ಮುಡಾ ದಾಖಲೆ ಕಾಪ್ಟರ್‌ನಲ್ಲಿ ತಂದು ತಿದ್ದಿದ್ದಾರೆ - ವೈಟ್ನರ್‌ ಬಳಸಿ ದಾಖಲೆಗಳನ್ನು ತಿದ್ದಲಾಗಿದೆ : ಎಚ್‌ಡಿಕೆ

ಸಾರಾಂಶ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೆಲಿಕಾಪ್ಟರ್‌ನಲ್ಲಿ ದಾಖಲೆಗಳನ್ನು ತಂದು ವೈಟ್ನರ್‌ನಿಂದ ತಿದ್ದಲಾಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರು :  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೆಲಿಕಾಪ್ಟರ್‌ನಲ್ಲಿ ದಾಖಲೆಗಳನ್ನು ತಂದು ವೈಟ್ನರ್‌ನಿಂದ ತಿದ್ದಲಾಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದ ದಾಖಲೆಗಳನ್ನು ಹೇಗೆ ತಂದಿದ್ದಾರೆ ಎಂಬುದು ಗೊತ್ತಿದೆ. ಹೆಲಿಕಾಪ್ಟರ್‌ನಲ್ಲಿ ತಂದು ವೈಟ್ನರ್‌ನಿಂದ ತಿದ್ದಿದ್ದಾರೆ. ತಪ್ಪು ಮಾಡಿಲ್ಲ ಎಂದಾದರೆ ದಾಖಲೆಗಳನ್ನು ಯಾಕೆ ತಿದ್ದಬೇಕು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳ ಮತ್ತವರ ತಂಡ ನನ್ನ ಮಾಹಿತಿಯನ್ನು ಕೆದಕುತ್ತಿದೆ. ಆದರೆ, ಅಕ್ರಮ ಗಣಿಗಳಿಗೆ ಅನುಮತಿ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರದ್ದು ಬ್ರಹ್ಮಾಂಡವೇ ಇದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ನನ್ನ ಬಳಿ ಇವೆ. 2015ರಲ್ಲಿ ಬೇಲೆಕೇರಿಯಲ್ಲಿ ಅದಿರು ಕದ್ದು ಸಿಕ್ಕಿಕೊಂಡಿರುವ ಅಪರಾಧಿಗಳ ಗಣಿಗಳಿಗೆ ಸಿದ್ದರಾಮಯ್ಯ ಅನುಮತಿ ನೀಡಿದ್ದರು. 

ದಾಖಲೆಗಳನ್ನು ನಾನು ಈಗಲೇ ಬಿಡುಗಡೆ ಮಾಡಲ್ಲ. ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ. ಏಕೆಂದರೆ, ಮುಖ್ಯಮಂತ್ರಿಗಳ ಸುತ್ತಮುತ್ತ ದಾಖಲೆಗಳನ್ನು ತಿದ್ದುವ ಪ್ರವೀಣರು ಅನೇಕರು ಇದ್ದಾರೆ. ಹೀಗಾಗಿ ನಾನೂ ಸೇಫ್ ಗೇಮ್ ಆಡಬೇಕಲ್ಲವೇ ಎಂದು ಮಾರ್ಮಿಕವಾಗಿ ಹೇಳಿದರು.

Share this article