ಗಲ್ವಾನ್‌ ಸಂಘರ್ಷದ ಸೇನಾ ಪುಸ್ತಕದಿಂದ‘ರಾಜಕೀಯ ಕದನ’!

Published : Feb 12, 2026, 07:11 AM IST
rahul gandhi

ಸಾರಾಂಶ

ನಿವೃತ್ತ ಭಾರತೀಯ ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಅವರ ಅಪ್ರಕಟಿತ ಆತ್ಮಕಥೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಆತ್ಮಚರಿತ್ರೆ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಏನಿದು ವಿವಾದ? ಪುಸ್ತಕದಲ್ಲಿ ಅಂಥದ್ದೇನಿದೆ? ರಾಹುಲ್‌ ಗಾಂಧಿ ಆರೋಪವೇನು? ಇತ್ಯಾದಿಗಳ ಮಾಹಿತಿ ಇಲ್ಲಿದೆ.

-ದಿವ್ಯಾ ಹೆಗಡೆ ಕಬ್ಬಿನಗದ್ದೆ

ಯಾರು ಜ. ನರವಣೆ?

ಜ। ಎಂ.ಎಂ. ನರವಣೆ ಭಾರತೀಯ ಸೇನೆಯ 28ನೇ ಮುಖ್ಯಸ್ಥರಾಗಿದ್ದವರು. 2019ರ ಡಿ.31ರಿಂದ 2022ರ ಏ.30ರವರೆಗೆ ಈ ಹುದ್ದೆ ಅಲಂಕರಿಸಿದ್ದರು. 2020ರ ಜೂನ್ 15-16ರಂದು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದು, 20 ಭಾರತೀಯ ಯೋಧರು ಹುತಾತ್ಮರಾದ ಸಂದರ್ಭದಲ್ಲಿ ಸೇನಾ ಮುಖ್ಯಸ್ಥರಾಗಿದ್ದರು. ಅವರು ತಮ್ಮ ಬದುಕಿನ ಚಿತ್ರಣವನ್ನು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ. ಅದೇ ಈಗ ವಿವಾದಕ್ಕೆ ಕಾರಣವಾಗಿದೆ.

ಬಾರದ ಬಿಡುಗಡೆ ಭಾಗ್ಯ:

2 ವರ್ಷಗಳ ಹಿಂದೆಯೇ ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಪುಸ್ತಕವನ್ನು ಘೋಷಿಸಿತ್ತು. 2023ರ ಡಿಸೆಂಬರ್‌ನಲ್ಲಿ ಸ್ವತಃ ನರವಣೆ ಸಾಮಾಜಿಕ ಜಾಲತಾಣದಲ್ಲಿ ‘ಪುಸ್ತಕ ಲಭ್ಯವಿದೆ’ ಎಂದು ಪೋಸ್ಟ್ ಮಾಡಿ, ಮುಂಗಡ ಖರೀದಿಗೆ ಆನ್‌ಲೈನ್ ಲಿಂಕ್‌ ನೀಡಿದ್ದರು. ದಿ ಕಾರವಾನ್‌ ನಿಯತಕಾಲಿಕೆಯು ಕೃತಿಯ ಆಯ್ದ ಭಾಗಗಳನ್ನು ಪ್ರಕಟಿಸಿತ್ತು. ಆದರೆ ಸೇನಾ ಮುಖ್ಯಸ್ಥರ ಪುಸ್ತಕಗಳಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಿರುವ ಸಾಧ್ಯತೆಯಿರುವುದರಿಂದ ರಕ್ಷಣಾ ಸಚಿವಾಲಯದ ಅನುಮತಿ ಕಡ್ಡಾಯ. ಆದರೆ ಇನ್ನೂ ಅನುಮೋದನೆ ಸಿಕ್ಕಿಲ್ಲ.

ಲೋಕಸಭೆಯಲ್ಲಿ ಸಂಚಲನ:

ಆದರೆ ಪುಸ್ತಕದಲ್ಲಿ ಇದೆ ಎನ್ನಲಾದ ಅಂಶಗಳು ಇತ್ತೀಚೆಗೆ ‘ದ ಕಾರವಾನ್’ ನಿಯತಕಾಲಿಕೆಯಲ್ಲಿ ಪ್ರಕಟಗೊಂಡವು, ಇದನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘2020ರ ಚೀನಾ ವಿರುದ್ಧದ ಗಲ್ವಾನ್ ಸಂಘರ್ಷ ವೇಳೆ ಮೋದಿ ಸರ್ಕಾರ ದೇಶದ ಹಿತ ಬಲಿ ನೀಡಿತು. ಇದು ಜ। ನರವಣೆ ಅವರ ಪುಸ್ತಕದಲ್ಲಿದೆ’ ಎಂದರು. ಇದಕ್ಕೆ ಕೇಂದ್ರ ಸಚಿವರು ಕಿಡಿಕಾರಿ, ‘ಅಪ್ರಕಟಿತ ಪುಸ್ತಕದ ಉಲ್ಲೇಖ ಬೇಡ’ ಎಂದು ತಿರುಗೇಟಿತ್ತರು. ಇದಾದ ನಂತರ ಕೆಲವು ದಿನ ಬಳಿಕ ಮತ್ತೆ ರಾಹುಲ್‌ ಅವರು, ‘2023ರ ಡಿಸೆಂಬರ್‌ನಲ್ಲಿ ಪುಸ್ತಕ ಲಭ್ಯವಿದೆ ಎಂದು ಜ. ನರವಣೆ ಟ್ವೀಟ್‌ ಮಾಡಿದ್ದರು, ಹಾಗಾಗಿ ಇದು ಪ್ರಕಟವಾಗಿದೆ’ ಎಂದು ತಿರುಗೇಟು ನೀಡಿದರು.

ಪುಸ್ತಕದಲ್ಲಿ ಇವೆ ಎನ್ನಲಾದ ಅಂಶ:

*ಗಲ್ವಾನ್‌ ಸಂಘರ್ಷದ ವೇಳೆ ಚೀನಾ ಟ್ಯಾಂಕ್‌ಗಳು ಭಾರತದ ಪ್ರದೇಶದ ಬಳಿ ಕಾಣಿಸಿಕೊಂಡಾಗ, ನರವಣೆ ಉನ್ನತ ರಾಜಕೀಯ ನಾಯಕತ್ವದ ಬಳಿ ಮುಂದಿನ ನಡೆ ಏನೆಂದು ಕೇಳಿದರು. ಆದರೆ ಸರ್ಕಾರದಿಂದ ಸ್ಪಷ್ಟ ಉತ್ತರ ಬರಲಿಲ್ಲ. ನಿಯಮಗಳ ಪ್ರಕಾರ ಗುಂಡು ಹಾರಿಸುವುದಕ್ಕೆ ಉನ್ನತ ಮಟ್ಟದಿಂದ ಅನುಮತಿ ಬೇಕಿತ್ತು. ಇದು ನಮ್ಮ 20 ಸೈನಿಕರ ಸಾವಿಗೆ ಕಾರಣವಾಯಿತು.

*ಮೋದಿ ಅವರು ‘ನಿಮಗೆ ಸರಿ ಎನಿಸಿದ್ದನ್ನು ಮಾಡಿ’ ಎಂದು ಹೇಳಿದ್ದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನರವಣೆಯವರಿಗೆ ತಿಳಿಸಿದ್ದರು. ಆದರೆ ನರವಣೆಯವರು ಸ್ಪಷ್ಟ ಆದೇಶಗಳಿಗಾಗಿ ಮತ್ತೆ ಮತ್ತೆ ಕೇಳಿದರೂ ಉತ್ತರ ಬರಲಿಲ್ಲ. ಇದು ನಾಯಕತ್ವವು ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದಕ್ಕೆ ಉದಾಹರಣೆ.

*ಅಗ್ನಿಪಥ್‌ ಯೋಜನೆಯನ್ನು ಸರ್ಕಾರ ಅಚಾನಕ್ಕಾಗಿ ಘೋಷಿಸಿತು. ಇದಕ್ಕೆ ನರವಣೆ ಆಶ್ಚರ್ಯಗೊಂಡಿದ್ದಲ್ಲದೆ, ಅಸಮಾಧಾನ ಹೊರಹಾಕಿದ್ದರು. ಚೀನಾ ಸೈನ್ಯದ ಚಲನವಲನ, ಭಾರತದ ಗುಪ್ತಚರ ಮಾಹಿತಿ ವೈಫಲ್ಯ, ನಿರ್ಧಾರ ಪ್ರಕ್ರಿಯೆಯಲ್ಲಿ ಗೊಂದಲ, ಬಫರ್ ಝೋನ್‌ಗಳ ಸೃಷ್ಟಿ ಇತ್ಯಾದಿ ವಿಚಾರಗಳಲ್ಲಿ ನರವಣೆಯವರಿಗೆ ಆಕ್ಷೇಪವಿತ್ತು.

ಪುಸ್ತಕ ಪ್ರಕಟವಾಗಿಲ್ಲ: ಪೆಂಗ್ವಿನ್, ನರವಣೆ

ವಿವಾದಕ್ಕೆ ಸ್ಪಷ್ಟನೆ ನೀಡಿದ ಪ್ರಕಾಶನ ಸಂಸ್ಥೆ ಪೆಂಗ್ವಿನ್‌, ‘2023ರಲ್ಲಿ ಪುಸ್ತಕದ ಮುಂಗಡ ಆರ್ಡರ್‌ ಘೋಷಣೆಯಾಗಿತ್ತು. ಪುಸ್ತಕ ಪ್ರಕಟವಾಗಿರಲಿಲ್ಲ. ಪ್ರಿ ಆರ್ಡರ್‌ ಘೋಷಣೆಯು ಪುಸ್ತಕ ಪ್ರಕಟಿಸಿದಂತಲ್ಲ’ ಎಂದಿತು. ಈ ಬೆನ್ನಲ್ಲೇ ಮೌನ ಮುರಿದ ನವರಣೆ, ‘ಪುಸ್ತಕ ಇನ್ನೂ ಪ್ರಕಟವಾಗಿಲ್ಲ’ ಎಂಬ ಪೆಂಗ್ವಿನ್‌ ಹೇಳಿಕೆಯನ್ನು ರೀಟ್ವೀಟ್‌ ಮಾಡಿ, ಅನುಮೋದಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ಮತ್ತೆ ಗದ್ದುಗೆ ಗದ್ದಲ : ಕೊಟ್ಟ ಮಾತಂತೆ ನಡೀತಾರೆ ಎಂದ ಡಿಕೆಸು, 2028ಕ್ಕೂ ಸಿದ್ದು ನೇತೃತ್ವ: ಜಮೀರ್‌