ಪಹಲ್ಗಾಂ ದಾಳಿ ಮೋದಿಗೆ ಮೊದಲೇ ಗೊತ್ತಿತ್ತು: ಖರ್ಗೆ

KannadaprabhaNewsNetwork |  
Published : May 07, 2025, 12:49 AM IST
ಮಲ್ಲಿಕಾರ್ಜುನ ಖರ್ಗೆ | Kannada Prabha

ಸಾರಾಂಶ

‘ಏ.22ರಂದು ನಡೆದ ಪಹಲ್ಗಾಂ ನರಮೇಧಕ್ಕೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಮ್ಮು- ಕಾಶ್ಮೀರದಲ್ಲಿ ಉಗ್ರ ದಾಳಿ ನಡೆಯಲಿರುವ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಆದ್ದರಿಂದಲೇ ತಾವು ಅಲ್ಲಿಗೆ ಕೈಗೊಳ್ಳಬೇಕಿದ್ದ ಪ್ರವಾಸವನ್ನು ರದ್ದುಗೊಳಿಸಿದ್ದರು’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

- ಅದಕ್ಕೇ ಅವರು ಕಾಶ್ಮೀರ ಭೇಟಿ ರದ್ದು ಮಾಡಿದ್ದರು

- ಇದು ಕೊಳಕು ರಾಜಕೀಯ: ಬಿಜೆಪಿಗರ ಆಕ್ರೋಶ

----

ನವದೆಹಲಿ: ‘ಏ.22ರಂದು ನಡೆದ ಪಹಲ್ಗಾಂ ನರಮೇಧಕ್ಕೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಮ್ಮು- ಕಾಶ್ಮೀರದಲ್ಲಿ ಉಗ್ರ ದಾಳಿ ನಡೆಯಲಿರುವ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಆದ್ದರಿಂದಲೇ ತಾವು ಅಲ್ಲಿಗೆ ಕೈಗೊಳ್ಳಬೇಕಿದ್ದ ಪ್ರವಾಸವನ್ನು ರದ್ದುಗೊಳಿಸಿದ್ದರು’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಇದು ಕೊಳಕು ರಾಜಕೀಯ ಎಂದು ಹರಿಹಾಯ್ದಿದೆ.

ಜಾರ್ಖಂಡ್‌ನ ರಾಂಚಿಯಲ್ಲಿ ಸಂವಿಧಾನ ಉಳಿಸಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಪಹಲ್ಗಾಂ ದಾಳಿ ‘ಗುಪ್ತಚರ ವೈಫಲ್ಯ’ವಾಗಿದೆ. ಸರ್ಕಾರವೇ ಇದನ್ನು ಗುಪ್ತಚರ ವೈಫಲ್ಯ ಎಂದು ಒಪ್ಪಿ ದೋಷ ಪರಿಹರಿಸುವುದಾಗಿ ಹೇಳಿದೆ. ದಾಳಿಗೂ 3 ದಿನದ ಮುನ್ನ ಪ್ರಧಾನಿಗೆ ಆ ಬಗ್ಗೆ ಗುಪ್ತಚರ ವರದಿ ನೀಡಲಾಗಿತ್ತು. ಆದ್ದರಿಂದಲೇ ಅವರು ಕಾಶ್ಮೀರ ಭೇಟಿ ರದ್ದುಗೊಳಿಸಿದರು ಎಂದು ನನಗೆ ಮಾಹಿತಿ ಲಭಿಸಿದೆ. ಎಲ್ಲಾ ಗೊತ್ತಿದ್ದರೂ ದಾಳಿ ತಡೆಗೆ ಸೂಕ್ತ ವ್ಯವಸ್ಥೆಗಳನ್ನೇಕೆ ಮಾಡಿರಲಿಲ್ಲ? ಪಹಲ್ಗಾಂನಲ್ಲೇಕೆ ಭದ್ರತಾ ಪಡೆ ನಿಯೋಜಿಸಲಿಲ್ಲ? ಅಮಾಯಕರ ಪ್ರಾಣ ಹೋಗಿದ್ದಕ್ಕೆ ಸರ್ಕಾರವೇ ಹೊಣೆಯಲ್ಲವೇ?’ ಎಂದು ಪ್ರಶ್ನಿಸಿದರು.

ಪ್ರತಿಕೂಲ ಹವೆಯಿಂದ ರದ್ದಾಗಿದ್ದ ಪ್ರವಾಸ:ಕಟ್ರಾ-ಶ್ರೀನಗರದ ನಡುವೆ ಚಲಿಸುವ ಮೊದಲ ರೈಲಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಏ.19ರಂದು ಕಾಶ್ಮೀರಕ್ಕೆ ಹೋಗಬೇಕಿತ್ತು. ಆದರೆ ಕೊನೇ ಕ್ಷಣದಲ್ಲಿ ಭೇಟಿ ರದ್ದಾಗಿತ್ತು. ಆಗ ಅಧಿಕಾರಿಗಳು ಕಟ್ರಾ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಮುನ್ಸೂಚನೆ ಇದ್ದುದರಿಂದ ಪ್ರಧಾನಿ ಪ್ರವಾಸವನ್ನು ಮುಂದೂಡಲಾಗಿತ್ತು ಎಂದಿದ್ದರು.

ಬಿಜೆಪಿ ಪ್ರತಿಕ್ರಿಯೆ:ಖರ್ಗೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಾರ್ಖಂಡ್‌ ಬಿಜೆಪಿ ಅಧ್ಯಕ್ಷ ಬಾಬುಲಾಲ್‌ ಮರಾಂಡಿ, ‘ಉಗ್ರವಾದ ಮತ್ತು ಪಾಕಿಸ್ತಾನದ ವಿರುದ್ಧದ ಹೋರಾಟ ನಿರ್ಣಾಯಕ ಹಂತದಲ್ಲಿರುವ ಹೊತ್ತಿನಲ್ಲೇ ಖರ್ಗೆ ಹೀಗೆ ಹೇಳಿದ್ದಾರೆ. ಇದು ಭದ್ರತಾ ಪಡೆಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಉದ್ದೇಶ ಹೊಂದಿದೆ. ಇಡೀ ದೇಶವೇ ಪ್ರಧಾನಿ ಜತೆ ನಿಂತಿರುವಾಗ ಕಾಂಗ್ರೆಸ್‌ ಕೊಳಕು ರಾಜಕೀಯ ಮಾಡುತ್ತಿದೆ’ ಎಂದಿದ್ದಾರೆ.

‘ಖರ್ಗೆ ಅವರಿಂದ ಇದಕ್ಕಿಂತ ಕೆಟ್ಟ ಹೇಳಿಕೆ ನಿರೀಕ್ಷಿಸಲಾಗದು’ ಎಂದು ಇನ್ನೊಬ್ಬ ಬಿಜೆಪಿ ನಾಯಕ ರವಿಶಂಕರ ಪ್ರಸಾದ್‌ ಖಂಡಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ವಿವಾದ