ಕನ್ನಡಪ್ರಭ ವಾರ್ತೆ ಮಂಡ್ಯ
ದಾಖಲೆಗಳು ಸುಳ್ಳು ಹೇಳುವುದಿಲ್ಲ. ಅ.೩೦ರಂದೇ ಮಂಡ್ಯ ಜಿಲ್ಲಾಧಿಕಾರಿಗಳಿಂದ ಕಂದಾಯ ಇಲಾಖೆಗೆ ೧೦೦ ಎಕರೆ ಭೂಮಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧಿಕೃತ ಡಿಜಿಟಲ್ ಸಹಿ ಸಮೇತ ದಾಖಲೆ ಲಭ್ಯವಿದ್ದರೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಎಆರ್‌ಎಐಸಂಸ್ಥೆಗಾಗಲಿ ಅಥವಾ ಕೇಂದ್ರ ಸಚಿವರ ಕಚೇರಿಗಾಗಲಿ ಯಾವುದೇ ಮಾಹಿತಿ ನೀಡಿಲ್ಲ ಎಂಬ ಕೇಂದ್ರ ಸಚಿವರ ಹೇಳಿಕೆ ಶುದ್ಧ ಸುಳ್ಳು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಾಹಿತಿ ಕೊರತೆ, ಬೇಜವಾಬ್ದಾರಿತನ:ಈ ಪ್ರಸ್ತಾವನೆಯನ್ನು ಪುಣೆಯಲ್ಲಿರುವ ಎಆರ್‌ಎಐ ನಿರ್ದೇಶಕರಿಗೆ ಅಧಿಕೃತವಾಗಿ ಕಳುಹಿಸಲಾಗಿದೆ. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೂ ರವಾನಿಸಲಾಗಿದೆ. ತಮ್ಮದೇ ಸಚಿವರ ವಿಶೇಷಾಧಿಕಾರಿಗೆ ಕಳುಹಿಸಲಾದ ಪತ್ರವನ್ನು ಕಚೇರಿಯಲ್ಲಿ ಪರಿಶೀಲಿಸದೆ, ಸಾರ್ವಜನಿಕವಾಗಿ ಸಚಿವರು ಸುಳ್ಳು ಹೇಳಿದ್ದಾರೆಂದು ದೂಷಿಸುವುದು ಕೇಂದ್ರ ಸಚಿವರ ಕಚೇರಿಯ ಮಾಹಿತಿ ಕೊರತೆ ಹಾಗೂ ಬೇಜವಾಬ್ದಾರಿತನವನ್ನ ಎತ್ತಿ ತೋರಿಸುತ್ತದೆ ಎಂದು ದೂಷಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವತಿಯಿಂದ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ ಹಾಗೂ ‘ಇವಿ ಪರೀಕ್ಷಾ ಕೇಂದ್ರ’ ಸ್ಥಾಪನೆಗಾಗಿ ಮಂಡ್ಯ ತಾಲೂಕಿನ ಮುದ್ದನಘಟ್ಟ ಗ್ರಾಮದ ಸ.ನಂ ೪೮ ರಲ್ಲಿ ೭೦ ಎಕರೆ ಹಾಗೂ ಹೆಗ್ಗಡತಿಹಳ್ಳಿ ಗ್ರಾಮದ ಸ.ನಂ ೩೫ ರಲ್ಲಿ ೩೦ ಎಕರೆ ಸೇರಿದಂತೆ ಒಟ್ಟು ೧೦೦-೦೦ ಎಕರೆ ಸರ್ಕಾರಿ ಗೋಮಾಳ ಜಮೀನನನ್ನು ಕೆಐಎಡಿಬಿಗೆ ಮಂಜೂರು ಮಾಡಲು ಮಂಡ್ಯ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿ ಪತ್ರ ಸಲ್ಲಿಸಿದ್ದಾರೆ. ಜಿಲ್ಲಾಡಳಿತದ ಹಂತದಲ್ಲಿ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಸ್ಪಷ್ಟಪಡಿಸಿದರು.
ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರು ನೀಡಿರುವ ವರದಿಯಂತೆ, ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿ ಗ್ರಾಮಗಳ ಈ ೧೦೦ ಎಕರೆ ಸರ್ಕಾರಿ ಗೋಮಾಳ ಜಮೀನು ಸಂಪೂರ್ಣವಾಗಿ ಒತ್ತುವರಿಯಿಂದ ಮುಕ್ತವಾಗಿದ್ದು, ಯಾವುದೇ ನ್ಯಾಯಾಲಯದ ವ್ಯಾಜ್ಯಗಳಿಲ್ಲ. ಸೂಕ್ತ ರಸ್ತೆ ಸಂಪರ್ಕವಿದ್ದು ಕೈಗಾರಿಕಾ ಕೇಂದ್ರಕ್ಕೆ ಯೋಗ್ಯವಾಗಿದೆ ಎಂದು ದೃಢಪಟ್ಟಿದೆ. ಕರ್ನಾಟಕ ಭೂ ಮಂಜೂರಾತಿ ನಿಯಮಗಳು ೧೯೬೯ ರ ನಿಯಮ ೨೦(೧)(ಸಿ) ಅನ್ವಯ ಈ ಜಮೀನನ್ನ ಕೆಐಎಡಿಬಿಗೆ ಹಸ್ತಾಂತರಿಸಲು ಶಿಫಾರಸು ಮಾಡಲಾಗಿದೆ ಎಂದರು.
ಗೋಷ್ಠಿಯಲ್ಲಿ ಶಾಸಕ ಪಿ.ರವಿಕುಮಾರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮುಖಂಡ ಸಿದ್ದಾರೂಢ ಸತೀಶ್ ಹಾಜರಿದ್ದರು.