ರುದ್ರಾಪುರ: ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಸೂಕ್ತ ಅನುದಾನ ನೀಡದೇ ಹೋದಲ್ಲಿ ನಾವು ಪ್ರತ್ಯೇಕ ದೇಶ ಹೋರಾಟ ಆರಂಭಿಸಬೇಕಾಗುತ್ತದೆ ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಕಿಡಿಕಾರಿದ್ದಾರೆ. ಇಂಥ ಹೇಳಿಕೆ ನೀಡಿದವರನ್ನು ಶಿಕ್ಷಿಸುವ ಬದಲು ಅವರಿಗೆ ಲೋಕಸಭಾ ಟಿಕೆಟ್ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಮಂಗಳವಾರ ಉತ್ತರಾಖಂಡದ ರುದ್ರಾಪುರದಲ್ಲಿ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್ ಇನ್ನೂ ತುರ್ತು ಪರಿಸ್ಥಿತಿಯ ಮನಸ್ಥಿತಿಯಲ್ಲಿದೆ, ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಹೀಗಾಗಿಯೇ ಅವರು ಜನಾಭಿಪ್ರಾಯದ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂಥ ಕೆಲಸಗಳ ಮೂಲಕ ಕಾಂಗ್ರೆಸ್ ನಾಯಕರು ದೇಶವನ್ನು ಅರಾಜಕತೆ ಮತ್ತು ಅಸ್ಥಿರತೆಯತ್ತ ದೂಡುತ್ತಿದ್ದಾರೆ. ಹೀಗಾಗಿ ಇಂಥವರನ್ನು ಹುಡುಕಿ ಹುಡುಕಿ ದೇಶವನ್ನು ಸ್ವಚ್ಛ ಮಾಡಬೇಕು’ ಎಂದು ಕರೆಕೊಟ್ಟರು.
ಜೊತೆಗೆ ‘ಇತ್ತೀಚೆಗೆ ಕಾಂಗ್ರೆಸ್‌ನ ದೊಡ್ಡ ನಾಯಕರೊಬ್ಬರು, ದಕ್ಷಿಣ ಭಾರತವನ್ನು ದೇಶದಿಂದ ಬೇರ್ಪಡಿಸುವ ಮತ್ತು ವಿಭಜನೆಯ ಮಾತುಗಳನ್ನು ಆಡಿದ್ದರು. ಅವರನ್ನು ಶಿಕ್ಷಿಸುವ ಬದಲು, ಪಕ್ಷ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ’ ಎಂದು ಹೆಸರು ಹೇಳದೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರುದ್ಧ ಹರಿಹಾಯ್ದರು.
ಕಳೆದ ಫೆಬ್ರುವರಿಯಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಿದ್ದ ಮೋದಿ, ‘ದೇಶವನ್ನು ಒಂದುಗೂಡಿಸುವ ಮಾತಿರಲಿ, ಕೆಲ ಕಾಂಗ್ರೆಸ್ ನಾಯಕರು ದೇಶ ವಿಭಜನೆ ಮಾತುಗಳನ್ನು ಆಡುತ್ತಿದ್ದಾರೆ. ದೇಶವನ್ನು ತುಂಡು ತುಂಡು ಮಾಡುವುದಷ್ಟೇ ಅವರ ಗುರಿ. ಈಗಾಗಲೇ ಮಾಡಿರುವ ವಿಭಜನೆ ಅವರಿಗೆ ಸಾಕಾಗಿಲ್ಲ. ಹೀಗಾಗಿ ಹೊಸದಾಗಿ ದೇಶ ವಿಭಜನೆಯ ಮಾತುಗಳನ್ನು ಆಡುತ್ತಾರೆ. ಇಂಥದ್ದೆಲ್ಲಾ ಇನ್ನೆಷ್ಟು ದಿನ ನಡೆಯಬೇಕು’ ಎಂದು ಹೆಸರು ಹೇಳದೆಯೇ ಡಿ.ಕೆ.ಸುರೇಶ್ ವಿರುದ್ಧ ಕಿಡಿಕಾರಿದ್ದರು.