ರಾಗಾ ಯಾತ್ರೆಗೆ ಅಸ್ಸಾಂನಲ್ಲಿ ಅಡ್ಡಿ ಖಂಡಿಸಿ ಎನ್ನೆಸ್‌ಯುಐ ಪ್ರತಿಭಟನೆ

KannadaprabhaNewsNetwork | Updated : Jan 27 2024, 07:41 AM IST

ಸಾರಾಂಶ

ರಾಗಾ ಯಾತ್ರೆಗೆ ಅಸ್ಸಾಂನಲ್ಲಿ ಅಡ್ಡಿ ಖಂಡಿಸಿ ಎನ್ನೆಸ್‌ಯುಐ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಸ್ಸಾಂನ ಗುವಾಹಟಿಯಲ್ಲಿ ರಾಹುಲ್‌ಗಾಂಧಿ ನೇತೃತ್ವದ ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಅಸ್ಸಾಂ ಸರ್ಕಾರದ ನಡೆ ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನದ ಎದುರು ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್‌ ನೇತೃತ್ವದಲ್ಲಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು, ಅಸ್ಸಾಂನಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ತಡೆ ನೀಡಿದ್ದನ್ನು ವಿರೋಧಿಸಿ ಪಂಜಿನ ಜಾಥಾ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಅಸ್ಸಾಂ ರಾಜ್ಯದಲ್ಲಿ ರಾಹುಲ್‌ಗಾಂಧಿ ಅವರಿಗೆ ದೇಗುಲ ಪ್ರವೇಶಕ್ಕೂ ತಡೆಯೊಡ್ಡಲಾಗಿದ್ದು, ಗುವಾಹಟಿ ನಗರ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಸ್‌ ಶರ್ಮಾ ಅವರು ಯಾತ್ರೆಗೆ ಅಡ್ಡಿಪಡಿಸುತ್ತಿದ್ದಾರೆ. 

ಭಾರತ ಸಂವಿಧಾನವು ಯಾರು ಎಲ್ಲಿ ಬೇಕಾದರೂ ಓಡಾಡಲು ಹಕ್ಕು ನೀಡಿದ್ದು, ಸದುದ್ದೇಶದ ಯಾತ್ರೆಗೆ ಬಿಜೆಪಿ ಮತ್ತು ಅಸ್ಸಾಂ ಸರ್ಕಾರ ತಡೆಯೊಡ್ಡಿದ್ದು ಅಕ್ಷಮ್ಯ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಪಂಜಿನ ಜಾಥಾದಲ್ಲಿ ಕಾಂಗ್ರೆಸ್‌ ಮತ್ತು ಪಕ್ಷದ ನಾಯಕ ರಾಹುಲ್‌ಗಾಂಧಿ ಅವರಿಗೆ ಜೈಕಾರ ಹಾಕಿದ ಎನ್‌ಎಸ್‌ಯುಐ ಕಾರ್ಯಕರ್ತರು, ಬಿಜೆಪಿ ಮತ್ತು ಅಸ್ಸಾಂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. 

ದೇವರು, ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ, ದೇಶದ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಿದೆ. ಆರ್‌ಎಸ್‌ಎಸ್‌ ವಿಚಾರಧಾರೆಯಂತೆ ಮನುಷ್ಯ-ಮನುಷ್ಯರ ನಡುವೆ ದ್ವೇಷ ಹರಡುತ್ತಿದೆ. 

ಈ ಎಲ್ಲವನ್ನೂ ಭಗವಂತ ನೋಡುತ್ತಿದ್ದು, ತಕ್ಕ ಕಾಲಕ್ಕೆ ಅದರ ಪ್ರತಿಫಲವನ್ನು ಬಿಜೆಪಿ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಮುಖಂಡರಾದ ಅಕ್ಷಯ ರಾಜು, ರಾಜ್ಯ ಉಪಾಧ್ಯಕ್ಷ ಮಾರುತಿ, ಭರತ್‌ರಾಮ್‌, ರಾಕೇಶ್‌ ಪಾಲ್ಗೊಂಡಿದ್ದರು.

Share this article