ಉಭಯ ಸದನಗಳಲ್ಲಿ ವಿಪಕ್ಷಗಳ ಕೋಲಾಹಲ

KannadaprabhaNewsNetwork |  
Published : Feb 29, 2024, 02:03 AM ISTUpdated : Feb 29, 2024, 08:01 AM IST
ಪ್ರತಿಭಟನೆ | Kannada Prabha

ಸಾರಾಂಶ

ಮಂಗಳವಾರ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಕಾಂಗ್ರೆಸ್‌ನಿಂದ ಚುನಾಯಿತರಾದ ನಾಸೀರ್ ಹುಸೇನ್‌ ಬೆಂಬಲಿಗರಿಂದ ಪಾಕಿಸ್ತಾನ ಪರ ಘೋಷಣೆ ಆರೋಪ ವಿಚಾರವು ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಕೋಲಾಹಲ ಸೃಷ್ಟಿಸಿತು.

ಕನ್ನಡಪ್ರಭ ವಾರ್ತೆ ವಿಧಾನಮಂಡಲ

ಮಂಗಳವಾರ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಕಾಂಗ್ರೆಸ್‌ನಿಂದ ಚುನಾಯಿತರಾದ ನಾಸೀರ್ ಹುಸೇನ್‌ ಬೆಂಬಲಿಗರಿಂದ ಪಾಕಿಸ್ತಾನ ಪರ ಘೋಷಣೆ ಆರೋಪ ವಿಚಾರವು ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಕೋಲಾಹಲ ಸೃಷ್ಟಿಸಿತು.

ವಿಧಾನಸಭೆಯಲ್ಲಿ ಈ ಗದ್ದಲ ತಾರಕಕ್ಕೇರಿ ಇಡೀ ದಿನದ ಕಲಾಪವೇ ಬಲಿಯಾಯಿತು. ಆದರೆ, ವಿಧಾನಪರಿಷತ್ತಿನಲ್ಲಿ ಕೆಲಕಾಲದ ಬ‍ಳಿಕ ತಣ್ಣಗಾಗಿ ಕಲಾಪ ಸುಗಮವಾಗಿ ಮುಂದುವರೆಯಿತು.

ಬುಧವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್‌, ಪ್ರತಿಪಕ್ಷ ಬಿಜೆಪಿ ಸದನದೊಳಗೆ ರಾಷ್ಟ್ರಧ್ವಜ ತಂದು ಪ್ರತಿಭಟನೆ ನಡೆಸುವ ಮಾಹಿತಿ ಇದೆ. ಇದು ಸರಿಯಲ್ಲ. ನನಗೆ ಅವಮಾನ ಮಾಡಿ. ಆದರೆ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದು ಬೇಡ ಎಂದು ಹೇಳಿದರು.

ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ, ರಾಷ್ಟ್ರಧ್ವಜಕ್ಕೆ ನಾವು ಅವಮಾನ ಮಾಡುತ್ತಿಲ್ಲ. ಪಾಕಿಸ್ತಾನ ಪರ ಘೋಷಣೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು. ತದನಂತರ ಯು.ಟಿ.ಖಾದರ್ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ರಾಜ್ಯದ ಇತಿಹಾಸದಲ್ಲಿಯೇ ಆಡಳಿತದ ಕೇಂದ್ರವಾದ ವಿಧಾನಸೌಧದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಏಳು ಕೋಟಿ ಕನ್ನಡಿಗರ ಹೃದಯ ಸ್ಥಳ ವಿಧಾನಸೌಧ. ಇದು ಸಂವಿಧಾನ ರಕ್ಷಣೆಯ ಸುರಕ್ಷಿತ ಜಾಗ. 

ಇಂತಹ ಸ್ಥಳದಲ್ಲಿ ನಾಸಿರ್ ಹುಸೇನ್ ವಿಜಯೋತ್ಸವದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ರಾಜ್ಯದಲ್ಲಿ ಆತಂಕ ಉಂಟಾಗಿದ್ದು, ಭಯದ ವಾತಾವರಣವಿದೆ ಎಂದು ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು. 

ಇಡೀ ದೇಶಕ್ಕೆ ಅವಮಾನವಾಗಿದೆ. ಕನ್ನಡಿಗರು ತಲೆ ತಗ್ಗಿಸುವಂತಾಗಿದೆ. ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಆ ರೀತಿ ಘೋಷಣೆ ಕೂಗಿದವರನ್ನು ರೆಡ್ ಕಾರ್ಪೆಟ್ ಹಾಕಿ ವಿಧಾನಸೌಧಕ್ಕೆ ಕರೆತಂದವರು ಯಾರು? ರಾಜ್ಯಸಭೆಗೆ ಹೇಗೆ ಟಿಕೆಟ್‌ ನೀಡಿದಿರಿ ಎಂದು ಹೇಳಿದಾಗ ಆಡಳಿತ ಪಕ್ಷದವರಿಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. 

ಈ ವೇಳೆ ತೀವ್ರ ಗದ್ದಲ ಉಂಟಾದಾಗ ಮೊದಲಬಾರಿಗೆ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಬಳಿಕ ಸದನ ಆರಂಭಗೊಂಡಾಗ ಬಿಜೆಪಿ ಸದಸ್ಯ ವಿ.ಸುನಿಲ್‌ ಕುಮಾರ್‌, ರಾಷ್ಟ್ರಧ್ವಜಕ್ಕೆ ಅವಮಾನಿಸಬಾರದು ಎಂಬ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. 

ಆದರೆ, ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಚಾರವು ತಲೆತಗ್ಗಿಸುವಂತಹದ್ದಾಗಿದ್ದು, ಘಟನೆಗೆ ಕಾರಣರಾಗಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿ ರಾಜಕೀಯ ವಿಚಾರ ಪ್ರಸ್ತಾಪಿಸಿದಾಗ ಕಾಂಗ್ರೆಸ್ಸಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. 

ಈ ವೇಳೆ ಸಭಾಧ್ಯಕ್ಷ ಯು.ಟಿ.ಖಾದರ್‌ ಪರಿಸ್ಥಿತಿ ತಿಳಿಗೊಳಿಸಿ ಚರ್ಚೆ ಮುಂದುವರಿಸಿದರು.ಬಿಜೆಪಿ ಮತ್ತು ಕಾಂಗ್ರೆಸ್‌ನ ಹಲವು ಸದಸ್ಯರು ಚರ್ಚೆ ನಡೆಸಿದ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಉತ್ತರ ನೀಡಿದರು. 

ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆ ಸರ್ಕಾರ ಸುಮ್ಮನೆ ಇರುವುದಿಲ್ಲ. ಘೋಷಣೆ ಕೂಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಅಶ್ವಾಸನೆ ನೀಡಿದರು. 

ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಪ್ರತಿಪಕ್ಷ ಬಿಜೆಪಿ ಸರ್ಕಾರ ಉತ್ತರ ವಿರೋಧಿಸಿ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಗದ್ದಲ ಉಂಟಾದ ಕಾರಣ ಎರಡನೇ ಬಾರಿ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. 

ಮತ್ತೆ ಸದನ ಸೇರಿದಾಗಲೂ ಪ್ರತಿಪಕ್ಷದಿಂದ ಗದ್ದಲು ಮುಂದುವರಿದ ಕಾರಣ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ
ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ