ಕನ್ನಡಪ್ರಭ ವಾರ್ತೆ ಮಂಡ್ಯ
ರೈತರ ಒಂದಿಂಚೂ ಜಾಗವನ್ನು ವಕ್ಫ್ ಬೋರ್ಡ್‌ನವರು ಕಬಳಿಕೆ ಮಾಡಲು ಬಿಡುವುದಿಲ್ಲ. ಮೊದಲು ಬೆಂಗಳೂರಿನ ಐಷಾರಾಮಿ ಹೊಟೇಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಿ. ಅದು ಬಿಟ್ಟು ರೈತರ ತಂಟೆಗೆ ಬಂದರೆ ನೇಗಿಲು ತೆಗೆದುಕೊಂಡು ಹೊಡೀತಾರಷ್ಟೇ ಎಂದು ಶಾಸಕ ಪಿ.ರವಿಕುಮಾರ್ ವಕ್ಫ್ ಬೋರ್ಡ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ತಾಲೂಕಿನ ಮುತ್ತೇಗೆರೆ ಗ್ರಾಮದಲ್ಲಿ 10 ಕೋಟಿ ರು. ವೆಚ್ಚದಲ್ಲಿ ಬಸರಾಳು-ಮುತ್ತೇಗೆರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವಕ್ಫ್ ಬೋರ್ಡ್‌ನವರು ಮೊದಲು ಬೆಂಗಳೂರಿನಲ್ಲಿರುವ ವಿಂಡ್ಸರ್ ಮ್ಯಾನರ್, ರ್‍ಯಾಡಿಸನ್ ಬ್ಲೂ, ಏರ್‌ಲೈನ್ಸ್ ಹೊಟೇಲ್‌ಗಳನ್ನು ವಶಕ್ಕೆ ಪಡೆದು ವಕ್ಫ್ ಆಸ್ತಿ ಎಂದು ಬೋರ್ಡ್ ಹಾಕಲಿ. ಅದೇ ಸಾವಿರಾರು ಕೋಟಿ ರು. ಮೌಲ್ಯದ್ದಾಗಿದೆ. ಅದನ್ನು ಬಿಟ್ಟು ರೈತರಿಗೆ ಸೇರಿದ ಮೂರ್‍ನಾಲ್ಕು ಗುಂಟೆ ಜಮೀನು ತಮ್ಮದು ಎಂದು ನೋಟಿಸ್ ಕೊಡುವುದು ಸರಿಯಲ್ಲ. ರೈತರ ಜಮೀನು ವಶಪಡಿಸಿಕೊಳ್ಳಲು ನಾವೂ ಬಿಡುವುದಿಲ್ಲ. ನಾವು ರೈತರ ಪರವಾಗಿದ್ದೇವೆ ಎಂದು ನೇರವಾಗಿ ಹೇಳಿದರು.ರಾಜಕೀಯ ಭಯೋತ್ಪಾದನೆ:
ಬಿಜೆಪಿ-ಜೆಡಿಎಸ್ ಅಧಿಕಾರಾವಧಿಯಲ್ಲಿ ವಕ್ಫ್ ಆಸ್ತಿಗಳನ್ನು ಗುರುತಿಸಿ ನೋಟಿಸ್ ನೀಡಲಾಗಿತ್ತು. ಮೊಳಕೆ ಹಾಕಿದ್ದೂ ಅವರೇ, ಅದಕ್ಕೆ ನೀರು, ಗೊಬ್ಬರ ಹಾಕಿ ಪೋಷಿಸಿ ಈಗ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸಲು ಕುತಂತ್ರ ನಡೆಸುತ್ತಿದ್ದಾರೆ. ಯಾವ ಕುತಂತ್ರವೂ ನಡೆಯುವುದಿಲ್ಲ. ಇದೊಂದು ರೀತಿಯಲ್ಲಿ ರಾಜಕಾರಣದ ಭಯೋತ್ಪಾದನೆಯಾಗಿದೆ ಎಂದು ಟೀಕಿಸಿದರು.ಎಲ್ಲವನ್ನೂ ಮಾಡಿರುವ ಬಿಜೆಪಿಯವರು ಚುನಾವಣೆ ಸಮಯದಲ್ಲಿ ಇದನ್ನು ಆಚೆ ತಂದು ಹಿಂದೂಗಳ ಜಮೀನು, ದೇವಸ್ಥಾನ ಕಿತ್ತುಕೊಳ್ಳುತ್ತಿದ್ದಾರೆ ಎಂದು ನಾಟಕವಾಡುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ರೈತರ ಜಮೀನು ಕೊಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ನುಡಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಅಪರ ಮುಖ್ಯ ಕಾರ್‍ಯದರ್ಶಿಯಾಗಿದ್ದ ವೇಳೆ 21 ಸಾವಿರ ವಕ್ಫ್ ಆಸ್ತಿಗಳ ಖಾತೆ ಬದಲಾವಣೆ ಕುರಿತು ಪತ್ರ ಬರೆದಿದ್ದರೆ ಅವರ ವಿರುದ್ಧವೂ ತನಿಖೆಯಾಗಲಿ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಮಾಡಿರುವ ಅಧಿಸೂಚನೆಯನ್ನೇ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆಲುವು:
ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಅವರು 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಗೆದ್ದಿದ್ದರು. ಆದರೆ, ಆ ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆಯೂ ಸರಿಯಾಗಿಲ್ಲ. ಬೈಕ್‌ನಲ್ಲಿ ಪ್ರಚಾರಕ್ಕೆ ಹೋಗುವಾಗ ನಿಖಿಲ್ ಬಿದ್ದು ಗಾಯಗೊಂಡಿರುವುದೇ ಅದಕ್ಕೆ ಸಾಕ್ಷಿ. ನಾನೂ ಕ್ಷೇತ್ರದಾದ್ಯಂತ ಓಡಾಡಿದ್ದೇನೆ. ಅವರಿಗೆ ಗೆಲುವು ಸಾಧ್ಯವಿಲ್ಲ ಎಂದರು.ನಾವೇ ಒರಿಜಿನಲ್ ಒಕ್ಕಲಿಗರು:
ನಾವೇ ರೆಬಲ್ ಒಕ್ಕಲಿಗರಲ್ಲ, ನಿಜವಾದ ಒಕ್ಕಲಿಗರು. ಆದರೆ, ಜನರು ನಮ್ಮನ್ನು ಏಕೆ ಬೆಂಬಲಿಸುವುದಿಲ್ಲ ಎಂಬುದೇ ಅರ್ಥವಾಗದ ಪ್ರಶ್ನೆಯಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಆದರೆ, ಜನ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕುಮಾರಸ್ವಾಮಿ ನಿಜವಾದ ಒಕ್ಕಲಿಗರಲ್ಲ ಎಂದು ಹೇಳಲಿಲ್ಲ. ಆದರೆ, ನಾವೂ ನಿಜವಾದ ಒಕ್ಕಲಿಗರೇ, ಜನರು ಅವರನ್ನು ಪ್ರೀತಿಸುವಷ್ಟು ನಮ್ಮನ್ನು ಪ್ರೀತಿಸುವುದಿಲ್ಲ ಎಂಬ ಬಗ್ಗೆ ಬೇಸರವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಗಲುಗನಸು:ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಗಲುಗನಸು ಕಾಣುತ್ತಿದ್ದಾರೆ. ಬೆಳಗ್ಗೆ ಬೇರೆ ಹೇಳುತ್ತಾರೆ. ರಾತ್ರಿ ಮತ್ತೊಂದು ಹೇಳುತ್ತಾರೆ. ಮೊದಲು ಅವರ ಪಕ್ಷದ ಬಸವರಾಜ್ ಯತ್ನಾಳ್, ರಮೇಶ್ ಜಾರಕಿಹೊಳಿ ಅವರ ಬಾಯಿ ಮುಚ್ಚಿಸಿ, ನಂತರ ನಮ್ಮ ಸಿಎಂ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.
ಬೆಟ್ಟಿಂಗ್‌ಗೆ ಕಡಿವಾಣ ಹಾಕಿ:ಮಂಡ್ಯ ಕ್ಷೇತ್ರದಲ್ಲಿ ಬೆಟ್ಟಿಂಗ್, ಅಕ್ರಮ ಜೂಜು ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯ. ಇಲ್ಲದಿದ್ದರೆ ಯುವಕರು ತಮ್ಮ ಪೂರ್ವಿಕರ ಆಸ್ತಿಗಳನ್ನು ಮಾರಾಟ ಮಾಡಿ ಬೀದಿ ಪಾಲಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಬೂದನೂರು, ಹನಕೆರೆ, ತುಂಬುಕೆರೆ, ಕನ್ನಲಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬೆಟ್ಟಿಂಗ್, ಜೂಜು ದಂಧೆ ಹೆಚ್ಚಾಗಿ ನಡೆಯುತ್ತಿದೆ. ಇತ್ತೀಚೆಗೆ ಬೂದನೂರಿನಲ್ಲಿ ಮೂವರು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಟ್ಯಂತರ ರು. ಸಾಲ ಮಾಡಿಕೊಂಡವರು ನನ್ನ ಬಳಿ ಬಂದು ಸಹಾಯ ಕೇಳಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಕಡಿವಾಣ ಹಾಕಬೇಕು. ನಾವು ನಿಯೋಜಿಸಿರುವ ಅಕಾರಿಗಳೇ ಇಂತಹ ದಂಧೆಗೆ ಸಹಕಾರ ನೀಡುತ್ತಿರುವುದು ಕಂಡು ಬಂದಲ್ಲಿ ಅವರ ವಿರುದ್ಧವೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.