ರಾಹುಲ್‌ ಗಾಂಧಿ ರೀತಿ ಪರಮೇಶ್ವರ್ ಚಿಲ್ಲರೆ ಮಾತುಗಳ ಆಡಬಾರದು : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಸಾರಾಂಶ

ಪಾಕಿಸ್ತಾನದ ಪ್ರಜೆಗಳು ರಾಜ್ಯದಲ್ಲಿ ನೆಲೆಸಲು ಕೇಂದ್ರ ಸರ್ಕಾರದ ವೈಫಲ್ಯ ಕಾರಣ ಎಂದು ಆರೋಪಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.

ಹುಬ್ಬಳ್ಳಿ (ಅ.06): ಪಾಕಿಸ್ತಾನದ ಪ್ರಜೆಗಳು ರಾಜ್ಯದಲ್ಲಿ ನೆಲೆಸಲು ಕೇಂದ್ರ ಸರ್ಕಾರದ ವೈಫಲ್ಯ ಕಾರಣ ಎಂದು ಆರೋಪಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ಡಾ.ಪರಮೇಶ್ವರ್‌ ಅವರು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯಂತೆ ಚಿಲ್ಲರೆ ಮಾತು ಆಡಬಾರದು ಎಂದು ತಿರುಗೇಟು ನೀಡಿದ್ದಾರೆ. ಗೃಹ ಸಚಿವರ ಹೇಳಿಕೆಗೆ ಸಂಬಂಧಿಸಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪರಮೇಶ್ವರ್‌ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎಷ್ಟು ಜನ ನುಸುಳುಕೋರರು ಭಾರತಕ್ಕೆ ಬಂದಿದ್ದರು? ಎಷ್ಟು ಭಯೋತ್ಪಾದನಾ ಚಟುವಟಿಕೆಗಳು ಆಗಿವೆ? ಎಲ್ಲೆಲ್ಲಿ ಬಾಂಬ್ ಬ್ಲಾಸ್ಟ್‌ಗಳಾಗಿವೆ ಎಂಬುದನ್ನು ಅವರು ‌ತಿಳಿದು ಮಾತನಾಡಲಿ ಎಂದರು.

ಕಡಿವಾಣ ಹಾಕಿದ್ದೇ ಬಿಜೆಪಿ: ನುಸುಳುಕೋರರು ಭಾರತಕ್ಕೆ ನುಗ್ಗುವುದಕ್ಕೆ ಕಡಿವಾಣ ಹಾಕಿದ್ದೇ ಬಿಜೆಪಿ ಸರ್ಕಾರ. ಆದರೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರು, ಹೈದರಾಬಾದ್‌, ಮುಂಬೈ, ಹುಬ್ಬಳ್ಳಿ ಸೇರಿ ಅನೇಕ ಕಡೆ ಬಾಂಬ್ ಸ್ಫೋಟಗಳಾಗಿವೆ. ಅದೆಲ್ಲವನ್ನೂ ಪರಮೇಶ್ವರ್‌ ನೆನಪು ಮಾಡಿಕೊಳ್ಳಲಿ. ಈ ವಿಷಯದಲ್ಲಿ ನಾವು ರಾಜಕಾರಣ ಮಾಡಿಲ್ಲ. ಪರಮೇಶ್ವರ ಅವರು ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಗೃಹಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ನಾವು ಸಜ್ಜನ, ದೇಶ ಮತ್ತು ರಾಜ್ಯದ ಬಗ್ಗೆ ಕಳಕಳಿ ಇರುವವರು ಎಂದು ತಿಳಿದುಕೊಂಡಿದ್ದೇವೆ‌. ರಾಹುಲ್ ಗಾಂಧಿಯಂತೆ‌ ಚಿಲ್ಲರೆಯಾಗಿ ಮಾತನಾಡುವುದನ್ನು ಬಿಡಬೇಕು ಎಂದರು.

ಸಿಎಂ ಸಿದ್ದರಾಮಯ್ಯಗೆ ಸಿಕ್ಕಿಹಾಕಿಕೊಳ್ಳುವ ಭಯ ಕಾಡ್ತಿದೆ: ಸಮಾಜವಾದಿ ಹೆಸರಲ್ಲಿ ಅಧಿಕಾರಕ್ಕೆ‌ ಬಂದವರ ಬಂಡವಾಳ ಬಯಲಾಗಿದೆ. ಐದು ಜನರ ಮೇಲೆ ಈಗ ಎಫ್ಐಆರ್ ದಾಖಲಾಗಿದೆ. SCP, TSP ಅನುದಾನ ದುರ್ಬಳಕೆ ಆಗಿದೆ‌. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ಶಿಷ್ಯವೇತನ ಬರುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಹೈಕೋರ್ಟ್ ಸುದೀರ್ಘ ವಿಚಾರಣೆ ಬಳಿಕವೂ ಷಡ್ಯಂತ್ರ ಅನ್ನೋದು ಮೂರ್ಖತನ. ರಾಜ್ಯಪಾಲರು ಬಗ್ಗೆ ಆರೋಪದಲ್ಲಿ ಹುರುಳಿಲ್ಲ.

ಹೈಕೋರ್ಟ್ ಮೂಡ ಹಗರಣದ ಬಗ್ಗೆ ಸುದೀರ್ಘವಾಗಿ ವಿಶ್ಲೇಷಣೆ ಮಾಡಿದೆ. ಆದ್ರು ಕಾಂಗ್ರೆಸ್‌ನಲ್ಲೂ ಇನ್ನೂ ರಾಜ್ಯಪಾಲರ ಮೇಲೆ‌ ಆರೋಪ‌ ಮಾಡುತ್ತಿದ್ದಾರೆ. ದಿನ ಬೆಳಗಾದ್ರೆ ರಾಜ್ಯಪಾಲರ ಬಗ್ಗೆ ಮಾತನಾಡ್ತಾರೆ. ಮುಖ್ಯಮಂತ್ರಿ ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ ಸಿಬಿಐಗೆ ಕೊಡಿ ಎಂದು ಸವಾಲ್‌ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಭಯ ಕಾಡುತ್ತಿದೆ. ಸಿಕ್ಕಿಹಾಕಿಕೊಳ್ಳುವ ಭಯ. ಕಾಂಗ್ರೆಸ್ ಭ್ರಷ್ಟಾಚಾರ ಪಿತಾಮಹ. ಆಫ್‌ ದೀ ಫ್ಯಾಮಿಲಿ, ಭೈದೀ ಫ್ಯಾಮಿಲಿ, ಫಾರ್ ದಿ ಫ್ಯಾಮಿಲಿ. ಇದು ಕಾಂಗ್ರೆಸ್ ತತ್ವವಾಗಿದೆ ಎಂದು ಹರಿಹಾಯ್ದಿದ್ದಾರೆ.

Share this article