ಫಿಸಿಯೋಥೆರಪಿ ಕೋರ್ಸ್‌ಗೆ ‘ನೀಟ್’ ಕಡ್ಡಾಯ : ಶರಣ ಪ್ರಕಾಶ್ ಪಾಟೀಲ್

KannadaprabhaNewsNetwork | Updated : Apr 26 2025, 04:19 AM IST

ಸಾರಾಂಶ

ಫಿಸಿಯೋಥೆರಪಿ ಕೋರ್ಸ್ ಪ್ರವೇಶಕ್ಕೆ ನೀಟ್ ಪರೀಕ್ಷೆ ಕಡ್ಡಾಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

 ಬೆಂಗಳೂರು : ಫಿಸಿಯೋಥೆರಪಿ ಕೋರ್ಸ್ ಪ್ರವೇಶಕ್ಕೆ ನೀಟ್ ಪರೀಕ್ಷೆ ಕಡ್ಡಾಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ‘ಕರ್ನಾಟಕ ಫಿಸಿಯೋಕಾನ್-2025’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಕೋರ್ಸ್ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಚಿಕಿತ್ಸಾ ಕ್ರಮವನ್ನು ಆಳವಾಗಿ ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಗರದಲ್ಲಿ ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ ಸೈನ್ಸ್‌ ಕೌನ್ಸಿಲ್ (ಕೆಎಸ್ಎಎಚ್‌ಸಿ) ಹೊಸ ಕಚೇರಿಯನ್ನು ಆರಂಭಿಸಲಾಗಿದೆ. ಈ ವರ್ಷ ಅಲೈಡ್ ಸೈನ್ಸ್‌ನ 28 ಕಾಲೇಜುಗಳು ಆರಂಭಕ್ಕೆ ಅನುಮತಿ ನೀಡಲಾಗಿದೆ. ಫಿಸಿಯೋಥೆರಪಿ ಕೋರ್ಸ್ ಆರಂಭಕ್ಕೆ ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುತ್ತದೆ. ವೃತ್ತಿಪರರಿಂದ ಗುಣಮಟ್ಟದ ಮತ್ತು ನಿಖರವಾದ ಫಿಸಿಯೋಥೆರಪಿ ಸೇವೆ ಸಿಗುತ್ತದೆ. ಅಲ್ಲದೇ, ನಕಲಿ ಫಿಸಿಯೋಥೆರಪಿಸ್ಟ್‌ಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಫಿಸಿಯೋಥೆರಪಿ ವೃತ್ತಿಯ ಮಹತ್ವದ ಪಾತ್ರ ವಹಿಸಲಿದೆ. ಮುಂದಿನ ದಿನಗಳಲ್ಲಿ ಇನ್ನು ವೇಗವಾಗಿ ಬೆಳವಣಿಗೆ ಸಾಧಿಸಲಿದೆ ಎಂದರು.

ಸಮ್ಮೇಳನದ ಸಂಯೋಜಕ ಡಾ। ಎ.ಸುರೇಶ್ ಬಾಬು ರೆಡ್ಡಿ ಮಾತನಾಡಿ, ಆರೋಗ್ಯ ವಲಯ, ಕ್ರೀಡಾ ಕ್ಷೇತ್ರ, ಯೋಗಕ್ಷೇಮ ವಲಯ ಸೇರಿದಂತೆ ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಉತ್ತಮ ಆರೋಗ್ಯ, ದೃಢತೆ, ಆರೋಗ್ಯ ಸಮಸ್ಯೆಗಳಿಂದ ಬಿಡುಗಡೆಗೆ ಫಿಸಿಯೋಥೆರಪಿ ಮಹತ್ವದ ಪಾತ್ರ ವಹಿಸುತ್ತದೆ. ಕೋರ್ಸ್ ಮೂಲಕ ವೃತ್ತಿಪರತೆ ರೂಢಿಸಿಕೊಂಡರೆ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ। ಬಿ.ಸಿ.ಭಗವಾನ್, ಆರೋಗ್ಯ ವೃತ್ತಿಪರರ ರಾಷ್ಟ್ರೀಯ ಆಯೋಗದ ಅಧ್ಯಕ್ಷೆ ಡಾ। ಯಜ್ಞಶುಕ್ಲಾ ಉಪಸ್ಥಿತರಿದ್ದರು.

Share this article