ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಕದನ : ರಾಷ್ಟ್ರೀಯ ಬಿಜೆಪಿ ತೀವ್ರ ಆಕ್ಷೇಪ

KannadaprabhaNewsNetwork | Updated : Mar 16 2025, 04:23 AM IST

ಸಾರಾಂಶ

2 ಕೋಟಿ ರು.ವರೆಗಿನ ಗುತ್ತಿಗೆ ಕಾಮಗಾರಿಗಳು ಹಾಗೂ 1 ಕೋಟಿ ರು.ವರೆಗಿನ ಖರೀದಿ, ಸೇವೆಗಳಲ್ಲಿ ಮುಸ್ಲಿಮರಿಗೂ ಮೀಸಲಾತಿ ಕಲ್ಪಿಸಲು ಕರ್ನಾಟಕ ಸಚಿವ ಸಂಪುಟ ಸಭೆ ಶುಕ್ರವಾರ ಕೈಗೊಂಡ ತೀರ್ಮಾನಕ್ಕೆ ರಾಷ್ಟ್ರೀಯ ಬಿಜೆಪಿ ಆಕ್ಷೇಪ  

 ನವದೆಹಲಿ : ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ರಾಷ್ಟ್ರೀಯ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಅಸಾಂವಿಧಾನಿಕ, ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಭಾಗ ಎಂದು ಆರೋಪಿರುವ ಬಿಜೆಪಿ ಮುಖಂಡರು, ಇದು ರಾಷ್ಟ್ರದ ಏಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ರವಿಶಂಕರ್‌ ಪ್ರಸಾದ್‌, ‘ಕಾಂಗ್ರೆಸ್‌ ಪಕ್ಷವು ಸ್ಪರ್ಧಾತ್ಮಕ ವೋಟ್‌ ಬ್ಯಾಂಕ್‌ ರಾಜಕೀಯದಲ್ಲಿ ತೊಡಗಿದೆ. ಇದು ದೇಶದ ಪಾಲಿಗೆ ಅಪಾಯಕಾರಿ. ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ನಿರ್ಧಾರದ ಹಿಂದೆ ರಾಹುಲ್‌ ಗಾಂಧಿ ಇದ್ದಾರೆ. ಯಾಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂಥ ನಿರ್ಧಾರ ತೆಗೆದುಕೊಳ್ಳಲು ರಾಜಕೀಯ ಬಂಡವಾಳ ಇಲ್ಲ’ ಎಂದು ಆರೋಪಿಸಿದರು.

‘ಕರ್ನಾಟಕ ಸರ್ಕಾರದ ಈ ಕ್ರಮ ಕೋಮುವಾದಿ ಮತ್ತು ವೋಟ್ ಬ್ಯಾಂಕ್‌ ರಾಜಕೀಯಕ್ಕೆ ಹೊಸ ದಿಕ್ಕು ತೋರಿದೆ. ಇಂಥ ನಿರ್ಧಾರ ಸಣ್ಣ ಬೆಳವಣಿಗೆಯಾಗಿ ಕಾಣಬಹುದು. ಆದರೆ, ಇದು ರಾಷ್ಟ್ರದ ಮೇಲೆ ಗಂಭೀರ ಪರಿಣಾಮ ಬೀರಬಹುದು’ ಎಂದು ಎಚ್ಚರಿಸಿದರು.

‘ಮುಂದೆ ಸಿನಿಮಾ ಅಥವಾ ರೈಲು ಟಿಕೆಟ್ ತೆಗೆದುಕೊಳ್ಳಲೂ ಮುಸ್ಲಿಮರಿಗೆ ಪ್ರತ್ಯೇಕ ಸರದಿಯ ನಿಯಮ ಜಾರಿ ಮಾಡುತ್ತಾರೆಯೇ?’ ಎಂದು ಪ್ರಶ್ನಿಸಿರುವ ಅವರು, ಸ್ವಾತಂತ್ರ್ಯಾ ಚಳವಳಿ ವೇಳೆ ಮುಸ್ಲಿಮರಿಗೆ ಪ್ರತ್ಯೇಕ ಮತದಾನ, ವಿಶೇಷ ಸ್ಥಾನಮಾನದಂಥ ಕ್ರಮಗಳು ದೇಶವಿಭಜನೆಗೆ ಕಾರಣವಾಯಿತು. ಸುಪ್ರೀಂ ಕೋರ್ಟ್‌ ಧರ್ಮದ ಆಧಾರದ ಮೇಲಿನ ಮೀಸಲಾತಿಯನ್ನು ಸ್ಪಷ್ಟವಾಗಿ ವಿರೋಧಿಸಿದೆ. ಕಾಂಗ್ರೆಸ್‌ ಸರ್ಕಾರದ ಈ ನಡೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ವಿಶ್ವಾಸ ಇದೆ ಎಂದು ಹೇಳಿದರು.

ರಾಹುಲ್‌ಗೂ ಚಾಟಿ:

ರಾಹುಲ್‌ ಗಾಂಧಿ ಅವರು ಸಂವಿಧಾನವನ್ನು ಅರ್ಥ ಮಾಡಿಕೊಂಡಿದ್ದಾರೆಯೇ? ಕಾಂಗ್ರೆಸ್‌ ಅಧಿಕಾರದಲ್ಲಿರುವ ಇತರೆ ರಾಜ್ಯಗಳು ಕರ್ನಾಟಕದ ಮಾದರಿಯನ್ನೇ ಪಾಲಿಸುತ್ತವೆಯೇ? ಬಿಜೆಪಿಯಂತೂ ಇದಕ್ಕೆ ಖಂಡಿತ ವಿರೋಧ ಮಾಡಲಿದೆ ಎಂದರು.

ರಾಜ್ಯದಲ್ಲಿ 2 ಕೋಟಿ ರು.ವರೆಗಿನ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಕಲ್ಪಿಸಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸಚಿವ ಸಂಪುಟ ಗುರುವಾರ ನಿರ್ಧಾರ ತೆಗೆದುಕೊಂಡಿತ್ತು.

2 ಕೋಟಿ ರು.ವರೆಗಿನ ಗುತ್ತಿಗೆ ಕಾಮಗಾರಿಗಳು ಹಾಗೂ 1 ಕೋಟಿ ರು.ವರೆಗಿನ ಖರೀದಿ, ಸೇವೆಗಳಲ್ಲಿ ಮುಸ್ಲಿಮರಿಗೂ ಮೀಸಲಾತಿ ಕಲ್ಪಿಸಲು ಕರ್ನಾಟಕ ಸಚಿವ ಸಂಪುಟ ಸಭೆ ಶುಕ್ರವಾರ ಕೈಗೊಂಡ ತೀರ್ಮಾನಕ್ಕೆ ರಾಷ್ಟ್ರೀಯ ಬಿಜೆಪಿ ಆಕ್ಷೇಪ ಎತ್ತಿ, ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಸರ್ಕಾರದ ನಿರ್ಧಾರವನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ನಡೆ ದೇಶಕ್ಕೇ ಅಪಾಯ: ಬಿಜೆಪಿ

- ಧರ್ಮದ ಆಧಾರದ ಮೀಸಲಿಗೆ ಅವಕಾಶವಿಲ್ಲ- ರೈಲು ಟಿಕೆಟ್‌ಗೂ ಪ್ರತ್ಯೇಕ ಕ್ಯೂ ಮಾಡ್ತೀರಾ?

ಬಿಜೆಪಿ ಕೆಂಡ

- ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಅಸಾಂವಿಧಾನಿಕ, ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಭಾಗ- ಸ್ಪರ್ಧಾತ್ಮಕ ವೋಟ್‌ ಬ್ಯಾಂಕ್‌ ರಾಜಕೀಯದಲ್ಲಿ ಕಾಂಗ್ರೆಸ್‌ ತೊಡಗಿದೆ. ಇದು ಏಕತೆ ದುರ್ಬಲಗೊಳಿಸುತ್ತೆ- ಈ ನಿರ್ಧಾರದ ಹಿಂದೆ ರಾಹುಲ್‌ ಇದ್ದಾರೆ. ಏಕೆಂದರೆ ಸಿದ್ದರಾಮಯ್ಯ ಅವರು ಇಂಥ ನಿರ್ಧಾರ ಕೈಗೊಳ್ಳಲ್ಲ- ಇದು ಸಣ್ಣ ಬೆಳವಣಿಗೆಯಾಗಿ ಕಾಣಬಹುದು. ಆದರೆ ರಾಷ್ಟ್ರದ ಮೇಲೆ ಗಂಭೀರ ಪರಿಣಾಮ ಬೀರಬಹುದು

ಧರ್ಮದ ಆಧಾರದ ಮೇಲಿನ ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ವಿರೋಧಿಸಿದೆ : ರವಿಶಂಕರ ಪ್ರಸಾದ

ಮುಸ್ಲಿಮರಿಗಷ್ಟೇ ಗುತ್ತಿಗೆ ಮೀಸಲು ಕೊಟ್ಟಿಲ್ಲ: ಡಿಕೆಶಿ

- ಅಲ್ಪಸಂಖ್ಯಾತರು, ಹಿಂದುಳಿದವರಿಗೂ ಮೀಸಲಿದೆ

- ಅಲ್ಪಸಂಖ್ಯಾತರೆಂದರೆ ಮುಸ್ಲಿಮರು ಮಾತ್ರವೇ ಅಲ್ಲ

- ಮುಸ್ಲಿಮರಿಗೆ ಮಾತ್ರ ರಾಜ್ಯದಲ್ಲಿ ಶೇ.4ರಷ್ಟು ಗುತ್ತಿಗೆ ಮೀಸಲಾತಿ ನೀಡಲಾಗುತ್ತಿದೆ ಎಂದವರು ಯಾರು?- ಅಲ್ಪಸಂಖ್ಯಾತರು, ಹಿಂದುಳಿದವರಿಗೂ ರಾಜ್ಯದಲ್ಲಿ ಗುತ್ತಿಗೆಯಲ್ಲಿ ಮೀಸಲಾತಿಯನ್ನು ನೀಡಲಾಗುತ್ತಿದೆ- ಅಲ್ಪಸಂಖ್ಯಾತರು ಎಂದರೆ ಮುಸ್ಲಿಂ ಅಷ್ಟೇ ಅಲ್ಲ. ಕ್ರೈಸ್ತ, ಜೈನ, ಪಾರ್ಸಿ, ಸಿಖ್‌ ಧರ್ಮದವರೂ ಬರುತ್ತಾರೆ- ಅಲ್ಪಸಂಖ್ಯಾತರೂ ಬದುಕಲು ನಾವು ಅನುವು ಮಾಡಿಕೊಡಬೇಕಲ್ಲವೇ : ಉಪಮುಖ್ಯಮಂತ್ರಿ ಪ್ರಶ್ನೆ 

 ಬೆಂಗಳೂರು  :  ಗುತ್ತಿಗೆಯಲ್ಲಿ ಮೀಸಲಾತಿ ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಸೀಮಿತವಾಗಿಲ್ಲ. ಅಲ್ಪಸಂಖ್ಯಾತ ಮತ್ತು ಹಿಂದುಳಿದವರಿಗೂ ಮೀಸಲಾತಿ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು. ಈ ಮೂಲಕ ವಿವಾದಕ್ಕೆ ಕಾರಣವಾಗಿರುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಸ್ಲಿಂ ಸಮುದಾಯದವರಿಗೆ ಮಾತ್ರ ಶೇ.4ರಷ್ಟು ಮೀಸಲಾತಿ ನೀಡಲಾಗುತ್ತಿದೆ ಎಂದು ಹೇಳಿದವರು ಯಾರು? ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೂ ಮೀಸಲಾತಿ ನೀಡಲಾಗುತ್ತಿದೆ. ಅದರಲ್ಲಿ ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಂ ಸಮುದಾಯದವರಲ್ಲ. ಕ್ರಿಶ್ಚಿಯನ್‌, ಜೈನ, ಪಾರ್ಸಿ, ಸಿಖ್‌ ಹೀಗೆ ಹಲವು ಧರ್ಮಗಳೂ ಬರುತ್ತವೆ. ಈ ಹಿಂದೆ ಪರಿಶಿಷ್ಟ ಜಾತಿ/ಪಂಗಡದವರಿಗೆ ಗುತ್ತಿಗೆ ಮೀಸಲಾತಿ ನೀಡಲು ತಿದ್ದುಪಡಿ ಮಾಡಲಾಗಿತ್ತು.

 ಈಗ ಅದಕ್ಕೆ ಅಲ್ಪಸಂಖ್ಯಾತರು, ಹಿಂದುಳಿದವರನ್ನು ಸೇರಿಸಲಾಗುತ್ತಿದೆ ಎಂದರು.ಅಲ್ಪಸಂಖ್ಯಾತರಿಗೆ 2 ಕೋಟಿ ರು. ಗುತ್ತಿಗೆ ಮೊತ್ತದಲ್ಲಿ ಮಾತ್ರ ಶೇ.4ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ. ಈ ಕ್ರಮದಿಂದ ಬೇರೆ ಸಮುದಾಯದ ಹಕ್ಕು ಕಸಿಯುತ್ತಿಲ್ಲ. ಅಲ್ಪಸಂಖ್ಯಾತರೂ ಬದುಕಲು ನಾವು ಅನುಕೂಲ ಮಾಡಿಕೊಡಬೇಕಲ್ಲವೇ? ಈ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿಯವರಿಗೆ ನಮ್ಮನ್ನು ನೆನಪು ಮಾಡಿಕೊಳ್ಳದಿದ್ದರೆ ಆಗುವುದಿಲ್ಲ ಎಂದು ಹೇಳಿದರು.

Share this article