;Resize=(412,232))
ನವದೆಹಲಿ: ಜಾತಿ ರಾಜಕೀಯದ ಆಡೊಂಬಲವಾದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ವರ್ಗದ ಮತಗಳನ್ನು ಸೆಳೆಯುವ ಮೂಲಕ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದೆ. ಹಿಂದುಳಿದ, ತೀರಾ ಹಿಂದುಳಿದ, ದಲಿತರ ಜತೆಗೆ ಮೇಲ್ವಾತಿಗಳು ಹಾಗೂ ಇಂಡಿಯಾ ಮೈತ್ರಿಕೂಟದ ಕಟ್ಟಾ ಬೆಂಬಲಿಗರಾದ ಮುಸ್ಲಿಂ-ಯಾದವ್ ಮತಗಳೂ ಈ ಬಾರಿ ಎನ್‌ಡಿಎ ಕೈಹಿಡಿದಿವೆ.
ಬಿಹಾರದ ಜನಸಂಖ್ಯೆಯ ಶೇ.11ರಷ್ಟಿರುವ ಬ್ರಾಹ್ಮಣರು, ಭೂಮಿಹಾರರು, ರಜಪೂತರಂಥ ಮೇಲ್ವರ್ಗಗಳು ಹಿಂದಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇದರ ಜತೆಗೆ, ಎನ್‌ಡಿಎ ಮೈತ್ರಿಕೂಟವು ಸುಮಾರು ಶೇ.50ಕ್ಕೂ ಹೆಚ್ಚು ದಲಿತ ಮತಗಳು, ಶೇ.50ಕ್ಕೂ ಹೆಚ್ಚು ತೀರಾ ಹಿಂದುಳಿದ ವರ್ಗಗಳು ಹಾಗೂ ಶೇ.60ಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ಮತಗಳನ್ನು ಸೆಳೆದಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಹಿಂದುಳಿದ ಕುರ್ಮಿ-ಕೊಯಿರಿ ಸಮುದಾಯಕ್ಕೆ ಸೇರಿದವರು. ಈ ಸಮುದಾಯ ಈ ಬಾರಿ ಬಹುತೇಕ ಎನ್‌ಡಿಎ ಪರ ನಿಂತಿದೆ. ಅದೇ ರೀತಿ ಶೇ.41 ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವ ಕುಶ್ವಾ ಸಮುದಾಯ, ಬಿಹಾರದ ಜನಸಂಖ್ಯೆಯ ಶೇ.2.6ರಷ್ಟಿರುವ ನಿಶಾದ್ ಸಮುದಾಯದ ಶೇ.60ರಷ್ಟು ಮತಗಳು ಕೂಡ ಎನ್‌ಡಿಎ ಪಾಲಾಗಿದೆ. ವಿಕಾಸಶೀಲ್ ಇನ್ಸಾನ್ ಪಾರ್ಟಿ ಮೂಲಕ ಈ ಮತಬುಟ್ಟಿಗೆ ಕೈಹಾಕಬಹುದೆನ್ನುವ ಇಂಡಿಯಾ ಒಕ್ಕೂಟದ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಪಾಸ್ವಾನ್ ಸಮುದಾಯ ಕೂಡ ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷದ ಬೆನ್ನಿಗೆ ಗಟ್ಟಿಯಾಗಿ ನಿಂತಿತ್ತು. 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಈ ಪಕ್ಷಕ್ಕೆ 21 ಕ್ಷೇತ್ರಗಳಲ್ಲಿ ಗೆಲುವಿನ ಹಾರ ಹಾಕಿಸಿತು.
ನವದೆಹಲಿ: ಸೀಮಾಂಚಲ ಭಾಗವೂ ಸೇರಿ ಬಿಹಾರದಲ್ಲಿ ಸುಮಾರು 32 ಮುಸ್ಲಿಂ ಬಹುಸಂಖ್ಯಾತ ಮತದಾರರಿರುವ ಅಸೆಂಬ್ಲಿ ಸೀಟುಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದ ಇಂಡಿಯಾ ಮೈತ್ರಿಕೂಟಕ್ಕೆ ಈ ಬಾರಿ ಆಘಾತವಾಗಿದೆ. ಮುಸ್ಲಿಂ ಬಾಹುಳ್ಯದ 14 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಶಾಕ್ ನೀಡಿದೆ.
ಹಿಂದಿನಿಂದಲೂ ಮುಸ್ಲಿಮರು ಕಾಂಗ್ರೆಸ್ ಅಥವಾ ಜಾತ್ಯತೀತ ಮೈತ್ರಿಕೂಟವನ್ನು ಬೆಂಬಲಿಸುತ್ತಾ ಬಂದಿದ್ದಾರೆ. 2022ರ ಅಂಕಿ-ಅಂಶ ಪ್ರಕಾರ ಬಿಹಾರ ಜನಸಂಖ್ಯೆಯ ಶೇ.17.7ರಷ್ಟು ಮುಸ್ಲಿಮರಿದ್ದು, ಅವರು ಕಳೆದ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವನ್ನು ಬೆಂಬಲಿಸಿದ್ದಾರೆ. ಆದರೆ, ಈ ಬಾರಿ ಓವೈಸಿ ಅವರ ಎಐಎಐಎಂ, ಜನ ಸೂರಜ್ ಪಕ್ಷದ ಪ್ರಭಾವದಿಂದಾಗಿ ಮತ ವಿಭಜನೆಯಾಗಿ ಆರ್‌ಜೆಡಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಾಗಿದೆ. ಕೆಲವೆಡೆ ಎನ್‌ಡಿಎ ಅಭ್ಯರ್ಥಿಗಳನ್ನೂ ಮುಸ್ಲಿಮರು ಬೆಂಬಲಿಸಿದ್ದಾರೆ.
ಶೇ.40ಕ್ಕಿಂತ ಹೆಚ್ಚಿನ ಮುಸ್ಲಿಂ ಮತದಾರರಿರುವ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದು ಸ್ಥಾನ ಗೆದ್ದಿದೆ. ಆದರೆ ಎಐಎಂಐಎಂ ಆರು ಸ್ಥಾನಗಳಲ್ಲಿ ಗೆದ್ದಿದ್ದರೆ, ಆರ್‌ಜೆಡಿ ಮತ್ತು ಜೆಡಿಯು ಶೂನ್ಯ ಸಂಪಾದನೆ ಮಾಡಿದೆ. ಅದೇ ರೀತಿ ಶೇ.25-40ರಷ್ಟು ಮುಸ್ಲಿಂ ಮತದಾರರಿರುವ ಕ್ಷೇತ್ರಗಳಲ್ಲಿ ಬಿಜೆಪಿ 6, ಜೆಡಿಯು 5, ಆರ್‌ಜೆಡಿ 1 ಸ್ಥಾನದಲ್ಲಿ ಗೆದ್ದಿದೆ. ಕಾಂಗ್ರೆಸ್, ಎಐಎಐಎಂ ಅಭ್ಯರ್ಥಿಗಳಿಗೆ ಸೋಲಾಗಿದೆ.
ನವದೆಹಲಿ: ‘ಈ ಬಾರಿ ಬಿಹಾರದಲ್ಲಿ ಎನ್‌ಡಿಎ ಕೂಟವು ಹಿಂದೆಂದಿಗಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಭವಿಷ್ಯ ಬಹುತೇಕ ನಿಜವಾಗಿದೆ. ನ.7ರಂದು ಬಿಹಾರದ ಔರಂಗಾಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ‘ಮಹಾಜನರೇ ನ.14ರ ನಂತರ ನೀವು ವಿಜಯೋತ್ಸವದ ತಯಾರಿ ಆರಂಭಿಸಿಕೊಳ್ಳಿ. ನಾನು ಸಂಪೂರ್ಣ ವಿಶ್ವಾಸದಿಂದ ಹೇಳುತ್ತಿದ್ದೇನೆ. ಈ ಬಾರಿ ಎನ್‌ಡಿಎ ಕೂಟವು ಹಿಂದೆಂದಿಗಿಂತಲೂ ಹೆಚ್ಚು ಸೀಟುಗಳನ್ನು ಪಡೆದುಕೊಳ್ಳಲಿದೆ’ ಎಂದು ಹೇಳಿದ್ದು, ಫಲಿತಾಂಶ ಹೊರಬೀಳುತ್ತಿದ್ದಂತೆ ಆ ವಿಡಿಯೋ ವೈರಲ್ ಆಗಿದೆ.