;Resize=(412,232))
ಬೆಂಗಳೂರು : ನಾನು ಭ್ರಷ್ಟಾಚಾರ ಬಗ್ಗೆ ಭಾಷಣ ಮಾಡುವಾಗ ಯಾವುದೇ ಸರ್ಕಾರದ ವಿರುದ್ಧ ಹೇಳಿಕೆ ನೀಡಿಲ್ಲ. ಸ್ವಾರ್ಥ ಹಾಗೂ ರಾಜಕಾರಣದ ಕಾರಣಕ್ಕೆ ನನ್ನ ಹೇಳಿಕೆ ತಿರುಚಲಾಗಿದೆ ಎಂದು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಶೇ.63ರಷ್ಟು ಭ್ರಷ್ಟಾಚಾರವಿದೆ ಎಂಬ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಶುಕ್ರವಾರ ಸ್ಪಷ್ಟನೆ ನೀಡಿರುವ ಅವರು, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾನು ಭಾಷಣ ಮಾಡುವಾಗ ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ಬಲಹೀನವಾಗಿವೆ. ಈ ಪೈಕಿ ಪತ್ರಿಕಾ ರಂಗ ಮತ್ತು ನ್ಯಾಯಾಂಗ ಸಮಾಜ ಸರಿಪಡಿಸಲು ಕಷ್ಟಪಡುತ್ತಿವೆ ಎಂದು ಹೇಳಿಕೆ ನೀಡಿದ್ದೆ ಎಂದರು.
ಮುಂದುವರೆದು, ಸಮೀಕ್ಷೆಯೊಂದರ ಪ್ರಕಾರ ಭ್ರಷ್ಟಾಚಾರದ ಸೂಚ್ಯಂಕದಲ್ಲಿ ಜಾಗತಿಕಮಟ್ಟದಲ್ಲಿ ಭಾರತ 96ನೇ ಸ್ಥಾನ ಮತ್ತು ದೇಶದ ಮಟ್ಟದಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಇಡೀ ದೇಶದಲ್ಲಿ ಭ್ರಷ್ಟಾಚಾರದಲ್ಲಿ ರಾಜಸ್ಥಾನ ಶೇ.78 ಮತ್ತು ಕೇರಳ ಶೇ.10ರೊಂದಿಗೆ ಕ್ರಮವಾಗಿ ಮೊದಲ ಮತ್ತು ಕೊನೆಯ ಸ್ಥಾನದಲ್ಲಿವೆ ಎಂದು ಸಮೀಕ್ಷೆಯ ವರದಿ ಉಲ್ಲೇಖಿಸಿದ್ದೆ. ಇದರ ಹೊರತಾಗಿ ನಾನು ಯಾವುದೇ ಸರ್ಕಾರದ ವಿರುದ್ಧ ಹೇಳಿಕೆ ನೀಡಿಲ್ಲ. ಆದರೆ, ನನ್ನ ಹೇಳಿಕೆ ತಿರುಚಲಾಗಿದೆ. ಭಾಷಣವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೀಗೆ ತಿರುಚಿ ಬರೆಯಲಾಗಿದೆ. ಇದು ತಪ್ಪು. ಇದನ್ನು ವರದಿ ಮಾಡಿದ ವರದಿಗಾರ ಸ್ಪಷ್ಟನೆ ನೀಡಬೇಕು. ಇಲ್ಲವಾದರೆ, ಆ ವರದಿಗಾರನ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವುದಾಗಿ ಹೇಳಿದರು.
ಈ ದೇಶದಲ್ಲಿ ಭ್ರಷ್ಟಾಚಾರ ಇಂದು ಮತ್ತು ನಾಳೆಯದಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಇತ್ತು. ಸ್ವಾತಂತ್ರ್ಯಾ ನಂತರದಿಂದ ಈಗಲೂ ಮುಂದುವರೆದಿದೆ. ಈ ಭ್ರಷ್ಟಾಚಾರಕ್ಕೆ ನಾನೂ ಸೇರಿ ಇಡೀ ದೇಶದ 146 ಕೋಟಿ ಜನರೂ ಕಾರಣ. ಭ್ರಷ್ಟಾಚಾರ ತೊಲಗದಿದ್ದರೆ ಈ ದೇಶ ಅಧೋಗತಿಗೆ ತಲುಪಲಿದೆ ಎಂದು ನಾನು ಭಾಷಣದಲ್ಲಿ ಹೇಳಿದ್ದೇನೆ. ನಾನು ಉಪ ಲೋಕಾಯುಕ್ತನಾಗಿ ನೇಮಕವಾದ ಒಂದು ವಾರದೊಳಗೆ ಆಸ್ತಿ ಘೋಷಣೆ ಮಾಡಿಕೊಂಡಿದ್ದೆ. ದುಡ್ಡು ಮಾಡಿದ್ದು ಸಾಕು. ನಾವೆಲ್ಲರೂ ಸೇರಿ ಸಮಾಜ ಸರಿಪಡಿಸೋಣ ಎಂದು ಕಾರ್ಯಕ್ರಮದಲ್ಲಿದ್ದ ಹಿರಿಯ ವಕೀಲರನ್ನು ಹುರಿದುಂಬಿಸಿದ್ದೆ. ಇಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಬಗ್ಗೆ ನಾನು ಮಾತನಾಡಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ಭ್ರಷ್ಟಾಚಾರ ಅಂತ್ಯ ಕಾಣಬೇಕು. ಕೇಂದ್ರ ಅಥವಾ ರಾಜ್ಯ ಎಲ್ಲ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಭ್ರಷ್ಟಾಚಾರ ಎಂಬುದು ಪೆಡಂಭೂತ ಇದ್ದಂತೆ. ನಾವು ಶತ್ರುಗಳನ್ನು ಗೆಲ್ಲಬಹುದು. ಆದರೆ, ಭ್ರಷ್ಟಾಚಾರದ ವಿರುದ್ಧ ಗೆಲ್ಲುವುದು ಸುಲಭವಲ್ಲ. ಈ ಭ್ರಷ್ಟಾಚಾರಕ್ಕೆ ಎಲ್ಲ ಸರ್ಕಾರಗಳು, ನಾವೆಲ್ಲ ಪ್ರಜೆಗಳು ಕಾರಣ ಎಂದಷ್ಟೇ ನಾನು ಕಾರ್ಯಕ್ರಮದ ಭಾಷಣದಲ್ಲಿ ಹೇಳಿದ್ದೇನೆ. ಇದನ್ನು ಬಿಟ್ಟು ಯಾವುದೇ ಸರ್ಕಾರದ ಬಗ್ಗೆ ನಾನು ಮಾತನಾಡಿಲ್ಲ ಎಂದು ಉಪಲೋಕಾಯುಕ್ತರು ಮತ್ತೊಮ್ಮೆ ಸ್ಪಷ್ಟಪಡಿಸಿದರು.