ಕೀಳುಮಟ್ಟದ ರಾಜಕಾರಣ ಮಾಡುವ ಮುಖಂಡರ ವಿರುದ್ಧ ಶಿಸ್ತು ಕ್ರಮ ನಿಶ್ಚಿತ
ಕನ್ನಡಪ್ರಭ ವಾರ್ತೆ ದಾಬಸ್ಪೇಟೆಚುನಾವಣೆಯಲ್ಲಿ ಗೆದ್ದ ನಾಲ್ಕೈದು ತಿಂಗಳಲ್ಲಿ ಬಿಡುವಿಲ್ಲದಂತೆ ಸರ್ಕಾರದ ಮಟ್ಟದಲ್ಲಿ ಹಾಗೂ ಕ್ಷೇತ್ರದಲ್ಲಿ ಮಿಂಚಿನಂತೆ ಓಡಾಡಿ ಜನಮೆಚ್ಚುವಂತೆ ಅಭಿವೃದ್ಧಿಯ ಭರವಸೆ ಮೂಡಿಸಿರುವ ಶಾಸಕ ಎನ್.ಶ್ರೀನಿವಾಸ್ ನಮ್ಮ ಕ್ಷೇತ್ರಕ್ಕೆ ಸಿಕ್ಕಿರುವುದು ಪುಣ್ಯ, ಅಂತಹ ಶಾಸಕರ ವಿರುದ್ದ ತಮ್ಮ ಸ್ವಾರ್ಥಕ್ಕಾಗಿ ಮಾತನಾಡುವುದು ಕೀಳುಮಟ್ಟದ ರಾಜಕಾರಣ, ಅಂತಹ ಮುಖಂಡರ ವಿರುದ್ದ ಶಿಸ್ತು ಕ್ರಮ ನಿಶ್ಚಿತ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್ ಗೌಡ ಎಚ್ಚರಿಕೆ ನೀಡಿದರು.
ಟಿ.ಬೇಗೂರು ಗ್ರಾಮದ ಖಾಸಗಿ ಹೋಟಲ್‌ನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ನಡೆಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತ್ಯಾಮಗೊಂಡ್ಲುವಿನ ಮೂರು ಜನ ಹಬ್ಬದ ಊಟಕ್ಕೆ ಕರೆದು ಶಾಸಕರ ವಿರುದ್ದ ಮಾತನಾಡಿರುವುದು ಖಂಡನೀಯ, ತಮ್ಮ ಸ್ವಾರ್ಥಕ್ಕೆ ಶಾಸಕರು ಸ್ಪಂದನೆ ನೀಡಬೇಕು ಎನ್ನುವುದು ತಪ್ಪು, ಅವರು ಕ್ಷೇತ್ರದ ಎಲ್ಲ ಜನರಿಗೂ ಶಾಸಕರಾಗಿದ್ದು, ಕ್ಷೇತ್ರದ ಮೇಲೆ ಹಾಗೂ ಕಾರ್ಯಕರ್ತರು, ಮುಖಂಡರ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ ಎಂದರು.ಕಾಂಗ್ರೆಸ್ ಮುಖಂಡ, ಕಾರ್ಯಕರ್ತರನ್ನು ತಮ್ಮ ಸ್ವಂತ ಕುಟುಂಬದವರ ತರಹ ನೋಡುವ ಮೂಲಕ ಸಮಾನ ಗೌರವ ನೀಡಿ, ಅಭಿವೃದ್ಧಿ ಕಾರ್ಯವನ್ನು ನಿಷ್ಠೆಯಿಂದ ಮಾಡಿದ್ದಾರೆ. ಇಂತಹ ಶಾಸಕರು ನಮಗೆ ಸಿಕ್ಕಿರುವುದು ಪುಣ್ಯ. ಇವರನ್ನು ನಾವು ಕ್ಷೇತ್ರದಲ್ಲಿ ಕಳೆದುಕೊಂಡರೆ ನಮ್ಮಂತಹ ದಡ್ಡರಾರೂ ಇಲ್ಲ. ಅವರಿಗೆ ಬೇಸರವಿದ್ದರೆ ನಮ್ಮ ಬಳಿ ಹೇಳಬಹುದಿತ್ತು, ಆದರೆ ಸ್ವಾರ್ಥಕ್ಕಾಗಿ ಶಾಸಕರ ವಿರುದ್ದ ಮಾತನಾಡಿರುವುದು ಸರಿಯಲ್ಲ. ತ್ಯಾಮಗೊಂಡ್ಲುವಿನ ಕೆಲ ಮುಖಂಡರ ವಿರುದ್ದ ಕ್ರಮಕ್ಕೆ ಪಕ್ಷ ಮುಂದಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಮಾತನಾಡಿ, ವಿರೋಧ ಪಕ್ಷಗಳ ಪಿತೂರಿಗೆ ಒಳಗಾಗಿ ಸ್ವಾರ್ಥಕ್ಕಾಗಿ ಶಾಸಕರು ಸ್ಪಂದನೆ ನೀಡುತ್ತಿಲ್ಲ ಎಂಬ ಕಾರಣದಿಂದ ಶಾಸಕರ ವಿರುದ್ದ ಮಾತನಾಡಿರುವುದು ಖಂಡನೀಯ. ಶಾಸಕರ ಸಮಾಜಮುಖಿ ಕೆಲಸಗಳ ಬಗ್ಗೆ ಸಭೆಯಲ್ಲಿ ಸೇರಿರುವ ಜನರು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ ಎಂದರು.ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ರಂಗಸ್ವಾಮಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಗೌಡ, ಹಿರಿಯ ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಹೊನ್ನಸಿದ್ದಪ್ಪ, ಹಸಿರುವಳ್ಳಿ ಕುಮಾರ್, ಖಲಿಂವುಲ್ಲಾ, ರಂಗನಾಥ್, ಗೋವಿಂದರಾಜು, ಅರ್ಜುನ್, ನಾರಾಯಣಗೌಡ, ಎಂ.ಕೆ ನಾಗರಾಜು, ಪ್ರಕಾಶ್, ಹನುಮಂತೇಗೌಡ್ರು, ಸೇರಿದಂತೆ 500ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು.