ವಿಧಾನ ಪರಿಷತ್: ರಾಜ್ಯದಲ್ಲಿ ಗ್ರಾಹಕರ ವಿದ್ಯುತ್ ಸ್ಥಾವರಗಳಿಗೆ ದುಬಾರಿ ದರದ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸರ್ಕಾರ ಮುಂದಾಗಿರುವ ಬಗ್ಗೆ ಬಿಜೆಪಿಯ ಸಿ.ಟಿ. ರವಿ ಹಾಗೂ ಜೆಡಿಎಸ್‌ನ ಟಿ.ಎ. ಶರವಣ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರಶ್ನೋತ್ತರ ವೇಳೆ ಸಿ.ಟಿ. ರವಿ ಅವರು, ಬೇರೆ ಎಲ್ಲ ರಾಜ್ಯಗಳಿಗಿಂತ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ದರ ಯಾಕೆ ಹೆಚ್ಚಿದೆ? ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ ಸ್ಮಾರ್ಟ್ ಮೀಟರ್ ಪೂರೈಕೆ ಅವಕಾಶ ಮಾಡಿಕೊಟ್ಟಿರುವುದು ಯಾಕೆ? ಚಿನ್ನದ ಮೀಟರ್ ಅಳವಡಿಸುತ್ತಿರಾ? ಮಧ್ಯಪ್ರದೇಶ, ಬಿಹಾರ ಮುಂತಾದ ರಾಜ್ಯಗಳಿಗೆ ಹೋಲಿಸಿದರೆ 200 ಪಟ್ಟು ಹೆಚ್ಚು ದರ ಹೆಚ್ಚಿದೆ. ನಮ್ಮ ರಾಜ್ಯದಲ್ಲಿ ಇಷ್ಟೊಂದು ದರ ಯಾಕೆ ನಿಗದಿ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರು, ಯಾವ ಮಾನದಂಡದ ಮೇಲೆ ಮೀಟರ್ ದರ ನಿಗದಿ ಪಡಿಸಲಾಗಿದೆ. ಗುತ್ತಿಗೆದಾರನಿಗೆ ಅನುಕೂಲವಾಗಲು ಯಾಕೆ ಬಡವರಿಂದ ವಸೂಲು ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಮೀಟರ್‌ಗೆ ದುಬಾರಿ ದರ ನಿಗದಿ ಮಾಡುವ ಮೂಲಕ ಬಡವರನ್ನು ಸುಲಿಗೆ ಮಾಡಬೇಡಿ ಎಂದು ಹೈಕೋರ್ಟ್ ಹೇಳಿದೆ.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಜೆ. ಜಾರ್ಜ್ ಅವರು, ಕೆಇಆರ್‌ಸಿ ಹೊಸ ಹಾಗೂ ತಾತ್ಕಾಲಿಕ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವಂತೆ ತಿಳಿಸಿದೆ. ರಾಜ್ಯದಲ್ಲಿ ಗ್ರಾಹಕರೇ ಮೀಟರ್ ಖರೀದಿಸಬೇಕೆಂದು ತಿಳಿಸಿದೆ. ಸ್ಮಾರ್ಟ್ ಮೀಟರ್‌ಗಳನ್ನು ಹೊಸ ಗ್ರಾಹಕರಿಗೆ ಅಳವಡಿಸುವಂತೆ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಬೆಸ್ಕಾಂ ವ್ಯಾಪ್ತಿಯ ಮೂವರು ಗ್ರಾಹಕರು ಹೈಕೋರ್ಟ್‌ನಲ್ಲಿ ಮೂರು ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಎರಡು ಪ್ರಕರಣಗಳ ಸಂಬಂಧ ಅರ್ಜಿದಾರರಿಗೆ ಸೀಮಿತಗೊಳಿಸಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೋರ್ಟ್ ತಡೆ ನೀಡಿದೆ. ಈ ಅರ್ಜಿಗಳ ಸಂಬಂಧ ಆದೇಶ ಇದೇ ತಿಂಗಳು 19ರಂದು ಬರುವ ನಿರೀಕ್ಷೆ ಇದೆ ಎಂದರು.
ಈ ವಿಷಯ ಹೈಕೋರ್ಟ್ ವಿಚಾರಣೆಯಲ್ಲಿದೆ ಎಂಬ ಸಚಿವರ ಮಾತಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಕೋರ್ಟ್‌ನಲ್ಲಿ ಈ ವಿಷಯ ಇರುವುದರಿಂದ ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು.