ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಎಲ್ಲಾ ಜಿಲ್ಲೆಗಳಲ್ಲಿ ಬೀದಿಗಿಳಿದ ‘ಕೈ’ ನಾಯಕರು

ಸಾರಾಂಶ

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತು. ರಾಜ್ಯಪಾಲರ ಕ್ರಮವನ್ನು ಬಿಜೆಪಿ ಮತ್ತು ಜೆಡಿಎಸ್‌ನ ಷಡ್ಯಂತ್ರ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಹುಬ್ಬಳ್ಳಿ :  ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಚಿವರು, ಶಾಸಕರು ಸೇರಿ ಕಾಂಗ್ರೆಸ್‌ ನಾಯಕರು ಬೀದಿಗಿಳಿದು ಸೋಮವಾರ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಬೆನ್ನಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದರು.

ರಾಜ್ಯಾದ್ಯಂತ ರಸ್ತೆ ತಡೆ, ರಾಜ್ಯಪಾಲರು, ಪ್ರಧಾನಿ ಮೋದಿ ಪ್ರತಿಕೃತಿ ದಹನ, ಶವಯಾತ್ರೆ ಮತ್ತು ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ರಾಜ್ಯಪಾಲರು, ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರ ವಿರುದ್ಧ ಕಿಡಿಕಾರಿದರು. ಇದೇ ವೇಳೆ ಮೆರವಣಿಗೆಯನ್ನೂ ನಡೆಸಿದ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ, ತಹಸೀಲ್ದಾರ್‌ ಅವರ ಮೂಲಕ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದರು. ರಾಜ್ಯಪಾಲರ ವಿರುದ್ಧ ಗೋಬ್ಯಾಕ್‌ ಘೋಷಣೆ ಕೂಗಿದರು.

ಬಿಜೆಪಿ ಮತ್ತು ಜೆಡಿಎಸ್‌ ರಾಜ್ಯಪಾಲರನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದೆ. ರಾಜ್ಯಪಾಲರು ಅಮಿತ್‌ ಶಾ ಅವರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಾದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಅವರ ಮೇಲೂ ಆರೋಪಗಳಿವೆ. ಹಾಗಿದ್ದರೆ ಇದೇ ರೀತಿ ಅವರ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಿ ಎಂದು ಒತ್ತಾಯಿಸಿದರು.

ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಂದ ಕ್ರಮ ಏಕಿಲ್ಲ? ನಿಮ್ಮ ಯಾವ ಹುನ್ನಾರಗಳಿಗೂ ನಮ್ಮ ಸರ್ಕಾರ ಜಗ್ಗಲ್ಲ, ಬಗ್ಗಲ್ಲ, ಹೆದರಲ್ಲ. ಡಿ.ಕೆ.ಶಿವಕುಮಾರ್‌ ಒಬ್ಬರೇ ಅಲ್ಲ, ಇಂಡಿಯಾ ಒಕ್ಕೂಟ ಹಾಗೂ ರಾಜ್ಯ, ದೇಶದ ಎಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಸಿದ್ದರಾಮಯ್ಯ ಪರ ಬೆನ್ನುಲುವಾಗಿ ನಿಂತಿದ್ದಾರೆ ಎಂದು ತಿರುಗೇಟು ನೀಡಿದರು.

ಬೆಂಗಳೂರಲ್ಲಿ ಡಿಕೆಶಿ ನೇತೃತ್ವ: ರಾಜ್ಯಪಾಲರ ಕ್ರಮದ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ, ಮೈಸೂರಲ್ಲಿ ಡಾ.ಮಹದೇವಪ್ಪ, ಕಾರವಾರದಲ್ಲಿ ಮಂಕಾಳು ವೈದ್ಯ, ರಾಯಚೂರಲ್ಲಿ ಭೋಸರಾಜು, ಕೊಪ್ಪಳದಲ್ಲಿ ಶಿವರಾಜ ತಂಗಡಗಿ, ಧಾರವಾಡದಲ್ಲಿ ಸಂತೋಷ್‌ ಲಾಡ್‌, ಗದಗದಲ್ಲಿ ಎಚ್‌.ಕೆ.ಪಾಟೀಲ, ಹಾವೇರಿಯಲ್ಲಿ ಶಿವಾನಂದ ಪಾಟೀಲ, ವಿಜಯಪುರದಲ್ಲಿ ಎಂ.ಬಿ.ಪಾಟೀಲ, ಯಾದಗಿರಿಯಲ್ಲಿ ಶರಣಬಸಪ್ಪ ದರ್ಶನಾಪುರ ಹೀಗೆ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ದೇಶಪಾಂಡೆ, ತನ್ವೀರ್‌ ಸೇಠ್‌ ಸೇರಿ ಕಾಂಗ್ರೆಸ್‌ ಶಾಸಕರು, ಮುಖಂಡರು ಪಾಲ್ಗೊಂಡಿದ್ದರು.

ಮಂಗಳೂರಲ್ಲಿ ಬಸ್ಸಿಗೆ ಕಲ್ಲು: ಮೂವರ ಬಂಧನ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಎದುರು ರಾಜ್ಯಪಾಲರ ವಿರುದ್ಧದ ಕಾಂಗ್ರೆಸ್‌ ಪ್ರತಿಭಟನೆ ವೇಳೆ ಬಸ್ಸಿಗೆ ಕಲ್ಲು ತೂರಾಟ ನಡೆದು ಮಹಿಳೆಯೊಬ್ಬರು ಗಾಯಗೊಂಡ ಘಟನೆ ನಡೆದಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಶಾಹುಲ್ ಹಮೀದ್, ಅನ್ವರ್ ಮತ್ತು ಕಿಶೋರ್ ಶೆಟ್ಟಿ ಬಂಧಿತರು. ಘಟನೆಗೆ ಸಂಬಂಧಿಸಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.

Share this article