ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌

Published : Jun 18, 2025, 12:08 PM IST
Nikhil kumaraswamy

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

 ತುಮಕೂರು :  ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬುಕ್ಕಾಪಟ್ಟಣದಲ್ಲಿ ಮಂಗಳವಾರ ನಡೆದ 2ನೇ ದಿನದ ಜೆಡಿಎಸ್‌ ಸದಸ್ಯತ್ವ ಅಭಿಯಾನದಲ್ಲಿ ಅವರು ಮಾತನಾಡಿದರು. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುವುದು ತಪ್ಪಿಲ್ಲ. ಆದರೆ, ಎಲ್ಲೊ ಒಂದು ಕಡೆ ಗ್ಯಾರಂಟಿ ಯೋಜನೆ ಕೊಡುವ ನೆಪದಲ್ಲಿ ಅಭಿವೃದ್ಧಿ ಕಾರ್ಯವನ್ನು ಮರೆತಿದ್ದಾರೆ ಎಂದು ಆರೋಪಿಸಿದರು.

ಗ್ಯಾರಂಟಿ ಹೆಸರಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಎಷ್ಟು ಜನ ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದ್ದೀರಿ? ಕಳೆದ 2 ವರ್ಷಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ನಿಮ್ಮ ಸರ್ಕಾರದಿಂದ ಎಷ್ಟು ಅನುದಾನ ಕೊಡಲು ಸಾಧ್ಯವಾಗಿದೆ ಎಂದು ಅವರು ಪ್ರಶ್ನಿಸಿದರು.

ಯಾವುದಾದರೂ ಉಪ ಚುನಾವಣೆ, ಲೋಕಸಭಾ ಚುನಾವಣೆಗಳು ಬಂದಾಗ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದಾರೆ. ಗ್ಯಾರಂಟಿಗಳ ಪೈಕಿ ಕೆಲ ಗ್ಯಾರಂಟಿಯನ್ನು ಮಾತ್ರ ಕೊಡುತ್ತಿದ್ದು, ಇನ್ನು ಉಳಿದ ಗ್ಯಾರಂಟಿಗಳನ್ನು ಇದುವರೆಗೂ ಕೊಟ್ಟಿಲ್ಲ. ಸಮರ್ಪಕವಾಗಿ ಈ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂಬುದು ರಾಜ್ಯದ ಜನತೆಯ ಅಭಿಪ್ರಾಯವಾಗಿದೆ ಎಂದರು.

ರಾಜ್ಯದಲ್ಲಿ ತೆರಿಗೆ ಪ್ರಮಾಣವನ್ನು ಜಾಸ್ತಿ ಮಾಡಲಾಗಿದೆ. ಆದರೂ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ಕೊಡಲಾಗುತ್ತಿಲ್ಲ. ಇದರೊಂದಿಗೆ ಅಭಿವೃದ್ಧಿ ಕಾರ್ಯಗಳು ಕೂಡಾ ಸ್ಥಗಿತಗೊಂಡಿವೆ. ಒಟ್ಟಾರೆ ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದರು.

ಜೆಡಿಎಸ್ ನಾಯಕರನ್ನು ಬೆಳೆಸುವ ಪಕ್ಷ:

ಜೆಡಿಎಸ್ ಪಕ್ಷ ಯಾವಾಗಲೂ ನಾಯಕರನ್ನು ಬೆಳೆಸುವ ಪಕ್ಷ. ಈ ಪಕ್ಷದಲ್ಲಿ ಹೊಸ ನಾಯಕರನ್ನು ಬೆಳೆಸುವ ಕಾರ್ಯಕರ್ತರು ಇದ್ದಾರೆ. ಎಷ್ಟೋ ಜನ ನಾಯಕರು ಈ ಪಕ್ಷದಿಂದ ಬೆಳೆದು ಬೇರೆ, ಬೇರೆ ಪಕ್ಷಗಳಿಗೆ ಹೋಗಿರುವ ಇತಿಹಾಸವನ್ನು ನಾವೆಲ್ಲರೂ ನೋಡಿದ್ದೇವೆ. ಜೆಡಿಎಸ್, ನಾಯಕರನ್ನು ತಯಾರು ಮಾಡುವ ಫ್ಯಾಕ್ಟರಿ ಆಗಿದೆ. ಹಾಗಾಗಿ, ಜೆಡಿಎಸ್ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಜೆಡಿಎಸ್ ಭವಿಷ್ಯ ಸುಭದ್ರವಾಗಿದೆ. ಇನ್ನೇನಿದ್ದರೂ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲೂ ಕಾರ್ಯೋನ್ಮುಖರಾಗಬೇಕಿದೆ ಎಂದರು.

ಇಂದು ಕೊರಟಗೆರೆಗೆ ನಿಖಿಲ್‌:  ನಿಖಿಲ್ ಕುಮಾರಸ್ವಾಮಿಯವರು ಬುಧವಾರ ಕೊರಟಗೆರೆ, ಮಧುಗಿರಿಗೆ ಆಗಮಿಸಲಿದ್ದಾರೆ. ಅವರನ್ನು ಭವ್ಯವಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 500ಕ್ಕೂ ಹೆಚ್ಚಿನ ಯುವಕರಿಂದ ಬೈಕ್ ರ್‍ಯಾಲಿ ಆಯೋಜಿಸಲಾಗಿದೆ. ಮೆರವಣಿಗೆ ನಂತರ ಹಿಂದೂ ಸಾಧರ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರ್‌ಲಾಲ್ ತಿಳಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿದ್ದು ಅಹಿಂದ ಲೀಡರ್‌ ಆಗಿದ್ದರೆ ಪುತ್ರ ಕ್ಷೇತ್ರ ಆಯ್ಕೆ ಏಕೆ?: ಗೌಡ
ತಿರುವನಂತಪುರ ಪಾಲಿಕೆಗೆ ಬಿಜೆಪಿ ಮೇಯರ್‌ : ಇದೇ ಮೊದಲು