ಮೈಸೂರು : ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಕುರಿತು ಚಾಮುಂಡೇಶ್ವರಿ ಕ್ಷೇತ್ರದ ಜನ ನಿರ್ಧಾರ ಮಾಡ್ತಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದಿಂದ ಆಫರ್ ಬಂದಿತ್ತು. ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ಮಂತ್ರಿ ಮಾಡುವುದಾಗಿ ಹೇಳಿದ್ದರು. ಖುದ್ದು ರಾಹುಲ್ ಗಾಂಧಿ ಮನೆಗೆ ಬರಲು ತಯಾರಿ ಮಾಡಿಕೊಂಡಿದ್ದರು. ಆದರೆ, ತಂದೆ ಸ್ಥಾನದಲ್ಲಿರುವ ದೇವೇಗೌಡರ ಮಾತಿಗೆ ಮಣಿದು ಜೆಡಿಎಸ್ ಪಕ್ಷದಲ್ಲಿಯೇ ಉಳಿದೆ. ಮುಂದಿನ ಮೂರು ವರ್ಷ ಜೆಡಿಎಸ್ ಪಕ್ಷದಲ್ಲಿ ಇರ್ತೀನಿ. ಮುಂದೆ ಕಾಂಗ್ರೆಸ್ ಸೇರಬೇಕೋ ಬೇಡವೋ ಎಂದು ಜನ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ನನ್ನ ಮಾತು ಕುಮಾರಸ್ವಾಮಿ ಕೇಳಿಲ್ಲ
ಚನ್ನಪಟ್ಟಣದಲ್ಲಿ ನಿಖಿಲ್ ಸೋಲು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಮಾತು ಕುಮಾರಸ್ವಾಮಿ ಕೇಳಲಿಲ್ಲ. ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ನನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಸಿ.ಪಿ. ಯೋಗೇಶ್ವರ್ ಅವರನ್ನು ಒಗ್ಗೂಡಿಸಿದ್ದು ನಾನು. ಕೊನೆಗೆ ಅವರೇ ಸಂಸತ್ ಚುನಾವಣೆಯಲ್ಲಿ ಒಂದಾಗಿದ್ದರು. ಬಳಿಕ ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ವಿಚಾರದಲ್ಲಿ ಗೊಂದಲಕ್ಕೆ ಒಳಗಾದರು. ಮೂರು ಬಾರಿ ಅವರೇ ಚನ್ನಪಟ್ಟಣದಲ್ಲಿ ನಮ್ಮ ಅಭ್ಯರ್ಥಿ ಸೋಲ್ತಾನೆ ಅಂತ ಹೇಳಿದ್ದರು. ಅದೇ ವಿಚಾರಕ್ಕೆ ನನಗೂ ಅವರಿಗೂ ಮನಸ್ತಾಪ ಉಂಟಾಯಿತು. ನನ್ನ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡರು ಎಂದು ತಿಳಿಸಿದರು.
ಯೋಗೇಶ್ವರ್, ನಿಖಿಲ್ ಪೈಕಿ ಯಾರಿಗಾದರೂ ಟಿಕೆಟ್ ಕೊಡಿ. ಆದರೆ, ಯೋಗೇಶ್ವರ್ ನ ಜೊತೆ ಇಟ್ಟುಕೊಳ್ಳಿ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೆ. ಆದರೆ, ನನ್ನ ಮಾತನ್ನು ಕುಮಾರಸ್ವಾಮಿ ಕೇಳಲಿಲ್ಲ. ಚನ್ನಪಟ್ಟಣ ಸೋಲುವ ಕ್ಷೇತ್ರವಲ್ಲ. ನನಗೆ ಕುಮಾರಸ್ವಾಮಿ ಮೇಲೆ ಮುನಿಸಿರುವುದು ಸತ್ಯ. ಸಾ.ರಾ. ಮಹೇಶ್ ವಿಚಾರದಲ್ಲಿ ಬೇಸರವಿದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯಗೆ ಜಿಟಿಡಿ ಬಗ್ಗೆ ಗೊತ್ತು. ನೇರವಾಗಿ ಸತ್ಯ ಹೇಳುತ್ತೇನೆ ಅಂತ ಗೊತ್ತು. ಈವರಗೂ ಯಾವುದೇ ಸಣ್ಣ ಕೆಲಸಕ್ಕೂ ಸಿದ್ದರಾಮಯ್ಯ, ಡಿಕೆಶಿ ಬಳಿ ಹೋಗಿಲ್ಲ, ಆದರೆ ಇನ್ಮುಂದೆ ಹೋಗ್ತೇನೆ ಎಂದರು.
ಅಕ್ರಮವಾಗಿದ್ದರೆ ಕ್ರಮ ತೆಗೆದುಕೊಳ್ಳಲಿ
ಮುಡಾದಲ್ಲಿ ತಮ್ಮ ಅಕ್ಕನ ಮಗನ ಸೈಟು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ 4-5 ಜನ ಅಕ್ಕ ತಂಗಿಯರು ಇದ್ದಾರೆ.
ಯಾರು ಯಾರು ಏನು ಮಾಡ್ತಿದ್ದಾರೆಂದು ಗೊತ್ತಿಲ್ಲ. ಮಹೇಂದ್ರ ಮನೆಗೆ ಕೊಟ್ಟಿರುವ ಸೈಟು ಬಗ್ಗೆ ಕೇಳಿದ್ದೇನೆ. ಅದು ಅಕ್ರಮವಾಗಿಲ್ಲ, ಪಿತ್ರಾರ್ಜಿತಾ ಆಸ್ತಿ. ಮುಡಾದವರು ಜಮೀನು ಬದಲು ಸೈಟು ಕೊಟ್ಟಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯರ ಪತ್ನಿ ಪ್ರಕರಣ, ನಮ್ಮ ಅಕ್ಕನ ಮಗನ ಪ್ರಕರಣ ಬೇರೆ ಬೇರೆ. ಒಂದು ವೇಳೆ ಅಕ್ರಮ ಆಗಿದ್ದರೆ ಕ್ರಮ ತೆಗೆದುಕೊಳ್ಳಲಿ. ಸೈಟ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಅವರು ಹೇಳಿದರು.