;Resize=(412,232))
ನವದೆಹಲಿ : ‘ನವೆಂಬರ್ ಕ್ರಾಂತಿಯೂ ಇಲ್ಲ, ಡಿಸೆಂಬರ್ ಕ್ರಾಂತಿಯೂ ಇಲ್ಲ. ಜನವರಿ, ಫೆಬ್ರವರಿಗೂ ಏನೂ ಆಗುವುದಿಲ್ಲ. ಕ್ರಾಂತಿ ಆಗುವುದೇನಿದ್ದರೂ 2028ರಲ್ಲಿ. ಅದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ನವೆಂಬರ್ ಕ್ರಾಂತಿ’ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಯಾರೋ ಸುಮ್ಮನೆ ಹೇಳುತ್ತಿದ್ದಾರೆ. ಪಕ್ಷ ನಮಗೆ ಬಿಹಾರ ಚುನಾವಣೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನೀಡಿದ್ದು, ಅದನ್ನು ನಾವು ಮಾಡುತ್ತಿದ್ದೇವೆ. ಇದರ ಹೊರತಾಗಿ ಬೇರೆ ಯಾವುದೇ ಕ್ರಾಂತಿ ಆಗುವುದಿಲ್ಲ’ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಈ ಬಗ್ಗೆ ನಾನು ಏನಾದರೂ ಹೇಳಿದ್ದೇನಾ? ಸಿಎಂ ಸಿದ್ದರಾಮಯ್ಯ ಏನಾದರೂ ಹೇಳಿದ್ದಾರಾ? ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಹೋಗುತ್ತೇವೆ. ಸಿದ್ದರಾಮಯ್ಯನವರು ಐದು ವರ್ಷವೂ ಇರಬೇಕು ಎಂದು ಪಕ್ಷ ನಿರ್ಧರಿಸಿದರೆ ಅವರು ಐದು ವರ್ಷ ಪೂರೈಸುತ್ತಾರೆ. 10, 15 ವರ್ಷವೂ ಇರುತ್ತಾರೆ. ನಮಗೆ ಕೊಟ್ಟ ಕೆಲಸವನ್ನು ಮಾತ್ರ ನಾವು ಮಾಡಿಕೊಂಡು ಹೋಗುತ್ತಿದ್ದೇವೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ರೇಖೆ ಬಿಟ್ಟು ಎಂದಿಗೂ ಹೋಗುವುದಿಲ್ಲ’ ಎಂದು ತಿಳಿಸಿದರು.
ಸಚಿವ ಸಂಪುಟ ಪುನಾರಚನೆ ಮತ್ತು ಹೈಕಮಾಂಡ್ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಯಾವುದೇ ಕಾರ್ಯಕ್ರಮ ಇಲ್ಲ. ಸಚಿವ ಸಂಪುಟ ಪುನಾರಚನೆ ಕುರಿತು ನನ್ನೊಂದಿಗೆ ಯಾರೂ ಚರ್ಚೆ ನಡೆಸಿಲ್ಲ. ಸಂಪುಟ ಪುನಾರಚನೆ ಮುಖ್ಯಮಂತ್ರಿಯ ವಿಶೇಷ ಹಕ್ಕು. ಅವರು ಅದನ್ನು ಮಾಡಲಿ. ಈ ವಿಷಯವಾಗಿ ನಾನು ಯಾವುದೇ ನಾಯಕರನ್ನು ಭೇಟಿ ಮಾಡುವುದಿಲ್ಲ. ಪಕ್ಷ ಸಂಘಟನೆ, ಮತ ಚೋರಿ ಅಭಿಯಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಗತ್ಯಬಿದ್ದರೆ ನಾಯಕರನ್ನು ಭೇಟಿ ಮಾಡಬೇಕಾಗುತ್ತದೆ. ಮತಗಳ್ಳತನ ವಿಚಾರವಾಗಿ ಬುಧವಾರ ರಾತ್ರಿ ಸಭೆ ಮಾಡಿದ್ದೇವೆ, ಗುರುವಾರವೂ ಸಭೆ ಮಾಡಿದ್ದೇವೆ. ಸದ್ಯ, ರಾಜ್ಯದ ನದಿ ನೀರು ಯೋಜನೆಗಳಿಗೆ ಸಂಬಂಧಿಸಿದಂತೆ ಕಾನೂನು ತಜ್ಞರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದೇನೆ. ಮೇಕೆದಾಟು ಯೋಜನೆ ವಿಚಾರವಾಗಿ ಪ್ರತ್ಯೇಕ ಪೀಠ ರಚಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ದಿನಾಂಕ ನಿಗದಿ ಮಾಡಲಿದ್ದು, ರಾಜ್ಯಕ್ಕೆ ನ್ಯಾಯ ಸಿಗಲಿ ಎಂದು ಪ್ರಾರ್ಥನೆ ಮಾಡೋಣ’ ಎಂದರು.
ಸಂಪುಟ ವಿಸ್ತರಣೆ ಆಕಾಂಕ್ಷಿಗಳಿಗೆ ಏನು ಹೇಳುತ್ತೀರಾ ಎಂಬ ಪ್ರಶ್ನೆಗೆ, ‘ಅದೆಲ್ಲವನ್ನು ದೆಹಲಿ ನಾಯಕರು ಯಾವಾಗ, ಯಾವ ರೀತಿ ಹೇಳಬೇಕೋ, ಆ ರೀತಿ ಹೇಳುತ್ತಾರೆ’ ಎಂದರು.
ಹರಿಯಾಣದಲ್ಲಿ ನಡೆದಿರುವ ಮತಗಳ್ಳತನ ವಿಚಾರವಾಗಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತೀರಾ ಎಂಬ ಪ್ರಶ್ನೆಗೆ, ‘ಖಂಡಿತವಾಗಿ ಮಾಡುತ್ತೇವೆ. ರಾಜ್ಯದಲ್ಲಿ ಈ ಸಂಬಂಧ ಈಗಾಗಲೇ ಲಕ್ಷಾಂತರ ಸಹಿ ಸಂಗ್ರಹ ಮಾಡಿದ್ದೇವೆ. ಅದನ್ನು ನ.9 ರಂದು ದೆಹಲಿಗೆ ತೆಗೆದುಕೊಂಡು ಬರುತ್ತೇವೆ. ಈ ಅಭಿಯಾನದಲ್ಲಿ ಯಾರು ಕೆಲಸ ಮಾಡಿಲ್ಲವೋ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಸಹಿ ಸಂಗ್ರಹ ಅಭಿಯಾನದಲ್ಲಿ ಸರಿಯಾಗಿ ಜವಾಬ್ದಾರಿ ನಿಭಾಯಿಸದವರನ್ನು ಅವರ ಹುದ್ದೆಯಿಂದ ಕಿತ್ತೊಗೆಯಿರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ’ ಎಂದರು.
ಆರ್ಎಸ್ಎಸ್ ನಿಯಂತ್ರಣ ಕುರಿತ ಪ್ರಶ್ನೆಗೆ, ‘ನಾವು ಆರ್‌ಎಸ್‌ಎಸ್ ಅನ್ನು ನಿಯಂತ್ರಿಸುತ್ತೇವೆ ಎಂದು ಎಲ್ಲಿ ಹೇಳಿದ್ದೇವೆ? ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು ಎಂದಷ್ಟೇ ಹೇಳಿದ್ದೇವೆ. ಇದು ಎಲ್ಲರಿಗೂ ಅನ್ವಯವಾಗಲಿದೆ. ಆರ್‌ಎಸ್‌ಎಸ್ ಕಾರ್ಯಕ್ರಮ ಮಾಡಬಾರದು ಎಂದು ನಾವೆಲ್ಲಿ ಹೇಳಿದ್ದೇವೆ?’ ಎಂದು ಪ್ರಶ್ನಿಸಿದರು.