ಕೆ.ಆರ್.ಪೇಟೆ : ದೇಶದ ಪ್ರತಿಷ್ಠಿತ ಎಚ್‌ಎಂಟಿ ಕಾರ್ಖಾನೆ ಪುನಶ್ಚೇತನದ ವಿಚಾರವಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಡೆಯನ್ನು ಶಾಸಕ ಎಚ್.ಟಿ.ಮಂಜು ಖಂಡಿಸಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುರ್ಜೆವಾಲ ಅವರ ಟೀಕೆ ಅವೈಜ್ಞಾನಿಕ ಮತ್ತು ಅಪ್ರಬುದ್ಧವಾಗಿದೆ. ಅವರ ಹೇಳಿಕೆಯೂ ಬೌದ್ಧಿಕ ದಿವಾಳಿತನ ತೋರಿಸುತ್ತದೆ ಎಂದು ಕಿಡಿಕಾರಿದರು.
ಎಚ್ಎಂಟಿ ಕಂಪನಿ 1961ರಲ್ಲಿ ಆರಂಭವಾಗಿ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರೇ ಬೆಂಗಳೂರಿಗೆ ಬಂದು ಎಚ್ಎಂಟಿ ಘಟಕ ಉದ್ಘಾಟಿಸಿದ್ದಾರೆ. ಗಡಿಯಾರ, ಟ್ರ್ಯಾಕ್ಟರ್ ತಯಾರಿಕೆ, ಮುದ್ರಣ ಯಂತ್ರ, ಆಹಾರ ಸಂಸ್ಕರಣಾ ಯಂತ್ರಗಳು ಸೇರಿದಂತೆ ದೇಶದ ರಕ್ಷಣಾ ವಲಯಕ್ಕೆ ಬೇಕಾದ ಸಾಮಗ್ರಿಗಳನ್ನು ಉತ್ಪಾದಿಸುವ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಕಂಪನಿ ದೇಶದಾದ್ಯಂತ 6 ಅಂಗ ಸಂಸ್ಥೆ ಹೊಂದಿದೆ ಎಂದರು.
1980 ರಿಂದ 1990ರವರೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅಧಕ್ಷತೆಯ ಕಾರಣದಿಂದ ಎಚ್ಎಂಟಿ ಕಾರ್ಖಾನೆ ರೋಗಗ್ರಸ್ಥವಾಗಿದೆ. ಕಂಪನಿ ಕೆಲವು ಘಟಕಗಳು ಉತ್ಪಾದನೆಯನ್ನು ನಿಲ್ಲಿಸಿದ್ದರೂ ಇತರೆ ಘಟಕಗಳು ಚಾಲ್ತಿಯಲ್ಲಿವೆ ಎಂದರು.
ರಕ್ಷಣಾ ಇಲಾಖೆಗೆ ಅಗತ್ಯವಾದ ಸಲಕರಣೆ ಉತ್ಪಾದಿಸಿ ಪೂರೈಕೆ ಮಾಡುತ್ತಿದೆ. 2500 ಕಾರ್ಮಿಕರು ಇಂದಿಗೂ ಎಚ್ಎಂಟಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಅರಿವಿಲ್ಲದ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮುಚ್ಚಿ ಹೋಗಿರುವ ಕಾರ್ಖಾನೆ ಭೂಮಿಯನ್ನು ವಾಪಸ್ ನೀಡದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ರಿಯಲ್ ಎಸ್ಟೇಟ್ ಮಾಡಲು ಹೊರಟಿದ್ದಾರೆ ಎಂದು ಅಪಪ್ರಚಾರ ಮಾಡುವ ಮೂಲಕ ತಾನೊಬ್ಬ ಅಪ್ರಬುದ್ಧ ಮತ್ತು ಅಜ್ಞಾನಿ ಎಂದು ಸಾಬೀತು ಪಡಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅರಣ್ಯ ಕಾಯ್ದೆ ಜಾರಿಗೆ ಬಂದಿದ್ದು 1980 ರಲ್ಲಿ, ಅದಕ್ಕೂ ಮುನ್ನವೇ ಎಚ್‌ಎಂಟಿ ಕಾರ್ಖಾನೆಗೆ ಗಿಫ್ಟ್ ಡೀಡ್ ಮೂಲಕ ರಾಜ್ಯ ಸರ್ಕಾರ 433 ಎಕರೆ ಭೂಮಿ ನೀಡಿದೆ. ಇದರಲ್ಲಿ 177 ಎಕರೆ ಭೂಮಿಯನ್ನು 2000 ದಿಂದ 2006ರವರೆಗೆ ವಿವಿಧ ಖಾಸಗಿ ಕಂಪನಿಗೆ ಮಾರಾಟ ರಿಯಲ್ ಎಸ್ಟೇಟ್ ದಂಧೆ ಆರಂಭಿಸಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.
ಈಗ ಜೀವ ವೈವಿಧ್ಯತೆ ವಲಯ ನಿರ್ಮಾಣದ ಹೆಸರಿನಲ್ಲಿ ಎಚ್ಎಂಟಿ ಕಾರ್ಖಾನೆ ಸಮಗ್ರ ಭೂ ಕಬಳಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನು ತನ್ನ ರಾಜ್ಯ ಉಸ್ತುವಾರಿ ಸುರ್ಜೇವಾಲ ಮೂಲಕ ಹೇಳಿಸುತ್ತಿದೆ. ಜೀವ ವೈವಿದ್ಯ ವಲಯ ನಿರ್ಮಿಸಲು ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ಸರ್ಕಾರಿ ಜಾಗವಿದೆ. ಅದನ್ನು ಕಾಂಗ್ರೆಸ್ಸಿಗರ ಪಠಾಲಂಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿಯನ್ನು ಬಿಡಿಸಿ ಅಲ್ಲಿ ಜೀವ ವೈವಿಧ್ಯ ವಲಯ ಸ್ಥಾಪಿಸಲಿ. ಜೀವ ವೈವಿಧ್ಯ ವಲಯದ ಹೆಸರಿನಲ್ಲಿ ಎಚ್ಎಂಟಿ ಕಾರ್ಖಾನೆ ಪುನಶ್ಚೇತನಕ್ಕೆ ಕಾಂಗ್ರೆಸ್ ಸರ್ಕಾರ ಅಡ್ಡಿಪಡಿಸಬಾರದು. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಸರು ಬರುತ್ತದೆ ಎನ್ನುವ ಏಕೈಕ ಕಾರಣದಿಂದ ಸರ್ಕಾರ ಎಚ್ಎಂಟಿ ಪುನಶ್ಚೇತನಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಚ್ಎಂಟಿ ಕಾರ್ಖಾನೆ ಪುನಶ್ಚೇತನಗೊಂಡರೆ ರಾಜ್ಯದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲದೇ, ರಾಜ್ಯದ ಆರ್ಥಿಕ ಪ್ರಗತಿಯ ವೇಗವೂ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ಸಾಧನಾ ಸಮಾವೇಶದಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲಘುವಾಗಿ ಮಾತನಾಡಿರುವುದು ಖಂಡನೀಯ. ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷವೂ ಧೂಳಿಪಟವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವುಗಳು ಸಹಜ. 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಹುಡುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅನುದಾನ ನೀಡಿಕೆಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ 50 ಕೋಟಿ ಬಿಡುಗಡೆ ಬಗ್ಗೆ ಪತ್ರ ಹೋಗಿದೆ. ವಿರೋಧ ಪಕ್ಷಗಳ ಶಾಸಕ ಕ್ಷೇತ್ರಾಭಿವೃದ್ಧಿಗೆ 25 ಕೋಟಿ ನೀಡುವುದಾಗಿ ಹೇಳಿದ್ದರೂ ಈ ಬಗ್ಗೆ ಯಾವುದೇ ಅಧಿಕೃತ ಪತ್ರ ಹೋಗಿಲ್ಲ. ಈ ಬಗ್ಗೆ ನಾನು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಹಣ ಬಿಡುಗೆಡೆಯಾದ ನಂತರ ಕಾರ್ಯಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಗಟ್ಟಿಯಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಚುನಾವಣೆಗಳಲ್ಲಿ ಒಗ್ಗೂಡಿ ಕೆಲಸ ಮಾಡುತ್ತಾರೆ. ಚುನಾವಣೆ ಸಮೀಪಿಸುವವರೆಗೂ ತಮ್ಮ ತಮ್ಮ ಪಕ್ಷದ ಅಜಂಡಾ ರೀತಿ ಕೆಲಸ ಮಾಡುತ್ತಾರೆ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ತಾಲೂಕು ಜೆಡಿಎಸ್ ರೈತಮೋರ್ಚಾ ಘಟಕದ ಅಧ್ಯಕ್ಷ ಹುಲ್ಲೇಗೌಡ, ವೀರಶೈವ ಸಮಾಜದ ಮುಖಂಡ ತೋಂಟಪ್ಪಶೆಟ್ಟಿ ಸೇರಿದಂತೆ ಹಲವರು ಇದ್ದರು.