ಲೋಕಸಭೆಯಲ್ಲಿ ಐತಿಹಾಸಿಕ ಮಸೂದೆಗೆ ಅಂಗೀಕಾರ ಲಭಿಸಿದ್ದು, ಕಾಂಗ್ರೆಸ್ ಪಕ್ಷ ವಕ್ಫ್ ಕಾಯ್ದೆ ತಿದ್ದುಪಡಿಯನ್ನು ರಾಜ್ಯ ಮತ್ತು ದೇಶದಲ್ಲಿ ವಿರೋಧಿಸುವುದು ಒಂದು ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಬೆಂಗಳೂರು : ಲೋಕಸಭೆಯಲ್ಲಿ ಐತಿಹಾಸಿಕ ಮಸೂದೆಗೆ ಅಂಗೀಕಾರ ಲಭಿಸಿದ್ದು, ಕಾಂಗ್ರೆಸ್ ಪಕ್ಷ ವಕ್ಫ್ ಕಾಯ್ದೆ ತಿದ್ದುಪಡಿಯನ್ನು ರಾಜ್ಯ ಮತ್ತು ದೇಶದಲ್ಲಿ ವಿರೋಧಿಸುವುದು ಒಂದು ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಗುರುವಾರ ಫ್ರೀಡಂ ಪಾರ್ಕ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಜಮೀನುಗಳನ್ನು ವಕ್ಫ್ ಮಂಡಳಿ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು, ರಾಜಕಾರಣಿಗಳು ಲೂಟಿ ಮಾಡಿದ್ದಾರೆ. ಇಂಥ ಕಾಂಗ್ರೆಸ್ ಮುಖಂಡರು ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಹಲವು ದಶಕಗಳಿಂದ ವಕ್ಫ್ ಕಾಯ್ದೆ ಬಗ್ಗೆ ದೇಶ ಮತ್ತು ರಾಜ್ಯದಲ್ಲಿ ಚರ್ಚೆ ನಡೆಯುತ್ತಿತ್ತು. ರಾಜ್ಯದಲ್ಲಿ ಸಾವಿರ ವರ್ಷಗಳ ಇತಿಹಾಸ ಇರುವ ದೇವಾಲಯಗಳು, ಧಾರ್ಮಿಕ ಸಂಸ್ಥೆಗಳ ಜಮೀನು, ರಾಜ್ಯದ ಲಕ್ಷಾಂತರ ರೈತರ ಜಮೀನನ್ನು ಸಹ ವಕ್ಫ್ ಮಂಡಳಿ ಹೆಸರು ಹೇಳಿಕೊಂಡು ಕಿತ್ತುಕೊಳ್ಳುವ ಕೆಲಸ ನಡೆದಿತ್ತು. ಇದರ ವಿರುದ್ಧ ಬಿಜೆಪಿ, ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆಸಿತ್ತು. ಕೇಂದ್ರದಲ್ಲಿ ಪ್ರಧಾನಿ ಮೋದಿ ಸಂಸತ್‌ನ ಉಪ ಸಮಿತಿ ರಚಿಸಿದ್ದರು. ವಕ್ಫ್ ಮಂಡಳಿ ಹೆಸರಿನಲ್ಲಿ ದೇಶ, ರಾಜ್ಯದ ಜನರಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸಲು ಈ ಉಪ ಸಮಿತಿ ರಚಿಸಲಾಗಿತ್ತು ಎಂದು ಹೇಳಿದರು.
ವಕ್ಫ್ ತಿದ್ದುಪಡಿ ಮಸೂದೆಗೆ ಬುಧವಾರ ಲೋಕಸಭೆ ಅಂಗೀಕರಿಸಿದೆ. ಇದೊಂದು ಐತಿಹಾಸಿಕ ಕ್ಷಣ. ಪ್ರತಿಯೊಬ್ಬರೂ ಸಂಭ್ರಮ ಆಚರಿಸುವ ಸುಸಂದರ್ಭ ಇದು. ಈ ಮಸೂದೆ ಅಂಗೀಕಾರವನ್ನು ಹಿಂದೂಗಳಷ್ಟೇ ಅಲ್ಲ, ಮುಸಲ್ಮಾನರೂ ಸ್ವಾಗತಿಸಿದ್ದಾರೆ ಎಂದು ತಿಳಿಸಿದರು.