ಕಾಂಗ್ರೆಸ್‌ನ 6 ಮಹಿಳಾ ಅಭ್ಯರ್ಥಿಗಳಲ್ಲಿ ಗೆದ್ದಿದ್ದು ಇಬ್ಬರೇ

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಆರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಇಬ್ಬರು ಮಾತ್ರ ಗೆಲುವು ಸಾಧಿಸುವಲ್ಲಿ ಶಕ್ತರಾಗಿದ್ದಾರೆ.  

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಆರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಇಬ್ಬರು ಮಾತ್ರ ಗೆಲುವು ಸಾಧಿಸುವಲ್ಲಿ ಶಕ್ತರಾಗಿದ್ದಾರೆ. ಅದರಲ್ಲೂ ಇಬ್ಬರು ಮಹಿಳಾ ಅಭ್ಯರ್ಥಿಗಳು ವಿಧಾನಸಭೆ ಚುನಾವಣೆ ಸೋತ ನಂತರವೂ ಲೋಕಸಭಾ ಟಿಕೆಟ್‌ ಗಿಟ್ಟಿಸಿಕೊಂಡಿದ್ದರಾದರೂ ಗೆಲುವು ಪಡೆಯಲು ಶಕ್ತರಾಗಲಿಲ್ಲ.

ರಾಜ್ಯದಲ್ಲಿ ಇದೇ ಮೊದಲ ಬಾರಿ ಕಾಂಗ್ರೆಸ್‌ 6 ಮಂದಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಅದರಲ್ಲಿ ಇಬ್ಬರು ಮಾತ್ರ ಗೆದ್ದಿದ್ದಾರೆ. ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಉತ್ತರ ಕನ್ನಡ, ಬೆಂಗಳೂರು ದಕ್ಷಿಣ, ಶಿವಮೊಗ್ಗ, ಬಾಗಲಕೋಟೆಯಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮಹಿಳಾ ಅಭ್ಯರ್ಥಿಗಳು ಸೋತಿದ್ದಾರೆ.

ಅದೇ ರೀತಿ ಕಳೆದ 25 ವರ್ಷಗಳಿಂದ ಬಿಜೆಪಿಯ ಬಿಗಿ ಹಿಡಿತದಲ್ಲಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್‌ ಗೆಲ್ಲುವ ಮೂಲಕ ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಇದೇ ಮೊದಲ ಬಾರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸಮಬಲದ ಶಕ್ತಿ ಹೊಂದಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅನುಭವಿ ರಾಜಕಾರಣಿ ಅಣ್ಣಾಸಾಹೇಬ್‌ ಜೊಲ್ಲೆ ಅವರನ್ನು ಸೋಲಿಸಿದ್ದಾರೆ. ಆಮೂಲಕ 28 ವರ್ಷಗಳ ಬಳಿಕ ಕ್ಷೇತ್ರದಲ್ಲಿ ಮಹಿಳಾ ಸಂಸದೆ ಆಯ್ಕೆಯಾಗುವಂತಾಗಿದೆ. 1996ರಲ್ಲಿ ಜನತಾದಳದ ರತ್ನಮಾಲಾ ಸಾವಣೂರ್ ಅವರು ಸಂಸದೆಯಾಗಿ ಆಯ್ಕೆಯಾಗಿದ್ದರು. ಅದಾದ ನಂತರ ಮಹಿಳಾ ಸಂಸದೆ ಆಯ್ಕೆಯಾಗಿರಲಿಲ್ಲ. ಇದೀಗ ಪ್ರಿಯಾಂಕಾ ಕ್ಷೇತ್ರದ ಎರಡನೇ ಸಂಸದೆಯಾಗಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ.

2ನೇ ಸೋಲು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಡಾ। ಅಂಜಲಿ ನಿಂಬಾಳ್ಕರ್‌, ಸೌಮ್ಯ ರೆಡ್ಡಿಗೆ ಲೋಕಸಭಾ ಚುನಾವಣೆಯಲ್ಲೂ ಸೋಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರದಿಂದ ಅಂಜಲಿ, ಬೆಂಗಳೂರಿನ ಜಯನಗರದಿಂದ ಸೌಮ್ಯ ಸ್ಪರ್ಧಿಸಿ ಸೋತಿದ್ದರು.

ಕಾಂಗ್ರೆಸ್‌ನ ಇಬ್ಬರು ಮಹಿಳಾ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಸೋಲು ಕಂಡಿದ್ದಾರೆ. ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಾ। ಅಂಜಲಿ ನಿಂಬಾಳ್ಕರ್‌ ಮತ್ತು ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೌಮ್ಯಾ ರೆಡ್ಡಿ ಸೋಲು ಕಂಡಿದ್ದರು. ಅವರಿಬ್ಬರಿಗೂ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಅವಕಾಶ ನೀಡಲಾಗಿತ್ತು. ಅದರಂತೆ ಉತ್ತರಕನ್ನಡದಿಂದ ಡಾ। ಅಂಜಲಿ ನಿಂಬಾಳ್ಕರ್‌ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕಣಕ್ಕಿಳಿದಿದ್ದರು. ಆದರೆ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚಿದ್ದ ಕಾರಣದಿಂದಾಗಿ ಸೋಲು ಕಾಣುವಂತಾಗಿದೆ. ಆ ಮೂಲಕ ಒಂದೇ ವರ್ಷದಲ್ಲಿ ಎರಡು ಪ್ರಮುಖ ಚುನಾವಣೆಗಳನ್ನು ಎದುರಿಸಿ ಸೋಲು ಕಂಡಿದ್ದಾರೆ.

ಗೀತಾ, ಸಂಯುಕ್ತಾಗೆ ಸೋಲು

ಉಳಿದಂತೆ ಶಿವಮೊಗ್ಗದಿಂದ ಸಚಿವ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್‌ಕುಮಾರ್‌ ಹಾಗೂ ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌ ಕಣಕ್ಕಿಳಿದಿದ್ದರು. ಬಿಜೆಪಿ ಅಭ್ಯರ್ಥಿಗಳ ಎದುರು ಇಬ್ಬರೂ ಸೋಲು ಕಂಡಿದ್ದಾರೆ. ಅದರಲ್ಲಿ ಗೀತಾ ಶಿವರಾಜ್‌ಕುಮಾರ್‌ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಸೋಲು ಕಂಡಂತಾಗಿದೆ. ಇನ್ನು, ಆರಂಭದಲ್ಲಿಯೇ ಸ್ವಪಕ್ಷೀಯರಿಂದ ವಿರೋಧ ಎದುರಿಸಿದ್ದ ಸಂಯುಕ್ತಾ ಪಾಟೀಲ್‌ ಕೂಡ ಭಾರೀ ಅಂತರದಿಂದ ಸೋತಿದ್ದಾರೆ.

Share this article