ಕನ್ನಡಪ್ರಭ ವಾರ್ತೆ ಬೆಂಗಳೂರು
ಶನಿವಾರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಈ ಬಗ್ಗೆ ಟೀಕಿಸಿದ್ದು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಶಾಲಾ ಮಕ್ಕಳ ನಡುವೆ ಯಾವುದೇ ತಾರತಮ್ಯ ಇರಬಾರದು ಎನ್ನುವ ಕಾರಣಕ್ಕೆ ಸಮವಸ್ತ್ರ ಜಾರಿಗೆ ತರಲಾಗಿದೆ. ಆದರೆ ಕೇವಲ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಹಿಜಾಬ್ ನಿಷೇಧ ನಿರ್ಧಾರವನ್ನು ವಾಪಸ್ ಪಡೆಯುವ ತೀರ್ಮಾನವನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ಕೂಡಲೇ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಆಡಳಿತ ವೈಫಲ್ಯವನ್ನು ಮರೆಮಾಚಿ ಜನರ ದಾರಿ ತಪ್ಪಿಸಲು ಮತ್ತು ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಹಿಜಾಬ್ ವಿಷಯ ಪ್ರಸ್ತಾಪ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲೆಡೆ ಹಿಜಾಬ್ ನಿಷೇಧ ಆಗಿಯೇ ಇಲ್ಲ. ಯಾವ ಶಾಲೆಯಲ್ಲಿ ವಸ್ತ್ರಸಂಹಿತೆ ಇದೆ ಅಲ್ಲಿ ಮಾತ್ರ ನಿಷೇಧ ಇದೆ. ಮಹಿಳೆಯರು ಬೇರೆಡೆ ಎಲ್ಲಿ ಬೇಕೋ ಅಲ್ಲಿ ಹಿಜಾಬ್ ಹಾಕಿಕೊಳ್ಳಲು ಅವಕಾಶ ಇದೆ. ಹಿಜಾಬ್ ನಿಷೇಧವಾಗಿಯೇ ಇಲ್ಲ. ಅದನ್ನು ವಾಪಸ್ ಪಡೆಯುವ ಪ್ರಶ್ನೆ ಎಲ್ಲಿ ಬಂತು ಎಂದು ಕಿಡಿಕಾರಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಆಡಳಿತ ವೈಫಲ್ಯ ಮತ್ತು ಕೆಲವು ಮುಜುಗರ ತರುವ ಘಟನೆಗಳಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗಿದೆ. ಇದನ್ನೆಲ್ಲ ಮರೆಸಲು ಹಿಜಾಬ್ ನಿಷೇಧ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ್ದಾರೆ. ಕೋರ್ಟ್ ನಲ್ಲಿ ಹಿಜಾಬ್ ವಿಚಾರ ಇದ್ದರೂ ಈ ನಿರ್ಣಯ ಘೋಷಿಸಿರೋದು ಸರಿಯಲ್ಲ. ಹಿಜಾಬ್ ನಿಷೇಧ ವಾಪಸ್ ನಿರ್ಧಾರದ ವಿರುದ್ಧ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು.
ಸಿಎಂ ಬೇಜವಾಬ್ದಾರಿ ಹೇಳಿಕೆ:
ಶಾಲೆಗೆ ಹೋಗುವ ಮಕ್ಕಳನ್ನು ರಾಜಕೀಯದಲ್ಲಿ ಬಳಕೆ ಮಾಡಿಕೊಳ್ಳುವುದರಿಂದ ದೂರ ಇಡಬಹುದಾಗಿತ್ತು. ಆದರೆ, ರಾಜಕೀಯವಾಗಿ ಮಕ್ಕಳನ್ನು ಬಳಕೆ ಮಾಡಲು ಮುಂದಾಗಿದ್ದಾರೆ. ಇಂದಿಗೂ ಶೇ.50 ರಷ್ಟು ಅಲ್ಪಸಂಖ್ಯಾತರಿಗೆ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಅಲ್ಪಸಂಖ್ಯಾತರನ್ನ ಕೇವಲ ಓಟ್ ಬ್ಯಾಂಕ್ ಗಾಗಿ ಮಾತ್ರ ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.