ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು

Published : Dec 08, 2025, 11:19 AM IST
Belagavi Suvarna Soudha

ಸಾರಾಂಶ

  ಡಿ.19ರವರೆಗೆ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಪೊಲೀಸರಿಂದ ಭಾರಿ ಭದ್ರತೆ ಏರ್ಪಾಡು ನಡೆದಿವೆ.  ಜೊತೆಗೆ ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ಬಾರಿ 6000 ಪೊಲೀಸರನ್ನು ಸುವರ್ಣ ವಿಧಾನಸೌಧದ ಸುತ್ತ ನಿಯೋಜಿಸಲಾಗಿದೆ

ಶ್ರೀಶೈಲ ಮಠದ

  ಬೆಳಗಾವಿ :  ಇಲ್ಲಿ ಸೋಮವಾರದಿಂದ ಡಿ.19ರವರೆಗೆ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಪೊಲೀಸರಿಂದ ಭಾರಿ ಭದ್ರತೆ ಏರ್ಪಾಡು ನಡೆದಿವೆ. ದಿಲ್ಲಿ ಕೆಂಪುಕೋಟೆಯ ಕಾರು ಸ್ಫೋಟದ ಬೆನ್ನಲ್ಲೇ ದೇಶಾದ್ಯಂತ ಕಟ್ಟೆಚ್ಚರ ಇದ್ದು, ಜೊತೆಗೆ ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ಬಾರಿ 6000 ಪೊಲೀಸರನ್ನು ಸುವರ್ಣ ವಿಧಾನಸೌಧದ ಸುತ್ತ ನಿಯೋಜಿಸಲಾಗಿದೆ. ಜತೆಗೆ ಅಹಿತಕರ ಘಟನೆಗಳು ನಡೆಯದಂತೆ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಹೀಗಿದೆ ಭದ್ರತೆ:

ಅಧಿವೇಶನದ ವೇಳೆ ಸುವರ್ಣ ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತವೆ. ನಿತ್ಯ ಸುಮಾರು 50,000 ಜನರು ಸೇರುವ ಸಾಧ್ಯತೆಯಿದೆ. ಈ ಹಿನ್ನೆಲೆ ಭದ್ರತಾ ಕ್ರಮಗಳನ್ನೂ ಹೆಚ್ಚಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೈಅಲರ್ಟ್‌ ಆಗಿವೆ.

ಸುವರ್ಣಸೌಧ ಸುತ್ತಮುತ್ತ 3 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಎಲ್ಲೆಡೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದ್ದು, ಸುಮಾರು 6,000ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 6 ಐಪಿಎಸ್, 16 ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ನಿರ್ವಹಿಸಲಿದ್ದಾರೆ. 3820 ಸಿಬ್ಬಂದಿ, 500 ಗೃಹ ರಕ್ಷಕದಳ ಸಿಬ್ಬಂದಿ, 8 ಕ್ಷಿಪ್ರ ಪ್ರತಿಕ್ರಿಯೆ ಪಡೆ, 10 ಜಿಲ್ಲಾ ಮೀಸಲು ಪ್ರಹಾರ ದಳ, 35 ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ತುಕಡಿ, 1 ಬಾಂಬ್‌ ನಿಷ್ಕ್ರಿಯ ತಂಡ, 1 ಗರುಡ ಪಡೆ, 16 ವಿಧ್ವಂಸಕ ಕೃತ್ಯ ತಪಾಸಣೆ ತಂಡ ನಿಯೋಜಿಸಲಾಗಿದೆ. ಅಲ್ಲದೇ, ಇದೇ ಮೊದಲ ಬಾರಿಗೆ ಭದ್ರತಾ ಕಣ್ಣಾವಲಿಗೆ 11 ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ.

89 ಸಂಘಟನೆಯಿಂದ ಪ್ರತಿಭಟನೆಗೆ ಕರೆ:

ಡಿ.8-19ರವರೆಗೆ ನಡೆಯಲಿರುವ ಅಧಿವೇಶನದ ಅವಧಿಯಲ್ಲಿ ಸೌಧದ ಎದುರು ಪ್ರತಿಭಟನೆ ನಡೆಸಲು 89 ಸಂಘಟನೆಗಳು ಕರೆ ಕೊಟ್ಟಿವೆ. ನಿತ್ಯ ಸಾಲು ಸಾಲು ಪ್ರತಿಭಟನೆಗಳು ನಡೆಸಲಿದ್ದು, ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲಿದೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಬಿಜೆಪಿ ಸೇರಿದಂತೆ ಒಟ್ಟು 89 ಸಂಘಟನೆಗಳು ಅನುಮತಿ ಕೋರಿ ಬೆಳಗಾವಿ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿವೆ. ಈ ಮೂಲಕ ಸದನದೊಳಗೆ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದರೆ, ಹೊರಗೆ ಸಂಘಟನೆಗಳು ಸರ್ಕಾರಕ್ಕೆ ತಮ್ಮ ಬೇಡಿಕೆ ಪಟ್ಟಿಯನ್ನೇ ನೀಡಲು ಅಣಿಯಾಗಿವೆ.

ವಿಧಾನಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮಹಾಮೇಳಾವ್‌ ಸಂಘಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಆದರೆ, ಪೊಲೀಸ್‌ ಆಯುಕ್ತಾಲಯವು ಮಹಾಮೇಳಾವ್‌ಗೆ ಅನುಮತಿ ನಿರಾಕರಿಸಿದೆ. ಕಳೆದ ಬಾರಿಯೂ ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿತ್ತು.

ಸರ್ಕಾರದ ರೈತ ವಿರೋಧಿ ಧೋರಣೆ ಮತ್ತು ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಡಿ.9ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಪ್ರತಿಭಟನೆ ನಡೆಸಲಿದ್ದು, ಸುವರ್ಣಸೌಧಕ್ಕೆ ಮುತ್ತಿಗೆಗೆ ಕರೆ ನೀಡಲಾಗಿದೆ. ಈ ಮೂಲಕ ಬಿಜೆಪಿ ಸದನದೊಳಗೂ, ಹೊರಗೂ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದೆ.

ಸ್ಫೋಟವಾಗಲಿದೆ ರೈತರ ಆಕ್ರೋಶ:

ಇನ್ನು, ಕಬ್ಬು, ಮೆಕ್ಕೆಜೋಳ, ಹಸಿರು, ಉದ್ದು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮತ್ತೆ ರೈತರು ನಡೆಸಲಿರುವ ಹೋರಾಟ ಗಮನಸೆಳೆಯಲಿದೆ. ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ಡಿ.11ರಂದು ಸಹಸ್ರಾರು ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಆಶಾ ಕಾರ್ಯಕರ್ತೆಯರು, ವಿವಿಧ ರೈತ ಪರ ಸಂಘಟನೆಗಳು ಹೀಗೆ ನಾನಾ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟಕ್ಕೆ ಸಜ್ಜಾಗಿ ನಿಂತಿವೆ.

 ಬಲಿಷ್ಠ ಭದ್ರತಾ ಕ್ರಮ

ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನಾಕಾರರಿಗೆ ಅನುಕೂಲವಾಗುವಂತೆ ಸುವರ್ಣ ಗಾರ್ಡನ್‌ ಬಳಿ ಮತ್ತು ಹಳೆಯ ಪಿಬಿ ರಸ್ತೆಯ ಧಾರವಾಡ ನಾಕಾ ಬಳಿ ವೇದಿಕೆಗಳನ್ನು ನಿರ್ಮಿಸಲಾಗಿದೆ. ಈವರೆಗೆ 88 ಸಂಘಟನೆಗಳಿಗೆ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ.

- ಭೂಷಣ ಬೋರಸೆ, ಪೊಲೀಸ್‌ ಆಯುಕ್ತ. ಬೆಳಗಾವಿ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌