ಚಿಕ್ಕಬಳ್ಳಾಪುರ : ಜೆಡಿಎಸ್ ತೊರೆದಿರುವುದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡರು ಮಾತ್ರ ಕಾರ್ಯಕರ್ತರಲ್ಲಾ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮುಕ್ತ ಮುನಿಯಪ್ಪ ತಿಳಿಸಿದರು.
ಮಂಗಳವಾರ ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಜೆಡಿಎಸ್ ಪಕ್ಷದವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ, ಕ್ಷೇತ್ರದಲ್ಲಿ ಜೆಡಿಎಸ್ ಪವರ್ ಏನು ಎಂಬುದನ್ನು ಚುನಾವಣೆಯಲ್ಲಿ ತೋರಿಸಲಿದ್ದೇವೆ ಎಂದರು.
ಡಾ.ಸುಧಾಕರ್‌ಗೆ ಬೆಂಬಲ ನೀಡಿ
ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ತೀರ್ಮಾನದಂತೆ ಬಿಜೆಪಿ ಜತೆ ಜೆಡಿಎಸ್ ಚುನಾವಣಾ ಮೈತ್ರಿ ಒಪ್ಪಂದದಂತೆ ನಾವು ಸ್ಥಳೀಯವಾಗಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ಗೆ ಸಂಪೂರ್ಣ ಬೆಂಬಲ ಸೂಚಿಸಬೇಕು. ಕಳೆದ ದಿನ ವಷ್ಟೇ ಜೆಡಿಎಸ್ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂದರು.
ಕ್ಷೇತ್ರದಲ್ಲಿ ಜೆಡಿಎಸ್ ಸುಭದ್ರ
ಬಚ್ಚೇಗೌಡರು ಪಕ್ಷ ತೊರೆದಿದ್ದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಸಂಪೂರ್ಣ ಕುಸಿದು ಹೋಗಿದೆ ಎಂದು ಭಾವಿಸಲಾಗಿತ್ತು. ಆದರೆ ನಿನ್ನೆ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ನಡೆದ ತುರ್ತು ಸಭೆಯಲ್ಲಿ ಭಾಗಿಯಾಗಿದ್ದನ್ನು ನೋಡಿದಾಗ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಸಂಪೂರ್ಣ ನೆಲೆನಿಂತಿದೆ. ಇದರ ಸಲುವಾಗಿಯೇ ನಾಳೆ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಶಕ್ತಿ ಪ್ರದರ್ಶನ ತೋರಲು ಮುಂದಾಗಿದ್ದು ಸಭೆಗೆ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕೋಲಾರ ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳ ಪ್ರಮುಖ ಜೆಡಿಎಸ್ ನಾಯಕರು ಮುಖಂಡರು ಭಾಗಿಯಾಗಿದ್ದು ಮೈತ್ರಿ ಅಭ್ಯರ್ಥಿಗೆ ಬೆಂಬಲವನ್ನು ಸೂಚಿಸಿಲಿದ್ದೇವೆಂದು ತಿಳಿಸಿದರು.
ಕೆಪಿ ಬಚ್ಚೇಗೌಡರು ಕಾಂಗ್ರೆಸ್ ಸೇರಿದರೂ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರು ಯಾರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿಲ್ಲ. ಎಲ್ಲರು ಜೆಡಿಎಸ್ ಪಕ್ಷದಲ್ಲಿದ್ದು ಮೈತ್ರಿ ಅಭ್ಯರ್ಥಿಗೆ ಬೆಂಬಲವನ್ನು ಸೂಚಿಸಲಿದ್ದೇವೆ. ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಮತಯಾಚನೆ ನಡೆಸಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಲು ಮನವಿ ಮಾಡಿದರು.
ಸುಧಾಕರ್‌ಗೇ ಜೆಡಿಎಸ್ ಮತ
ಸ್ಥಳೀಯವಾಗಿ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಸಚಿವರಾಗಿದ್ದ ವೇಳೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಜೊತೆಗೆ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಸ್ಥಳೀಯವಾಗಿ ಜೆಡಿಎಸ್ ಮತಗಳು ತಪ್ಪದೇ ಬಿಜೆಪಿ ಅಭ್ಯರ್ಥಿಗೆ ನೀಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ದೇಶದ ಒಳಿತಾಗಾಗಿ ಮೂರನೇ ಬಾರೀ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿ ಸ್ಥಳೀಯ ವಾಗಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆ ಈ ಬಾರೀಯ ಲೋಕಸಭಾ ಚುನಾವಣೆಯಲ್ಲಿ ಮತ ನೀಡಲಿದ್ದೇವೆಂದು ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಸ್ಪಷ್ಟಪಡಿಸಿದರು.
ಮತ್ತೆ ಜೆಡಿಎಸ್‌ಗೆ ಬರಬಹುದು
ಚಿಕ್ಕಬಳ್ಳಾಪುರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಬಿ.ಮುನಿರಾಜು ಮಾತನಾಡಿ,ಕಳೆದ ಐದಾರು ತಿಂಗಳ ಹಿಂದೆ ಪಕ್ಷ ಬದಲಾವಣೆ ವಿಚಾರ ಬಂದ ವೇಳೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ನನ್ನನ್ನು ತೆಗೆದುಕೊಳ್ಳುವ ಕರೆನ್ಸಿ ಇಲ್ಲಾ ಎಂದು ಹೇಳಿದ್ದರು. ಆದರೆ ಈಗ ಯಾಕೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಯಾವ ಆಮಿಷಗಳಿಗಾಗಿ ಪಕ್ಷ ಬಿಟ್ಟಿದ್ದಾರೋ ನಮಗೆ ಗೋತ್ತಿಲ್ಲಾ. ಅಷ್ಟೇ ಅಲ್ಲದೇ ನನಗೆ ಪಕ್ಷದಲ್ಲಿ ಯಾವುದೇ ಸ್ಥಾನ ಮಾನವಿರಲಿಲ್ಲ ಎಂದು ಹೇಳಿದ್ದಾರೆ.
ಮುಂದೆ ಮತ್ತೆ ಜೆಡಿಎಸ್ ಪಕ್ಷಕ್ಕೆ ಬರಬಹುದು ಸ್ಪಷ್ಟಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಪ್ರಭಾನಾರಾಯಣಗೌಡ, ನಾರಾಯಣಗೌಡ, ಮಾಜಿ ನಗರಸಭಾ ಸದಸ್ಯ ಕಿಸಾನ್ ಕೃಷ್ಣಪ್ಪ, ಬಂಡ್ಲುಸೀನ, ಮಾಜಿ ತಾ.ಪಂ. ಸದಸ್ಯ ಸತೀಶ್,ಬಾಬು, ಲಕ್ಷ್ಮಿನರಸಪ್ಪ, ನಾಗರಾಜ, ನಾರಾಯಣಸ್ವಾಮಿ,ಜಿ.ವಿ.ಮಂಜುನಾಥ, ಅಖಿಲ್ ರೆಡ್ಡಿ, ಪಾರಿಜಾತಮ್ಮ, ಶಿಲ್ಪಗೌಡ, ಮತ್ತಿತರ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.