;Resize=(412,232))
ನವದೆಹಲಿ : ನಾನು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇನೆ. ಆದರೆ ಯಾರು ಎಂದು ಹೇಳುವುದಿಲ್ಲ ಎಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದೆಹಲಿಗೆ ನಾನು ಗಾಳಿ ಕುಡಿಯಲು ಬಂದಿಲ್ಲ. ಬಿಸಿಲು ಇದೆ, ನೀರು ಕುಡಿಯಬೇಕಿದೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಮತ್ತು ಅಸ್ಸಾಂ ಚುನಾವಣೆ ಕುರಿತು ನಮ್ಮ ನಾಯಕರಿಗೆ ಮಾಹಿತಿ ನೀಡಬೇಕಿದೆ. ಹಾಗೆಯೇ ನಾಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭೇಟಿಗೆ ಅವಕಾಶ ಕೇಳಿದ್ದೇನೆ. ಬೆಂಗಳೂರು ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬದಲಾವಣೆಗಳ ಬಗ್ಗೆ ನಾನು ಮಾಧ್ಯಮಗಳ ಮುಂದೆ ಮಾತಾಡುವುದಿಲ್ಲ ಎಂದ ಅವರು, ಅಲ್ಪಸಂಖ್ಯಾತ ನಾಯಕರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಪ್ಪಿಲ್ಲ. ಕೆಲವು ಬಾರಿ ನಮ್ಮ ಕಡೆಯಿಂದ ತಪ್ಪಾಗಿಬಹುದು. ಕೆಲವು ಬಾರಿ ಅವರ ಕಡೆಯಿಂದ ತಪ್ಪಾಗಿರಬಹುದು ಎಂದು ತಿಳಿಸಿದರು.
ಇನ್ನು ಅಮಾನತು ವಾಪಸ್ ಪಡೆಯುವ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ, ಇದು ಅಮಾನತು ಅಲ್ಲ. ಬದಲಿಗೆ ಅವರೇ ರಾಜೀನಾಮೆ ಕೊಟ್ಟಿದ್ದಾರೆ. ಒಮ್ಮೆ ರಾಜೀನಾಮೆ ಪತ್ರ ವಿಶ್ಲೇಷಣೆ ಮಾಡಿ ಎಂದು ತಿಳಿಸಿದರು.
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಚಿವ ಸಂಪುಟ ಪುನರ್ ರಚನೆ ಸೇರಿದಂತೆ ಹಲವು ವಿಚಾರದ ಬಗ್ಗೆ ತೀರ್ಮಾನ ಆಗಬೇಕಿದೆ. ಅಹಿಂದ ಒಟ್ಟುಗೂಡಿಸುವ ಕೆಲಸ ಆಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಬುಧವಾರ ಸಂಜೆ ನಡೆದ ಸಚಿವರ ಸಭೆಯಲ್ಲಿ ಅಷ್ಟೇನೂ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ. ಅದು ಸರ್ಜರಿ ಅಲ್ಲ ಜನರಲ್ ಚೆಕಪ್ ಅಷ್ಟೇ ಎಂದರು.
ಸಚಿವ ಸಂಪುಟ ಪುನರ್ ರಚನೆ ಆಗಬೇಕು. ಅಧ್ಯಕ್ಷ ಸ್ಥಾನ ಬದಲಾವಣೆ ಸೇರಿದಂತೆ ಹಲವು ವಿಚಾರವಿದ್ದು, ಅವೆಲ್ಲಾ ತೀರ್ಮಾನ ಆಗಬೇಕಿದೆ.
ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಜಾರಿ ಬಗ್ಗೆ ಗೊಂದಲ ಉಂಟಾಗಿದೆ. ಹೀಗಾಗಿ ಶುಕ್ರವಾರ ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಈ ಬಗ್ಗೆಯೂ ಚರ್ಚೆಯಾಗಿದೆ. ಜತೆಗೆ ಅಲ್ಪಸಂಖ್ಯಾತರು ಒಂದೇ ವೇದಿಕೆ ಅಡಿ ಬರಬೇಕು. ಅವರು ಇಬ್ಭಾಗ ಆಗುವುದು ಪಕ್ಷಕ್ಕೆ ಒಳ್ಳೆಯದಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಹೇಳಿದ್ದೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.