ಅಧಿಕಾರಿಗಳು ಜನರ ಸಮಸ್ಯೆಗಳನ್ನು ಅರಿತು ನಿವಾರಿಸಿ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Apr 28, 2026, 01:45 AM ISTUpdated : Apr 28, 2026, 04:43 AM IST
Siddaramaiah

ಸಾರಾಂಶ

ನಾವು ಅಧಿಕಾರದಲ್ಲಿ ಇರಬೇಕಾದರೆ ಪ್ರತಿ 5 ವರ್ಷಕ್ಕೊಮ್ಮೆ ರಿನೀವಲ್‌ (ನವೀಕರಿಸಬೇಕು) ಮಾಡಿಕೊಳ್ಳಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರ್ಪಡೆಯಾದರೆ 30ರಿಂದ 35 ವರ್ಷ ಕೆಲಸದಿಂದ ತೆಗೆಯಲಾಗದು. 

 ಬೆಂಗಳೂರು :  ನಾವು ಅಧಿಕಾರದಲ್ಲಿ ಇರಬೇಕಾದರೆ ಪ್ರತಿ 5 ವರ್ಷಕ್ಕೊಮ್ಮೆ ರಿನೀವಲ್‌ (ನವೀಕರಿಸಬೇಕು) ಮಾಡಿಕೊಳ್ಳಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರ್ಪಡೆಯಾದರೆ 30ರಿಂದ 35 ವರ್ಷ ಕೆಲಸದಿಂದ ತೆಗೆಯಲಾಗದು. ಹೀಗಾಗಿ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಜನರ ಸಮಸ್ಯೆಗಳನ್ನು ಅರಿತು ನಿವಾರಿಸುವ ಕೆಲಸ ಮಾಡಿದರೆ ಜೀವನ ಸಾರ್ಥಕವಾಗಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆಎಎಸ್‌ ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟಿಸಿದರು

ಕೆಎಎಸ್‌ ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಹಾಗೂ ಹೊಸದಾಗಿ ನಿರ್ಮಿಸಿರುವ ಹೆಚ್ಚುವರಿ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ನಂತರ ಸಿದ್ದರಾಮಯ್ಯ ಮಾತನಾಡಿದರು.

ಕೆಎಎಸ್‌ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ನಾವು ಪ್ರಭುಗಳಲ್ಲ. ಆದರೆ, ನಾವೆಲ್ಲರೂ ಪ್ರಜೆಗಳಿಗಾಗಿಯೇ ಕೆಲಸ ಮಾಡಬೇಕು. ನಮ್ಮನ್ನು ಪ್ರತಿನಿಧಿಗಳಾಗಿ ಅವರು ಆಯ್ಕೆ ಮಾಡಿದರೆ, ನಿಮ್ಮನ್ನು ಸೇವಕರಾಗಿ ನೇಮಕ ಮಾಡಲಾಗಿರುತ್ತದೆ. ಆದರೆ, ನಾವು ಒಟ್ಟಾಗಿ ಜನರ ಹಿತ ಕಾಪಾಡುತ್ತಾ ಕೆಲಸ ಮಾಡಬೇಕು. ನಾವು ಕೆಲಸ ಮಾಡಲು ಪ್ರತಿ 5 ವರ್ಷಗಳಲ್ಲಿ ನವೀಕರಿಸಿಕೊಳ್ಳಬೇಕು.

ಆದರೆ, ಕೆಎಎಸ್‌ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಒಮ್ಮೆ ಕೆಲಸಕ್ಕೆ ಸೇರಿದರೆ 30 ರಿಂದ 35 ವರ್ಷಗಳವರೆಗೆ ಕೆಲಸ ಮಾಡುತ್ತಿರಬಹುದು. ಅದನ್ನು ಬಳಸಿಕೊಂಡು ಆತ್ಮಸಾಕ್ಷಿಗೆ ಒಪ್ಪಿಗೆಯಾಗುವಂತೆ ಜನರ ಸೇವೆ ಮಾಡಬೇಕು ಎಂದರು.

ಅಧಿಕಾರಿಗಳು ತಮ್ಮ ಕೆಲಸ ಮಾಡಲು ಕಾನೂನಿನ ಅರಿವಿರಬೇಕು. ಅದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜ್ಞಾನ ಇರಬೇಕು. ಸಮಾಜ ಏನು ಎಂಬುದನ್ನು ಅರಿತಿರಬೇಕು. ಯಾರಿಗೆ ಸಮಾಜದ ಅರಿವಿರುವುದಿಲ್ಲವೋ ಅವರು ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಸಮಾಜದ ಬಗ್ಗೆ ಅರ್ಥವಾಗಬೇಕು. ಆಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಕೆಎಎಸ್‌ ಅಧಿಕಾರಿಗಳ ಬಳಿ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬರುತ್ತಾರೆ. ಅವರು ಅಧಿಕಾರಿಗಳ ಬಳಿ ಮಾತನಾಡಲು ಹೆದರುತ್ತಾರೆ. ಹೀಗಾಗಿ ಅವರನ್ನು ಪ್ರೀತಿಯಿಂದ ಮಾತನಾಡಿಸಿ, ಅವರ ಸಮಸ್ಯೆ ಅರಿತು ನಿವಾರಿಸುವ ಕೆಲಸ ಮಾಡಬೇಕು. ಆಗ ಅವರು ನಿಮ್ಮನ್ನು ಯಾವಾಗಲೂ ಮರೆಯುವುದಿಲ್ಲ ಎಂದು ಹೇಳಿದರು. 

ಸಾರಿಗೆ ಇಲಾಖೆಯ ಆರ್‌ಟಿಒ ಕಚೇರಿಗಳಲ್ಲಿ ಹೆಚ್ಚಾಗಿ ಮಧ್ಯವರ್ತಿಗಳ ಹಾವಳಿಯಿದೆ. ಅವರಿಲ್ಲದೆ ಯಾವುದೇ ಕೆಲಸವೂ ಆಗುವುದಿಲ್ಲ. ಮಧ್ಯವರ್ತಿಗಳಿಗೆ ಯಾವುದೇ ರೀತಿಯಲ್ಲೂ ಅವಕಾಶ ನೀಡಬಾರದು. ಅಧಿಕಾರಿಗಳು ಮಧ್ಯವರ್ತಿಗಳನ್ನು ಕಚೇರಿಗೆ ಬಿಟ್ಟುಕೊಳ್ಳದೆ ಹೊರಗೆ ಕಳುಹಿಸಬೇಕು. ಸರ್ಕಾರ ರೂಪಿಸುವ ಯೋಜನೆಗಳ ಅನುಷ್ಠಾನ ಮತ್ತು ರೂಪಿಸುವ ನೀತಿಗಳನ್ನು ಸಮರ್ಪಕ ಜಾರಿ ಅಧಿಕಾರಿಗಳಿಂದ ಮಾತ್ರ ಸಾಧ್ಯ. ಅದನ್ನು ಸಮರ್ಪಕವಾಗಿ ಮಾಡಬೇಕು ಎಂದರು.

ಲೋಹಿಯಾ ಅಭಿಪ್ರಾಯಕ್ಕೆ ನನ್ನ ಸಹಮತ:

ರಾಮಮನೋಹರ್‌ ಲೋಹಿಯಾ ಅವರು ಐಎಎಸ್‌ ಅಧಿಕಾರಿಗಳ ಅವಶ್ಯಕತೆಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಆಗಲೇ ರಾಜ್ಯ ಅಧಿಕಾರಿಗಳ ಹುದ್ದೆ ಸೃಷ್ಟಿಯಾಯಿತು. ಲೋಹಿಯಾ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ, ಆಡಳಿತದಲ್ಲಿ ಐಎಎಸ್‌ ಅಧಿಕಾರಿಗಳೇ ಬೇಡ ಎಂದು ಹೇಳಲಾಗದು. ಅವರ ಅವಶ್ಯಕತೆ ಅತ್ಯಗತ್ಯ. ಇನ್ನು, ಕೆಎಎಸ್‌ ಅಧಿಕಾರಿಗಳಿಗೆ ಜನರ ಕೆಲಸ ಮಾಡುವ ಅವಕಾಶ ನಿಮಗೆ ದೊರೆತಿದೆ. ಅದರಿಂದ ಆತ್ಮತೃಪ್ತಿ ಸಿಗುತ್ತದೆ. ಹೀಗಾಗಿ ಅಧಿಕಾರಿಗಳು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೀವನ ಸಾರ್ಥಕವಾಗಲು ನೀವು ಮಾಡುವ ಸೇವೆ ತೃಪ್ತಿಕರವಾಗಿರಬೇಕು. ಜನರ ಕೆಲಸದಲ್ಲಿ ವಿಳಂಬ ಮಾಡಬಾರದು ಎಂದು ಸಿದ್ದರಾಮಯ್ಯ ತಿಳಿಸಿದರು.

ಕೆಎಎಸ್‌ ಅಧಿಕಾರಿಗಳಿಗೆ ಸಿಇಒ ಹುದ್ದೆ:

ಅರ್ಹ ಕೆಎಎಸ್‌ ಅಧಿಕಾರಿಗಳಿಗೆ ಪದೋನ್ನತಿಗೆ ಈಗಾಗಲೇ 2 ಸಭೆ ನಡೆಸಲಾಗಿದೆ. ಶೀಘ್ರದಲ್ಲಿ ಪದೋನ್ನತಿ ನೀಡಲಾಗುವುದು. ಅದರ ಜತೆಗೆ ಜಿಲ್ಲಾ ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಗಳಿಗೆ ಕೆಎಎಸ್‌ ಅಧಿಕಾರಿಗಳನ್ನು ನೇಮಿಸುವ ಬೇಡಿಕೆಯಿದ್ದು, ಅದರ ಬಗ್ಗೆ ಪರಿಶೀಲಿಸಲಾಗುವುದು. ಶೇ. 33 ಸಿಇಒ ಹುದ್ದೆಗಳಿಗೆ ಕೆಎಎಸ್‌ ಅಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಸರ್ಕಾರ ಸಮರ್ಪಕ ಅಧಿಕಾರ ಮಾಡಲು ಅಧಿಕಾರಿಗಳು ಬಹಳ ಮುಖ್ಯ. ದೇವರ ಬಳಿ ಹೇಳಲಾಗದ ನೋವನ್ನು ಪೂಜಾರಿ ಬಳಿ ಹೇಳಿಕೊಳ್ಳುತ್ತೇವೆ. ಅದೇ ರೀತಿ ಜನರು ಸರ್ಕಾರಕ್ಕೆ ತಿಳಿಸಬೇಕಾದ ವಿಚಾರವನ್ನು ಅಧಿಕಾರಿಗಳ ಬಳಿ ಹೇಳಿಕೊಳ್ಳುತ್ತಾರೆ. ಅದನ್ನು ಆಲಿಸಿ ಪರಿಹಾರ ನೀಡುವುದು ಅಧಿಕಾರಿಗಳ ಕರ್ತವ್ಯ. ನಿಮ್ಮ ಕೆಲಸ, ನಿರ್ಧಾರಗಳು ಮನಸಾಕ್ಷಿಗೆ ಒಪ್ಪಿಗೆಯಾಗಬೇಕು. ತಹಸೀಲ್ದಾರ್‌ಗಳು ತೆಗೆದುಕೊಳ್ಳುವ ನಿರ್ಧಾರಗಳು ಕೆಲವೊಮ್ಮೆ ಸುಪ್ರೀಂಕೋರ್ಟ್‌ವರೆಗೆ ಹೋಗುತ್ತದೆ. ಜನರು ನ್ಯಾಯಕ್ಕಾಗಿ ಅಲೆಯುವಂತಾಗುತ್ತದೆ. ಹೀಗಾಗಿ ಅಧಿಕಾರಿಗಳು ತಮ್ಮ ಕೆಲಸವನ್ನು ಸಮರ್ಪಕವಾಗಿ, ನ್ಯಾಯಯುತವಾಗಿ ಮಾಡಬೇಕು. ಜನರು ನಿಮ್ಮ ಪ್ರಭಾವ ನೋಡಿ ಬರುವುದಕ್ಕಿಂತ ಸ್ವಭಾವ ನೋಡಿ ಬರಬೇಕು ಎಂದು ಹೇಳಿದರು. 

ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಕಾವೇರಿ, ಕೆಎಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ. ಶಿವಸ್ವಾಮಿ, ಉಪಾಧ್ಯಕ್ಷ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌ ಹಾಜರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೌದ್ಧ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ನೀಡಿ: ಸರ್ಕಾರಕ್ಕೆ ವೆಂಕಟಸ್ವಾಮಿ ಮನವಿ
ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕಮಲ ಬಿಟ್ಟು ಕೈ ಹಿಡದ ಬಿಜೆಪಿ ಕಾರ್ಯಕರ್ತರು