ಸಚಿವ ಖಾದರ್‌ಗೆ ‘ಗ್ಲೋಬಲ್‌ ಲೀಡರ್‌ಶಿಪ್‌ ಅವಾರ್ಡ್‌’

Published : Jul 27, 2026, 07:49 AM IST
UT Khader

ಸಾರಾಂಶ

ಯು.ಟಿ.ಖಾದರ್‌ ಅವರು ಸಾರ್ವಜನಿಕ ಸೇವೆ, ಆರೋಗ್ಯ ಕ್ಷೇತ್ರ, ಸಾಮಾಜಿಕ ಕಲ್ಯಾಣ ಹಾಗೂ ನಾಗರಿಕ ನಾಯಕತ್ವದಲ್ಲಿ ಸಲ್ಲಿಸಿರುವ ಕೊಡುಗೆಗಳನ್ನು ಗುರುತಿಸಿ ಅವರಿಗೆ ಅಮೆರಿಕದ ಷಿಕಾಗೋ ನಗರದಲ್ಲಿ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ಅಮೆರಿಕನ್‌ ಮಲ್ಟಿ ಎಥ್ನಿಕ್‌ ಕಮಿಷನ್‌ (ಎ.ಎಂ.ಇ.ಸಿ.) ವತಿಯಿಂದ ‘ಗ್ಲೋಬಲ್‌ ಸಿವಿಕ್‌ ಲೀಡರ್‌ಶಿಪ್‌ ಅವಾರ್ಡ್‌’ ಪ್ರದಾನ ಮಾಡಲಾಯಿತು.

 ಮಂಗಳೂರು :  ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ಅವರು ಸಾರ್ವಜನಿಕ ಸೇವೆ, ಆರೋಗ್ಯ ಕ್ಷೇತ್ರ, ಸಾಮಾಜಿಕ ಕಲ್ಯಾಣ ಹಾಗೂ ನಾಗರಿಕ ನಾಯಕತ್ವದಲ್ಲಿ ಸಲ್ಲಿಸಿರುವ ಕೊಡುಗೆಗಳನ್ನು ಗುರುತಿಸಿ ಅವರಿಗೆ ಅಮೆರಿಕದ ಷಿಕಾಗೋ ನಗರದಲ್ಲಿ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ಅಮೆರಿಕನ್‌ ಮಲ್ಟಿ ಎಥ್ನಿಕ್‌ ಕಮಿಷನ್‌ (ಎ.ಎಂ.ಇ.ಸಿ.) ವತಿಯಿಂದ ‘ಗ್ಲೋಬಲ್‌ ಸಿವಿಕ್‌ ಲೀಡರ್‌ಶಿಪ್‌ ಅವಾರ್ಡ್‌’ ಪ್ರದಾನ ಮಾಡಲಾಯಿತು.

ಆಡಳಿತದ ಮೂಲ ತತ್ವಗಳು ಸಹಾನುಭೂತಿ, ಪಾರದರ್ಶಕತೆ ಮತ್ತು ನ್ಯಾಯ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯು.ಟಿ.ಖಾದರ್‌, ವಿಶ್ವ ಶಾಂತಿ, ಮಾನವೀಯತೆ, ಜಾಗತಿಕ ಸೌಹಾರ್ದತೆ, ಉತ್ತಮ ಆಡಳಿತ ಹಾಗೂ ಅಂತಾರಾಷ್ಟ್ರೀಯ ಸಹಕಾರದ ಮಹತ್ವ ತಿಳಿಸಿದರು. ಆಡಳಿತದ ಮೂಲ ತತ್ವಗಳು ಸಹಾನುಭೂತಿ, ಪಾರದರ್ಶಕತೆ ಮತ್ತು ನ್ಯಾಯವಾಗಿರಬೇಕು. ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತೆ ಹಾಗೂ ಸಮಾನ ಅವಕಾಶಗಳು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳಾಗಿವೆ ಎಂದರು.

ಅಧಿಕಾರ ಅಥವಾ ಹುದ್ದೆಯೇ ನಾಯಕತ್ವದ ಮಾನದಂಡವಲ್ಲ. ಸಮಾಜದ ಅಂಚಿನಲ್ಲಿರುವವರ ನೋವನ್ನು ಆಲಿಸುವುದು, ದುರ್ಬಲರ ಜೊತೆ ನಿಲ್ಲುವುದು ಹಾಗೂ ಅಭಿವೃದ್ಧಿ ಯೋಜನೆಗಳು ಎಲ್ಲರಿಗೂ ತಲುಪುವಂತೆ ಮಾಡುವುದು ನಿಜವಾದ ನಾಯಕತ್ವದ ಲಕ್ಷಣಗಳು ಎಂದರು.

ಇಂದಿನ ಜಗತ್ತು ಹವಾಮಾನ ವೈಪರೀತ್ಯ, ಸಾರ್ವಜನಿಕ ಆರೋಗ್ಯ ಸವಾಲುಗಳು ಹಾಗೂ ಅಸಮಾನತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳನ್ನು ಯಾವುದೇ ರಾಷ್ಟ್ರವೂ ಏಕಾಂಗಿಯಾಗಿ ಪರಿಹರಿಸಲು ಸಾಧ್ಯವಿಲ್ಲ. ರಾಷ್ಟ್ರಗಳ ನಡುವಿನ ಸಹಕಾರ ಮತ್ತು ಸಂವಾದ ಅಗತ್ಯವೆಂದು ಹೇಳಿದರು.

‘ವಸುದೈವ ಕುಟುಂಬಕಂ’

‘ವಸುದೈವ ಕುಟುಂಬಕಂ’ ಎಂಬ ಭಾರತದ ತತ್ವವನ್ನು ಉಲ್ಲೇಖಿಸಿದ ಅವರು, ವಿಶ್ವವೇ ಒಂದು ಕುಟುಂಬ ಎಂಬ ಸಂದೇಶ ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಇನ್ನಷ್ಟು ಪ್ರಸ್ತುತವಾಗಿದೆ. ಈ ಪ್ರಶಸ್ತಿಯನ್ನು ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುವ ವೈದ್ಯರು, ನರ್ಸ್‌ಗಳು, ಶಿಕ್ಷಕರು, ಸರ್ಕಾರಿ ನೌಕರರು, ಸ್ವಯಂಸೇವಕರು ಹಾಗೂ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರಿಗೆ, ಹಾಗೂ ಪ್ರಜಾಪ್ರಭುತ್ವ, ಸೇವಾಭಾವ, ಮಾನವೀಯತೆ ಮತ್ತು ಕರುಣೆಯ ಮೌಲ್ಯಗಳನ್ನು ಜೀವನದ ಧ್ಯೇಯವನ್ನಾಗಿಸಿಕೊಂಡಿರುವ ಕರ್ನಾಟಕ ಹಾಗೂ ಭಾರತದ ಜನತೆಗೆ ಸಮರ್ಪಿಸುತ್ತೇನೆ ಎಂದರು.

ಶತಮಾನಗಳ ಹಿಂದೆ ಇದೇ ಚಿಕಾಗೋ ನೆಲದಲ್ಲಿ ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಶಾಂತಿ ಮತ್ತು ಸಾಮರಸ್ಯದ ಸಂದೇಶ ಸಾರಿದ ಕ್ಷಣವನ್ನು ಸ್ಮರಿಸಿದ ಅವರು, ಅದೇ ಪವಿತ್ರ ನೆಲದಲ್ಲಿ ಈ ಗೌರವವನ್ನು ಸ್ವೀಕರಿಸುವುದು ತಮ್ಮ ಜೀವನದ ಅತ್ಯಂತ ಗೌರವಾನ್ವಿತ ಕ್ಷಣವೆಂದರು. ಅಮೆರಿಕದ ಚಿಕಾಗೋದಿಂದ ನೀಡಿದ ಈ ಸಂದೇಶ ವಿಶ್ವದ ವಿವಿಧ ರಾಷ್ಟ್ರಗಳ ಗಣ್ಯರು, ಜನಪ್ರತಿನಿಧಿಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳ ಮೆಚ್ಚುಗೆಗೆ ಪಾತ್ರವಾಯಿತು.

‘ದೊಡ್ಡ ಕನಸು ಕಾಣಿರಿ, ಧೈರ್ಯದಿಂದ ನಾಯಕತ್ವ ವಹಿಸಿರಿ ಮತ್ತು ವಿನಯದಿಂದ ಸಮಾಜಕ್ಕೆ ಸೇವೆ ಸಲ್ಲಿಸಿರಿ’ ಎಂದು ಯುವಜನತೆಗೆ ಅವರು ಕರೆ ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಶಾಸನಸಭೆ ಸ್ಪರ್ಧೆ ವಯೋಮಿತಿ 21ಕ್ಕೆ : ತೆಲಂಗಾಣ ಸಿಎಂ
ಕೆಪಿಎಸ್ಸಿ ಅಕ್ರಮದ ಕುರಿತು ಸದನದಲ್ಲಿ ಚರ್ಚೆ: ಬಿವೈವಿ