ಶಿಡ್ಲಘಟ್ಟ : ಮಂಡ್ಯದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಏ.15ರ ಬುಧವಾರ ಬೆಳಗ್ಗೆ 11:30 ಕ್ಕೆ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸಂಕಲ್ಪದಂತೆ ಸಿದ್ಧಗೊಂಡಿರುವ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಯಾಗಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತೆರಳಲು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಪಕ್ಷಾತೀತವಾಗಿ ಭಕ್ತರಿಗೆ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.
ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ಶಿಡ್ಲಘಟ್ಟದಿಂದ 14ನೇ ತಾರೀಖಿನಂದು ಪ್ರತಿ ಗ್ರಾಮ ಪಂಚಾಯಿತಿಯಿಂದ ಬಸ್ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 2 ಗಂಟೆಗೆ ಇಲ್ಲಿಂದ ಬಸ್‌ಗಳು ಹೊರಡಲಿವೆ.
ಶ್ರೀ ಕ್ಷೇತ್ರಕ್ಕೆ ಹೋಗುವ ಹಾದಿಯಲ್ಲಿ ಭಕ್ತಾದಿಗಳು ಬಿದನಗೆರೆಯ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ, ಶ್ರೀ ಸತ್ಯ ಶನೇಶ್ವರ ದೇವಸ್ಥಾನ ಹಾಗೂ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನಗಳ ದರ್ಶನ ಪಡೆಯಲಿದ್ದಾರೆ. ರಾತ್ರಿ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಮರುದಿನ ಶ್ರೀ ಗುರುವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆದಿಚುಂಚನಗಿರಿ ಶ್ರೀ ಕಾಲ ಬೈರವೈಶ್ವರ ಸ್ವಾಮಿ ದೇವಸ್ಥಾನದ ದರ್ಶನ ಪಡೆದುಕೊಂಡು ಸುರಕ್ಷಿತವಾಗಿ ಮರಳಿ ಮನೆಗಳಿಗೆ ಬರುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದು ಯಾವುದೇ ರಾಜಕೀಯ ಪಕ್ಷದ ವತಿಯಿಂದ ಮಾಡುತ್ತಿರುವ ಕಾರ್ಯಕ್ರಮವಲ್ಲ. ಅಪ್ಪಟ ಭಕ್ತನಾಗಿ, ಮಠದ ಮೇಲಿರುವ ಗೌರವದಿಂದ ಎಲ್ಲಾ ಮುಖಂಡರು ನಮ್ಮೊಂದಿಗೆ ಇದ್ದು ಅವರೆಲ್ಲರ ಸಹಕಾರದೊಂದಿಗೆ ದೇವರ ಸನ್ನಿಧಿಗೆ ಹೋಗುವಂತಹ ಕೆಲಸ ಮಾಡುತ್ತಿದ್ದು, ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.
ಪ್ರತಿ ಗ್ರಾಮ ಪಂಚಾಯಿತಿಯಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದೆ. ಎಷ್ಟು ಭಕ್ತರು ಬಂದರೂ ಅವರಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ದರ್ಶನ ಮಾಡಿಸಿ ಕರೆತರುವ ಸಂಕಲ್ಪ ನಮ್ಮದು. ಬನ್ನಿ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ ಎಂದರು. ಈ ವೇಳೆ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ , ಶ್ರೀ ವೆಂಕಟೇಶ್ವರ ಚಿತ್ರ ಮಂದಿರ ಮಾಲೀಕ ಪ್ರಕಾಶ್ , ಮುಖಂಡರಾದ ಸಂಜೀವಪ್ಪ , ರಾಮಕೃಷ್ಣಪ್ಪ , ಪುರುಷೋತ್ತಮ್ , ನರೇಶ್ , ತಲದುಮ್ಮನ ಹಳ್ಳಿ ಮಧು , ಬಾಲಕೃಷ್ಣ ಹಾಜರಿದ್ದರು .