ಸಿಎಂ ಕುರ್ಚಿ ಬಿಕ್ಕಟ್ಟಿಗೆ ನಾಡಿದ್ದು ದಿಲ್ಲಿ ನಿರ್ಧಾರ?

KannadaprabhaNewsNetwork |  
Published : Nov 28, 2025, 01:45 AM ISTUpdated : Nov 28, 2025, 05:08 AM IST
Congress

ಸಾರಾಂಶ

 ಅಧಿಕಾರ ಹಂಚಿಕೆ ಕಿತ್ತಾಟದ ಬಗ್ಗೆ ನ.29ರಂದು ನಡೆಯಲಿರುವ ರಾಷ್ಟ್ರೀಯ ಕಾಂಗ್ರೆಸ್‌ನ ಸಂಸದೀಯ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ಸಂಧಾನ  ಅಂತಿಮಗೊಳಿಸುವ ಸಾಧ್ಯತೆಯಿದ್ದು, ಸಿದ್ದರಾಮಯ್ಯ ಹಾಗೂ  ಡಿ.ಕೆ.ಶಿವಕುಮಾರ್‌ ಅವರಿಗೆ ನ. 30ಕ್ಕೆ ದೆಹಲಿಗೆ ಬುಲಾವ್‌ ನೀಡಿ, ತಮ್ಮ ನಿರ್ಣಯ ತಿಳಿಸುವ ಸಂಭವವಿದೆ 

  ಬೆಂಗಳೂರು :  ರಾಜ್ಯದ ಅಧಿಕಾರ ಹಂಚಿಕೆ ಕಿತ್ತಾಟದ ಬಗ್ಗೆ ನ.29ರಂದು ನಡೆಯಲಿರುವ ರಾಷ್ಟ್ರೀಯ ಕಾಂಗ್ರೆಸ್‌ನ ಸಂಸದೀಯ ಸಮಿತಿ ಸಭೆಯಲ್ಲಿ ಪ್ರಾಥಮಿಕ ಚರ್ಚೆ ನಡೆಸಿ ಸಂಧಾನ ಸೂತ್ರ ಅಂತಿಮಗೊಳಿಸುವ ಸಾಧ್ಯತೆಯಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ನ. 30ಕ್ಕೆ ದೆಹಲಿಗೆ ಬುಲಾವ್‌ ನೀಡಿ, ತಮ್ಮ ನಿರ್ಣಯ ತಿಳಿಸುವ ಸಂಭವವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನ.30ಕ್ಕೆ ದೆಹಲಿಗೆ ಬರುವಂತೆ ಬುಲಾವ್‌ ?

ಆದರೆ, ನ.30ಕ್ಕೆ ದೆಹಲಿಗೆ ಬರುವಂತೆ ಇನ್ನೂ ಸಿಎಂ ಹಾಗೂ ಡಿಸಿಎಂಗೆ ದೆಹಲಿಯಿಂದ ಕರೆ ಬಂದಿಲ್ಲ. ನ. 28ರಂದು ಸೋನಿಯಾ ಗಾಂಧಿ ಅವರೊಂದಿಗೆ ವರಿಷ್ಠರು ಚರ್ಚಿಸಿ ಅನಂತರ ರಾಜ್ಯ ನಾಯಕರಿಗೆ ಬುಲಾವ್‌ ನೀಡುವ ಬಗ್ಗೆ ತೀರ್ಮಾನವಾಗಲಿದೆ. ಮೂಲಗಳ ಪ್ರಕಾರ, ಡಿ.1ರಿಂದ ಸಂಸತ್‌ ಅಧಿವೇಶನ ನಡೆಯಲಿದ್ದು, ಅದಕ್ಕೂ ಮುನ್ನ ಕರ್ನಾಟಕದ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಮನಸ್ಥಿತಿಯಲ್ಲಿ ಹೈಕಮಾಂಡ್‌ ಇದೆ ಎನ್ನಲಾಗಿದೆ. ಹೀಗಾಗಿ, ರಾಜ್ಯ ನಾಯಕರಿಗೆ ಶೀಘ್ರ ಬುಲಾವ್‌ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಾಂಗ್ರೆಸ್‌ ವರಿಷ್ಠೆ ಸೋನಿಯಾಗಾಂಧಿ ಅವರು ಶುಕ್ರವಾರ ದೆಹಲಿಗೆ ಆಗಮಿಸಲಿದ್ದು, ನ. 29ರಂದು ಕಾಂಗ್ರೆಸ್‌ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚಿಸಿ ಸ್ಪಷ್ಟತೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ನ.30 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಸೇರಿ ವರಿಷ್ಠರು ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡಲಿದ್ದಾರೆ. ಬಳಿಕ ಅದೇ ದಿನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರನ್ನು ಕರೆಸಿ ಸಂಧಾನ ನಡೆಸಲಿದ್ದಾರೆ. ಬಹುತೇಕ ಅದೇ ದಿನ ಸ್ಪಷ್ಟತೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ನ.30 ರ ಸಭೆ ಮಹತ್ವ ಪಡೆದುಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪುನರ್ ರಚನೆ ಪಟ್ಟಿಗೆ ಒಪ್ಪಿಗೆ ಸಿಗುತ್ತಾ? ಅಥವಾ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದಿರುವ ಶಿವಕುಮಾರ್‌ ಅವರು ಹಠ ಸಾಧನೆ ಆಗುತ್ತಾ? ಎಂಬ ಬಗ್ಗೆ ತೀವ್ರ ಕುತೂಹಲವಿದೆ.

ರಾಹುಲ್‌-ವೇಣು-ಖರ್ಗೆ ಚರ್ಚೆ

ರಾಜ್ಯದ ಬಿಕ್ಕಟ್ಟಿನ ಬಗ್ಗೆ ಗುರುವಾರ ದೆಹಲಿಯಲ್ಲಿ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ವೇಣುಗೋಪಾಲ್‌ ಅವರು ಕೆಲ ಕಾಲ ಚರ್ಚೆ ನಡೆಸಿದರು. ಈ ಚರ್ಚೆಯ ಫಲಿತಾಂಶವೇನು ಎಂಬುದು ತಿಳಿದುಬಂದಿಲ್ಲ.

ಬಿಹಾರ ಚುನಾವಣೆ ಫಲಿತಾಂಶ ಕುರಿತು ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ವಿಸ್ತೃತವಾದ ಸಭೆ ನಡೆದಿದ್ದು, ಈ ಸಭೆಯ ನಂತರ ಈ ಮೂವರು ನಾಯಕರು ಕರ್ನಾಟಕದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.

- ಬಿಹಾರ ಸೋಲು ಕುರಿತು ನಿನ್ನೆ ಕಾಂಗ್ರೆಸ್ಸಿಗರ ಸಭೆ. ಕರ್ನಾಟಕ ಬಗ್ಗೆ ರಾಹುಲ್‌, ಖರ್ಗೆ, ವೇಣು ಕೆಲಕಾಲ ಚರ್ಚೆ

- ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಇಂದು ದೆಹಲಿಗೆ. ನಾಯಕರ ಭೇಟಿ. ಸಿದ್ದು, ಡಿಕೆಗೆ ಬುಲಾವ್ ನಿರ್ಧಾರ

- ಶನಿವಾರ ಕಾಂಗ್ರೆಸ್‌ ಸಂಸದೀಯ ಸಮಿತಿ ಸಭೆ. ಅಲ್ಲಿ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ಸಂಭವ

- ಭಾನುವಾರ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್‌ ನಡುವೆ ಅಂತಿಮ ಹಂತದ ಸಭೆ

- ಅಲ್ಲಿ ತೀರ್ಮಾನ ಕೈಗೊಂಡು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರನ್ನು ಕರೆಸಿ ತಿಳಿಸುವ ಸಂಭವ

- ಡಿ.1ರಿಂದ ಸಂಸತ್ ಅಧಿವೇಶನ ಪ್ರಾರಂಭ. ಅಷ್ಟರೊಳಗೆ ಕರ್ನಾಟಕ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿವ ಕಸರತ್ತು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಚಿರತೆ ದಾಳಿಯ ವೇಳೆ ಸ್ನೇಹಿತರ ಕರೆ : ನರಳಾಡಿದವ ಶವವಾಗಿ ಪತ್ತೆ!