- ರಾಜಣ್ಣ ಕೊನೆವರೆಗೂ ಕೈನಲ್ಲೇ ಇರುತ್ತಾರೆ
- ಅವರು ಯಾವತ್ತೂ ಆರೆಸ್ಸೆಸ್ ಗೀತೆ ಹಾಡಿಲ್ಲ----
ರಾಜಣ್ಣ ಮಗ ಹೇಳಿದ್ದೇನು?- ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಎಂಬ ಬಾಲಕೃಷ್ಣ ಆರೋಪಕ್ಕೆ ಕಿಡಿ
- ರಾಜಣ್ಣ ಪುತ್ರ ರಾಜೇಂದ್ರರಿಂದ ಮಾಗಡಿ ಶಾಸಕನಿಗೆ ತಿರುಗೇಟು- ಸೆಪ್ಟೆಂಬರ್ ತಿಂಗಳಲ್ಲಿ ಬ್ರೈನ್ ಮ್ಯಾಪಿಂಗ್ ಮಾಡಿ ಎಂದು ಸವಾಲು
- ಯಾರು ಯಾರ ಪರ ಇದ್ದಾರೆ ಎಂದು ಮ್ಯಾಪಿಂಗ್ ವೇಳೆ ಗೊತ್ತಾಗುತ್ತೆ- ನಾಲಿಗೆ ಮೇಲೆ ಹಿಡಿತ ಇಟ್ಕೊಂಡು ಮಾತನಾಡಿ: ಬಾಲಕೃಷ್ಣಗೆ ಟಾಂಗ್
--ಕನ್ನಡಪ್ರಭ ವಾರ್ತೆ ಬೆಂಗಳೂರು
‘ಮಾಗಡಿ ಶಾಸಕ ಬಾಲಕೃಷ್ಣ ಅವರ ತಂಡವೇ ಬಿಜೆಪಿಗೆ ಹೋಗಲಿದೆ. ಅದನ್ನೇ ರಾಜಣ್ಣ ಅವರು ಸೆಪ್ಟೆಂಬರ್ ಕ್ರಾಂತಿ ಎಂದಿರಬಹುದು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ 60 ಮಂದಿ ಶಾಸಕರು ಬಿಜೆಪಿಗೆ ಹೋಗುವುದಾಗಿ ಹೇಳಿದ್ದಾರೆ. ಅವರು ಇವರೇ ಇರಬಹುದು’ ಎಂದು ಎಚ್.ಸಿ. ಬಾಲಕೃಷ್ಣ ಅವರಿಗೆ ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ ತಿರುಗೇಟು ನೀಡಿದ್ದಾರೆ.ಕೆ.ಎನ್. ರಾಜಣ್ಣ ಬಿಜೆಪಿಗೆ ಹೋಗಲಿದ್ದಾರೆ ಎಂಬ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ, ಜೆಡಿಎಸ್ ಬಳಿಕ ಈಗ ಕಾಂಗ್ರೆಸ್ ಶಾಸಕರಾಗಿರುವ ಬಾಲಕೃಷ್ಣ ಅವರಿಗೆ ಮಾತನಾಡುವ ತೆವಲು. ತಮ್ಮ ತೀಟೆ ತೀರಿಸಿಕೊಳ್ಳಲು ಈ ರೀತಿ ಮಾತನಾಡಿದ್ದಾರೆ. ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ಯಾರನ್ನೋ ಓಲೈಸಲು ಬೇಕಾಬಿಟ್ಟಿ ಮಾತನಾಡಬಾರದು’ ಎಂದು ಎಚ್ಚರಿಕೆ ನೀಡಿದರು.ರಾಜಣ್ಣ ಆರ್‌ಎಸ್‌ಎಸ್ ಗೀತೆ ಹಾಡಿಲ್ಲ:
ರಾಜಣ್ಣ ಕೊನೆವರೆಗೂ ಕಾಂಗ್ರೆಸ್‌ನಲ್ಲೇ ಇರುವುದಾಗಿ ಹೇಳಿದ್ದಾರೆ. ಅವರು ಎಂದೂ ಪಕ್ಷದ ಸಿದ್ಧಾಂತ ಬಿಟ್ಟು ನಡೆದವರಲ್ಲ. ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆಯನ್ನೇನೂ ಹಾಡಿಲ್ಲವಲ್ಲ? ಚಡ್ಡಿ ಹಾಕಿಕೊಂಡು ಆರೆಸ್ಸೆಸ್ ಶಾಖೆಗೆ ಹೋಗಿಲ್ಲವಲ್ಲ? ಎಂದು ರಾಜೇಂದ್ರ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.ಡಿ.ಕೆ. ಶಿವಕುಮಾರ್ ಜೊತೆಗೆ ಕೆಲವರು ಒಂದು ಕಾಲು ಹೊರಗಡೆ ಇಟ್ಟಿದ್ದಾರೆ ಎಂಬ ಆರೋಪ ಸತ್ಯವೇ ಎಂಬ ಪ್ರಶ್ನೆಗೆ, ‘ಅದನ್ನೇ ಹೇಳುತ್ತಿರುವುದು. ಬಾಲಕೃಷ್ಣ ಇವರೆಲ್ಲಾ ಅದನ್ನೇ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಬ್ರೈನ್ ಮ್ಯಾಪಿಂಗ್ ಮಾಡಿ. ಯಾರು ಯಾರ ಪರ ಇದ್ದಾರೆ ಎಂದು ತಿಳಿಯಲಿದೆ’ ಎಂದು ರಾಜೇಂದ್ರ ಹೇಳಿದರು.
ನಾವು ಸಿದ್ದರಾಮಯ್ಯ ಪರ ಇದ್ದೇವೆ ಅಂತಲೇ ಇಷ್ಟೆಲ್ಲ ಮಾಡಿದ್ದಾರೆ. ಸಿದ್ದರಾಮಯ್ಯ ಬೆಂಬಲದಿಂದಲೇ ವೋಟು ಬರುತ್ತದೆ. ಇನ್ಯಾರದ್ದೋ ಮುಖ ತೋರಿಸಿದರೆ ವೋಟು ಬರುತ್ತದೆ ಎಂಬುದು ಇಲ್ಲ ಎಂದು ಹೇಳಿದರು.