ಜಾತಿ ಗಣತಿ ವರದಿಗೆ ವಿರೋಧ ಸಲ್ಲದು: ಮಾರಸಂದ್ರ ಮುನಿಯಪ್ಪ

KannadaprabhaNewsNetwork |  
Published : Nov 06, 2023, 12:45 AM IST
೫ಕೆಎಂಎನ್‌ಡಿ-೧ಮುನಿಯಪ್ಪ | Kannada Prabha

ಸಾರಾಂಶ

ಜಾತಿ ಗಣತಿ ವರದಿಗೆ ವಿರೋಧ ಸಲ್ಲದು: ಮಾರಸಂದ್ರ ಮುನಿಯಪ್ಪಯಾವ ಸಮುದಾಯವೂ ವಿರೋಧ ಮಾಡಬಾರದುಅಕ್ರಮ ಆಸಕ್ತಿ ಸಕ್ರಮಕ್ಕಾಗಿ ಜೆಡಿಎಸ್-ಬಿಜೆಪಿ ಮೈತ್ರಿ

- ಯಾವ ಸಮುದಾಯವೂ ವಿರೋಧ ಮಾಡಬಾರದು

- ಅಕ್ರಮ ಆಸಕ್ತಿ ಸಕ್ರಮಕ್ಕಾಗಿ ಜೆಡಿಎಸ್-ಬಿಜೆಪಿ ಮೈತ್ರಿಕನ್ನಡಪ್ರಭ ವಾರ್ತೆ ಮಂಡ್ಯ

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಜಾತಿ ವರದಿ ಸ್ವೀಕರಿಸಿ ಸರ್ಕಾರ ಜಾರಿಗೊಳಿಸಬೇಕು. ಜಾತಿ ಗಣತಿ ವರದಿಗೆ ಯಾವ ಸಮುದಾಯವೂ ವಿರೋಧ ವ್ಯಕ್ತಪಡಿಸಿಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ತಪ್ಪಬಾರದು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಜಾತಿ ಗಣತಿ ವರದಿ ಸ್ವೀಕರಿಸಿ ಜಾರಿಗೊಳಿಸಬೇಕು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಸಮಿತಿ ಸಿದ್ಧಪಡಿಸಿರುವ ಜಾತಿ ಗಣತಿ ವರದಿಗೆ ಒಕ್ಕಲಿಗ ಸಮುದಾಯ ವಿರೋಧ ಮಾಡುತ್ತಿರುವುದು ಸರಿಯಲ್ಲ, ಮಂಡಲ್ ವರದಿ ಜಾರಿಗೆ ಅಂಬೇಡ್ಕರ್ ಮತ್ತು ಕಾನ್ಷಿರಾಂ ಹೋರಾಟ ಮಾಡಿದ್ದರು. ಮಂಡಲ್ ವರದಿ ಜಾರಿಗೆ ಅವರೇ ಕಾರಣ. ಆ ಮೂಲಕ ಪರಿಶಿಷ್ಟ ಜಾತಿ, ಪಂಗಡದವರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದನ್ನ್ನು ಮರೆಯಬಾರದು ಎಂದರು.

ಬಿಜೆಪಿ-ಜೆಡಿಎಸ್ ರಾಜಕೀಯ ಮೇಲಾಟ:

ಬಿಜೆಪಿ -ಜೆಡಿಎಸ್‌ನಲ್ಲಿರುವ ನಾಯಕರು ಮೈತ್ರಿ ಸಾಧನೆಯೊಂದಿಗೆ ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ಮುಂದಾಗಿದ್ದಾರೆ. ಎರಡು ಪಕ್ಷಗಳ ರಾಜಕೀಯ ಮೇಲಾಟ ನಿರೀಕ್ಷಿತ. ಇದರಿಂದ ಯಾವುದೇ ಪ್ರಯೋಜನ ಇಲ್ಲ, ಬಹುಜನ ಸಮಾಜ ಪಕ್ಷ ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದಲ್ಲಿ ಗುರುತಿಸಿಕೊಂಡಿಲ್ಲ. ಬದಲಾಗಿ ದೇಶದಲ್ಲಿ ಮೂರನೇ ರಾಷ್ಟ್ರೀಯ ಪಕ್ಷವಾಗಿ ಮುನ್ನಡೆದಿದೆ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಕ್ಷೇತ್ರಗಳಲ್ಲಿಯೂ ಬಿಎಸ್‌ಪಿ ಸ್ಪರ್ಧೆ ಮಾಡಲಿದೆ. ಪಕ್ಷದ ಅಭ್ಯರ್ಥಿಗಳು ಪ್ರಬಲ ಸ್ಪರ್ಧೆಯೊಡ್ಡಲ್ಲಿದ್ದಾರೆ. ಇದಕ್ಕಾಗಿ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಬೂತ್ ಮಟ್ಟದಿಂದ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.

ಯಾವ ಪಕ್ಷವೂ ದಲಿತ ಸಿಎಂ ಮಾಡೋದಿಲ್ಲ:

ರಾಜ್ಯದಲ್ಲಿ ಯಾವ ಪಕ್ಷವೂ ದಲಿತರನ್ನು ಮುಖ್ಯಮಂತ್ರಿ ಮಾಡುವುದಿಲ್ಲ, ದಲಿತ ಸಿಎಂ ಕೂಗು ಫಲಕಾರಿಯಾಗುವುದಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ದಲಿತರನ್ನು ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುವುದೇ ವಿನಃ ಹೊರತು ಆ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಕರ್ನಾಟಕದಲ್ಲಿ ದಲಿತರು ಮುಖ್ಯಮಂತ್ರಿಯಾಗುವುದಾದರೆ ಬಹುಜನ ಸಮಾಜ ಪಕ್ಷದಿಂದ ಮಾತ್ರ ಸಾಧ್ಯ ಎಂದರು.

೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಬಹುಜನ ಸಮಾಜ ಪಕ್ಷಕ್ಕೆ ನಷ್ಟವಾಯಿತು. ಕಳೆದ ಚುನಾವಣೆಯಲ್ಲಿ ಬಿಜೆಪಿ ದುರಾಡಳಿತ, ಸಂವಿಧಾನ ಬದಲಾವಣೆ ವಿಚಾರ, ಗ್ಯಾರಂಟಿ ಯೋಜನೆ, ಕಾಂಗ್ರೆಸ್ ಪರ ಪರಿಶಿಷ್ಟರು, ಸಮುದಾಯದ ವಿದ್ಯಾವಂತ ಜನತೆ ಒಲವು ತೋರಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮತ ಗಳಿಕೆ ಸಾಧ್ಯವಾಗಲಿಲ್ಲ ಎಂದರು.

ಪಕ್ಷದ ರಾಜ್ಯ ಸಂಯೋಜಕ ಎಂ.ಕೃಷ್ಣಮೂರ್ತಿ, ಗಂಗಾಧರ್, ಹ.ರಾ ಮಹೇಶ್,ಎಂ.ಪಿ.ವೆಂಕಟೇಶ್, ಅನಿಲ್‌ಕುಮಾರ್ ಕೆರಗೋಡು, ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್ ಇತರರಿದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ