ಬೆಂಗಳೂರು : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಚಿವರು ಹಾಗೂ ಪಕ್ಷದ ಶಾಸಕರೊಂದಿಗೆ ಸರಣಿ ಸಭೆ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ. ಮಂಗಳವಾರದಿಂದ ನಾಲ್ಕು ದಿನಗಳ ಕಾಲ (ಜು.29ರಿಂದ ಆ.1ರವರೆಗೆ) ಖುದ್ದಾಗಿ ಜಿಲ್ಲಾವಾರು ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಭೆ ನಡೆಸಿ ಅಹವಾಲು ಆಲಿಸಲಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ (313) ಜು.29 ರಂದು ಮಂಗಳವಾರ ಸಂಜೆ 4 ಗಂಟೆಗೆ ಮೈಸೂರು ಜಿಲ್ಲೆಯಿಂದ ಮುಖ್ಯಮಂತ್ರಿಗಳು ಸಭೆ ಶುರು ಮಾಡಲಿದ್ದಾರೆ.
ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದು, ಈ ವೇಳೆ ಕ್ಷೇತ್ರಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಬೇಡಿಕೆ ಸ್ವೀಕರಿಸಿ ಅನುದಾನ ಮಂಜೂರು ಮಾಡಲಿದ್ದಾರೆ.
ಜತೆಗೆ ಸಚಿವರೊಂದಿಗಿನ ಸಮಸ್ಯೆಗಳು, ಸರ್ಕಾರ ಹಾಗೂ ಅಧಿಕಾರಿಗಳ ಹಂತದಲ್ಲಿರುವ ಸಮಸ್ಯೆಗಳ ಬಗ್ಗೆಯೂ ಅಹವಾಲು ಆಲಿಸಿ ಪರಿಹರಿಸಲು ಯತ್ನಿಸಲಿದ್ದಾರೆ. ತನ್ಮೂಲಕ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಸುರ್ಜೇವಾಲಾ ಅವರು ಶಾಸಕರ ಒನ್ ಟು ಒನ್ ಸಭೆ ನಡೆಸಿದಾಗ ಅನುದಾನ ಕೊರತೆ, ಸಚಿವರ ಅಸಹಕಾರ ಸೇರಿ ಹಲವು ದೂರುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಚಿವರೊಂದಿಗೂ ಸುರ್ಜೇವಾಲಾ ಅವರು ಪ್ರತ್ಯೇಕವಾಗಿ ಮುಖಾಮುಖಿ ಸಭೆ ನಡೆಸಿದ್ದರು. ಈ ಎರಡೂ ಸರಣಿ ಸಭೆಗಳ ವರದಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಸಲ್ಲಿಸಿ ಶಾಸಕರ ಸಮಸ್ಯೆ ಬಗೆಹರಿಸುವಂತೆ ಸುರ್ಜೇವಾಲ ಮನವಿ ಮಾಡಿದ್ದರು.
ಅದರ ಬೆನ್ನಲ್ಲೇ ಅಸಮಾಧಾನಗೊಂಡಿರುವ ಶಾಸಕರ ವಿಶ್ವಾಸಕ್ಕೆ ಪಡೆಯಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ನ ಎಲ್ಲಾ ಶಾಸಕರಿಗೂ ತಲಾ 50 ಕೋಟಿ ರು. ಅನುದಾನ ಘೋಷಣೆ ಮಾಡಿ ಎಲ್ಲಾ ಶಾಸಕರಿಗೂ ಖುದ್ದು ಪತ್ರ ಬರೆದಿದ್ದರು. ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಡಿಯ ಕಾಮಗಾರಿಗಳಿಗೆ 37.50 ಕೋಟಿ ರು. ಹಾಗೂ ಶಾಸಕರ ವಿವೇಚನಾಧಿಕಾರದ ಅಡಿ 12.50 ಕೋಟಿ ರು. ಬಳಕೆಗೆ ಅವಕಾಶ ನೀಡಲಾಗುವುದು. ಅನುದಾನ ನೀಡುವ ಮೊದಲು ಶಾಸಕರ ಜಿಲ್ಲಾವಾರು ಸಭೆ ನಡೆಸಲಿದ್ದು, ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರಗಳನ್ನು ನೀಡುವಂತೆ ಮುಖ್ಯಮಂತ್ರಿಗಳು ಪತ್ರದಲ್ಲಿ ತಿಳಿಸಿದ್ದರು.
ಜಿಲ್ಲಾವಾರು ಸಭೆ ವೇಳಾಪಟ್ಟಿ ವಿವರ:
ಜು.29 ರಂದು ಮಂಗಳವಾರ: ಸಂಜೆ 4 ಗಂಟೆಗೆ ಮೈಸೂರು ಜಿಲ್ಲೆ: ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಿರಿಯಾಪಟ್ಟಣ ಶಾಸಕ ಹಾಗೂ ಸಚಿವರಾದ ಕೆ.ವೆಂಕಟೇಶ್ ಹಾಗೂ ಶಾಸಕರು.
ಚಾಮರಾಜನಗರ ಜಿಲ್ಲೆ: ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಶಾಸಕರು.
ತುಮಕೂರು ಜಿಲ್ಲೆ: ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್, ಸಚಿವರಾದ ಕೆ.ಎನ್. ರಾಜಣ್ಣ ಹಾಗೂ ಶಾಸಕರು.
ಕೊಡಗು: ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜ್ ಹಾಗೂ ಶಾಸಕರು.
ಹಾಸನ: ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಶಾಸಕರು.
ದಕ್ಷಿಣ ಕನ್ನಡ: ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಮಂಗಳೂರು ಶಾಸಕ ಹಾಗೂ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ.
ಜು.30 ರಂದು ಬುಧವಾರ:
ಬೀದರ್: ಉಸ್ತುವಾರಿ ಸಚಿವ ಈಶ್ವರ್ ಬಿ ಖಂಡ್ರೆ, ಮತ್ತೊಬ್ಬ ಸಚಿವ ಬೀದರ್ ಶಾಸಕರಾದ ರಹೀಂ ಖಾನ್.
ಕಲಬುರಗಿ ಜಿಲ್ಲೆ: ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರು ಹಾಗೂ ಸೇಡಂ ಶಾಸಕರಾದ ಡಾ.ಶರಣ್ ಪ್ರಕಾಶ್ ಪಾಟೀಲ್, ಬಿ.ಆರ್. ಪಾಟೀಲ್ ಮತ್ತಿತರ ಶಾಸಕರು.
ಯಾದಗಿರಿ ಜಿಲ್ಲೆ: ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಶಾಸಕರು.
ರಾಯಚೂರು ಜಿಲ್ಲೆ: ಉಸ್ತುವಾರಿ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಹಾಗೂ ಶಾಸಕರು.
ಕೊಪ್ಪಳ ಜಿಲ್ಲೆ: ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕರು.
ವಿಜಯನಗರ ಜಿಲ್ಲೆ: ಉಸ್ತುವಾರಿ ಸಚಿವ ಜಮೀರ್ ಅಹಮದ್‌ಖಾನ್, ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ ಹಾಗೂ ಶಾಸಕರು.
ಬಳ್ಳಾರಿ ಜಿಲ್ಲೆ: ಉಸ್ತುವಾರಿ ಸಚಿವ ಜಮೀರ್ ಅಹಮದ್‌ಖಾನ್ ಹಾಗೂ ಶಾಸಕರು.
ಬೆಳಗಾವಿ ಜಿಲ್ಲೆ: ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕರು.
ಹುಬ್ಬಳ್ಳಿ-ಧಾರವಾಡ ಜಿಲ್ಲೆ: ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಶಾಸಕರು.
ಉತ್ತರ ಕನ್ನಡ ಜಿಲ್ಲೆ: ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕರು.
ಜು.31 ರಂದು ಗುರುವಾರ:
ವಿಜಯಪುರ ಜಿಲ್ಲೆ: ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹಾಗೂ ಶಾಸಕರು.
ಬಾಗಲಕೋಟೆ: ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಶಾಸಕರು.
ಗದಗ: ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ಶಾಸಕರು.
ಹಾವೇರಿ: ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹಾಗೂ ಶಾಸಕರು.
ಶಿವಮೊಗ್ಗ: ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕರು.
ದಾವಣಗೆರೆ: ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕರು.
ಚಿತ್ರದುರ್ಗ: ಉಸ್ತುವಾರಿ ಸಚಿವ ಡಿ. ಸುಧಾಕರ್ ಹಾಗೂ ಶಾಸಕರು.
ಚಿಕ್ಕಮಗಳೂರು: ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಶಾಸಕರು.
ಚಿಕ್ಕಬಳ್ಳಾಪುರ: ಸಂಜೆ 7 ಗಂಟೆಗೆ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಹಾಗೂ ಶಾಸಕರು.
ಆ.1 ರಂದು ಶುಕ್ರವಾರ:
ಬೆಂಗಳೂರು ಗ್ರಾಮಾಂತರ (ಆನೇಕಲ್ ಸೇರಿ): ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಶಾಸಕರು.
ಕೋಲಾರ: ಉಸ್ತುವಾರಿ ಸಚಿವ ಬೈರತಿ ಸುರೇಶ್ ಮತ್ತು ಶಾಸಕರು.
ಬೆಂಗಳೂರು ದಕ್ಷಿಣ (ರಾಮನಗರ): ಜಿಲ್ಲೆ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಉಪಮುಖ್ಯಮಂತ್ರಿ ಮತ್ತು ಕನಕಪುರ ಶಾಸಕರಾದ ಡಿ.ಕೆ. ಶಿವಕುಮಾರ್ ಹಾಗೂ ಶಾಸಕರು.
ಮಂಡ್ಯ: ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಶಾಸಕರು.
ಸುರ್ಜೇವಾಲಾ ಜತೆಗಿನ ಸಭೆಯಲ್ಲಿ ಹಲವು ಸಚಿವರ ವಿರುದ್ಧ, ಅನುದಾನ ಕೊರತೆ ಬಗ್ಗೆ ಹಲವು ಶಾಸಕರಿಂದ ದೂರು, ಬೇಡಿಕೆ ಸಲ್ಲಿಕೆ
ವರದಿ ಕ್ರೋಢೀಕರಿಸಿ ಸೂಕ್ತ ಕ್ರಮದ ಹೊಣೆಯನ್ನು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ಗೆಗೆ ನೀಡಿದ್ದ ಸುರ್ಜೇವಾಲಾ
ಅದರಂತೆ ಇದೀಗ ಜಿಲ್ಲಾವಾರು ಉಸ್ತುವಾರಿ ಸಚಿವರು, ಶಾಸಕರ ಜೊತೆ ಮಂಗಳವಾರದಿಂದ 3-4 ದಿನಗಳ ಕಾಲ ಸಭೆ ಆಯೋಜನೆ
ಸಭೆಯಲ್ಲಿ ಸಚಿವರೊಂದಿಗೆ ಸಮಸ್ಯೆಗಳು, ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದ ಸಮಸ್ಯೆ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಪ್ರಯತ್ನ