ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಪ್ರಶ್ನೆಯೇ ಇಲ್ಲ - ಕಂಟ್ರಾಕ್ಟರ್‌ ಡೆತ್‌ನೋಟಲ್ಲಿ ಪ್ರಿಯಾಂಕ್‌ ಹೆಸರಿಲ್ಲ: ಸಿಎಂ

ಸಾರಾಂಶ

  ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪಾತ್ರವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಪ್ರಿಯಾಂಕ್‌ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು : ‘ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪಾತ್ರವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಇದು ರಾಜಕೀಯ ದ್ವೇಷದಿಂದ ಮಾಡುತ್ತಿರುವ ಆರೋಪ ಆಗಿರುವುದರಿಂದ ಪ್ರಿಯಾಂಕ್‌ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ್‌ ಖರ್ಗೆಯವರು ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಒತ್ತಾಯ ರಾಜಕೀಯ ಪ್ರೇರಿತ. ಪ್ರಕರಣದಲ್ಲಿ ಪ್ರಿಯಾಂಕ್‌ ಪಾತ್ರವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಜತೆಗೆ ಪ್ರಕರಣದಲ್ಲಿ ಯಾವುದೇ ವಿಚಾರಣೆಗೂ ತಾವು ಸಿದ್ಧ ಎಂದು ಪ್ರಿಯಾಂಕ್‌ ಹೇಳಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಇಂಥದ್ದೇ ಪ್ರಕರಣದಲ್ಲಿ ಹಿಂದೆ ಬಿಜೆಪಿ ಕೆ.ಎಸ್‌.ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆದಿರಲಿಲ್ಲವೇ? ಎಂಬ ಪ್ರಶ್ನೆಗೆ, ‘ಆಗ ಗುತ್ತಿಗೆದಾರನ ಡೆತ್‌ನೋಟ್‌ನಲ್ಲಿ ಈಶ್ವರಪ್ಪ ಹೆಸರು ಬರೆದಿದ್ದರು. ಈಗ ಈ ಗುತ್ತಿಗೆದಾರನ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್‌ ಹೆಸರು ಇದೆಯಾ? ಪ್ರಿಯಾಂಕ್‌ ಖರ್ಗೆ ಹೆಸರು ಎಲ್ಲೂ ಇಲ್ಲ. ಜತೆಗೆ ಅವರು ಎಲ್ಲಾ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ. ಹೀಗಾಗಿ ಮೊದಲು ಸಿಐಡಿ ತನಿಖೆ ನಡೆಸಿ ವರದಿ ಕೊಡಲಿ’ ಎಂದು ಹೇಳಿದರು.

ಬಿಜೆಪಿ ಸಿಬಿಐಗೆ ವಹಿಸಿಲ್ಲ:

ಬಿಜೆಪಿಯವರು ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಪೊಲೀಸರ ಬಗ್ಗೆ ಬಿಜೆಪಿಯವರಿಗೆ ನಂಬಿಕೆಯಿಲ್ಲವೇ? ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಈಗ ಸಿಬಿಐ ತನಿಖೆ ಬೇಕು ಎನ್ನಲು ಅವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ್‌ ಪಾಂಚಾಳ ಎಂಬುವರು ಪ್ರಿಯಾಂಕ್‌ ಖರ್ಗೆ ಆಪ್ತನೊಬ್ಬ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಪ್ರಿಯಾಂಕ್‌ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿದೆ.

Share this article