ಸಮರ್ಪಕ ಉತ್ತರ ನೀಡದ ಗೃಹ ಸಚಿವ ಡಾ.ಜಿ.ಪರಮೇಶ್ವರ : ವಿಪಕ್ಷಗಳ ಆಕ್ರೋಶ : ಸಭಾತ್ಯಾಗ

KannadaprabhaNewsNetwork |  
Published : Mar 18, 2025, 01:50 AM ISTUpdated : Mar 18, 2025, 04:16 AM IST
Dr G parameshwar

ಸಾರಾಂಶ

 ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಕುರಿತ ಪ್ರಶ್ನೆಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಸೋಮವಾರ ನಡೆಯಿತು.

 ವಿಧಾನ ಪರಿಷತ್ತು :  ಕೊಪ್ಪಳದ ಗಂಗಾವತಿಯ ಸಣಾಪೂರದಲ್ಲಿ ಇಸ್ರೆಲ್‌ ದೇಶದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ, ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆ ಮೇಲಿನ ದಾಳಿ ಸೇರಿದಂತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಕುರಿತ ಪ್ರಶ್ನೆಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಸೋಮವಾರ ನಡೆಯಿತು.

ನಿಯಮ 68ರ ಮೇಲಿನ ಚರ್ಚೆಯಲ್ಲಿ ಗುರುವಾರ ಪಾಲ್ಗೊಂಡ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ರಾಜ್ಯದಲ್ಲಿ ಅಪರಾಧಿಗಳಿಗೆ ಪೊಲೀಸರು, ಕಾನೂನಿನ ಭಯ ಇಲ್ಲದ ವಾತಾವರಣವಿದೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ. ನಾಗರಿಕರಿಗೆ ಅಭದ್ರತೆ ಕಾಡುತ್ತಿದೆ ಎಂಬುದು ಸೇರಿದಂತೆ ಅನೇಕ ಪ್ರಕರಣಗಳನ್ನು ಪ್ರಸ್ತಾಪಿಸಿ ಸರ್ಕಾರ ಸಮರ್ಪಕ ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಸೋಮವಾರ ಒಂದೂವರೆ ಗಂಟೆಗೂ ಹೆಚ್ಚು ಕಾಲ ಉತ್ತರಿಸಿ, ಸಣಾಪುರದ ರೆಸಾರ್ಟ್‌ ಒಡತಿ ಮತ್ತು ಇಸ್ರೆಲ್‌ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದವರನ್ನು ಬಂಧಿಸಲಾಗಿದೆ. ಮೈಸೂರಿನ ಉದಯಗಿರಿ ಪ್ರಕರಣದಲ್ಲೂ 15 ಆರೋಪಿಗಳನ್ನು ಬಂಧಿಸಲಾಗಿದೆ. ಮೈಕ್ರೋ ಫೈನಾನ್ಸ್‌ ಹಾವಳಿ ತಡೆಗೂ ಕ್ರಮಕೈಗೊಳ್ಳಲಾಗಿದೆ ಎಂಬುದು ಸೇರಿದಂತೆ ವಿವಿಧ ಪ್ರಕರಣಗಳ ಕುರಿತು ಅಂಕಿಅಂಶಗಳ ಸಮೇತ ಮಾಹಿತಿ ನೀಡಿದರು.

ಆ ನಂತರ ಗೃಹ ಸಚಿವರು ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂದು ಹಲವು ಸ್ಪಷ್ಟನೆಗಳನ್ನು ಕೇಳಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸುಶೀಲ್‌ ನಮೋಶಿ, ರವಿಕುಮಾರ್‌, ಸಿ.ಟಿ.ರವಿ, ಎಚ್‌.ವಿಶ್ವನಾಥ್‌, ನವೀನ್‌, ಭಾರತೀ ಶೆಟ್ಟಿ, ಜೆಡಿಎಸ್‌ನ ಭೋಜೇಗೌಡ, ಟಿ.ಎ.ಶರವಣ ಮತ್ತಿತರರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ದ್ವೇಷ ರಾಜಕಾರಣ, ಅಸಹಿಷ್ಣತೆ ಹೆಚ್ಚಾಗಿದೆ. ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಮುಖಂಡರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ದೂರು ನೀಡಿದರೂ ಎಫ್‌ಐಆರ್‌ ಆಗುತ್ತಿಲ್ಲ. ಅದೇ ಬಿಜೆಪಿಗರ ವಿರುದ್ಧ ಯಾರಾದರು ದೂರು ನೀಡಿದರೆ ತಕ್ಷಣ ಎಫ್‌ಐಆರ್‌ ಆಗುತ್ತದೆ. ಈ ರೀತಿ ಪೊಲೀಸರಿಗೆ ನಿರ್ದೇಶನ ನೀಡಿರುವವರು ಯಾರು ಎಂದು ಪ್ರಶ್ನಿಸಿದರು.

ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಪ್ರತಿಪಕ್ಷಗಳ ಹಲವು ಸದಸ್ಯರಿಗೆ ಸ್ಪಷ್ಟನೆ ಕೇಳಲು ಅವಕಾಶ ನೀಡಿದರು. ಗೃಹ ಸಚಿವರು ಉತ್ತರ ನೀಡಲಿದ್ದಾರೆ ಎಂದು ಸಭಾಪತಿ ತಿಳಿಸಿದರು. ಆದರೆ, ಅಷ್ಟರ ವೇಳೆಗೆ ಗೃಹ ಸಚಿವರ ಉತ್ತರ ಸಮರ್ಪಕವಾಗಿಲ್ಲ, ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಎಂದು ಸಭಾತ್ಯಾಗ ಮಾಡಿದರು. ಇದಕ್ಕೆ ಎಂ.ಕೆ.ಪ್ರಾಣೇಶ್‌ ಅವರು, ಸ್ಪಷ್ಟನೆಗಳಿಗೆ ಉತ್ತರ ಕೇಳದೆ ಸಭಾತ್ಯಾಗ ಮಾಡುವುದು ಸರಿಯಲ್ಲ. ಇದು ಉದ್ದೇಶ ಪೂರ್ವಕ ಎಂದಾಗುತ್ತದೆ ಎಂದು ಹೇಳಿದರೂ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು