಭೆ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗೆ ನೀಡತಕ್ಕದ್ದು. ನಿಯಮ ೫ರ ತೀತ್ಯಾ ಒಬ್ಬ ಸದಸ್ಯರು ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬ ಅಭ್ಯರ್ಥಿಯನ್ನು ಸೂಚಿಸುವುದು. ಸಭೆ ಪ್ರಾರಂಭವಾದ ಕೂಡಲೇ ನಾಮಪತ್ರಗಳ ಪರಿಶೀಲನೆ ನಡೆಸಿ ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ನಿಗದಿ
ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ
ಶ್ರೀರಂಗಪಟ್ಟಣ:ಪಟ್ಟಣ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಿಗದಿಯಾಗಿದ್ದ ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಸರ್ಕಾರ ಮೀಸಲಿರಿಸಿತ್ತು. ಕಳೆದ ಬಾರಿ ಸಹ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಈ ಬಾರಿಯೂ ಅದೇ ಮೀಸಲಾತಿ ನಿಗದಿಪಡಿಸಿದ್ದು, ಮೀಸಲಾತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪುರಸಭಾ ಸದಸ್ಯ ಎಂ.ನಂದೀಶ್ ಈಗಾಗಲೇ ಪ್ರಕಟಿಸಿರುವ ಮೀಸಲಾತಿಯನ್ನು ಬದಲಿಸುವಂತೆ ಹೈಕೋರ್ಟ್‌ನಲ್ಲಿ ತಡೆಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಹಿನ್ನೆಲೆಯಲ್ಲಿ ತಡೆಯಾಜ್ಞೆ ನೀಡಿದೆ.