ಕಡಿಮೆ ಮತಗಳು ಬಂದರೇ ವಿದ್ಯುತ್ ಸಂಪರ್ಕ ಕಡಿತ: ಕಾಗೆ ಬೆದರಿಕೆ

ಸಾರಾಂಶ

ಒಂದು ವೇಳೆ ಕಡಿಮೆ ಮತಗಳು ಬಂದರೇ ಗ್ರಾಮಸ್ಥರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕಾಗವಾಡ ಶಾಸಕ ರಾಜು ಕಾಗೆ ಎಚ್ಚರಿಕೆ ನೀಡುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಗವಾಡ : ಒಂದು ವೇಳೆ ಕಡಿಮೆ ಮತಗಳು ಬಂದರೇ ಗ್ರಾಮಸ್ಥರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕಾಗವಾಡ ಶಾಸಕ ರಾಜು ಕಾಗೆ ಎಚ್ಚರಿಕೆ ನೀಡುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಮಂಗಳವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆಯಲ್ಲಿ ಜುಗುಳ ಮತ್ತು ಮಂಗಾವತಿ ಗ್ರಾಮಸ್ಥರು ನನಗೆ ನೀಡಿದ ಮತಗಳಿಗಿಂತ ಈ ಬಾರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ 400 ಮತಗಳನ್ನು ಅಧಿಕವಾಗಿ ನೀಡಬೇಕು. ಕಳೆದ ವಿಧಾನಸಭೆಯಲ್ಲಿ ಜುಗುಳ ಗ್ರಾಮಸ್ಥರು ಕಾಂಗ್ರೆಸ್ ಪಕ್ಷದ ನನಗೆ 400 ಮತಗಳನ್ನು ಕಡಿಮೆ ನೀಡಿದ್ದೀರಿ. ಈ ಬಾರಿ ನಮ್ಮ ಪಕ್ಷಕ್ಕೆ 400 ಮತಗಳನ್ನು ಅಧಿಕವಾಗಿ ನೀಡಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು. ಇಲ್ಲದಿದ್ದರೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆದರಿಕೆ ನೀಡಿದ್ದಾರೆ.

ಶಾಸಕ ಕಾಗೆಗೆ ನೋಟಿಸ್ ಜಾರಿ

ಕಾಗವಾಡ ಶಾಸಕರಾದ ರಾಜು ಕಾಗೆ ಏ.30 ರಂದು ಮದಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಸಭೆಯ ತಮ್ಮ ಭಾಷಣದಲ್ಲಿ ಬೇರೆ ವ್ಯಕ್ತಿಯ ವೈಯಕ್ತಿಕ ವಿಷಯವನ್ನು ಪ್ರಸ್ತಾವನೆ ಮಾಡಿರುವುದರ ಕುರಿತು ಹಾಗೂ ಜುಗುಳ ಮತ್ತು ಮಂಗಾವತಿ ಗ್ರಾಮಗಳಲ್ಲಿ ಕಡಿಮೆ ಲೀಡ್ ಕೊಟ್ಟಲ್ಲಿ ಕರೆಂಟ್‌ ಕಟ್ ಎಂದು ಮತದಾರರಿಗೆ ಬೆದರಿಕೆ ಹಾಕುವ ಕುರಿತು ವಿವಿಧ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿರುತ್ತದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಂದ 24 ಗಂಟೆಯೊಳಗಾಗಿ ವಿವರಣೆ ನೀಡುವಂತೆ ಶಾಸಕ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿರುತ್ತದೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.--------

ಯಾರಿಗೂ ನೋವನ್ನುಂಟು ಮಾಡುವ, ಬೆದರಿಸಲು ಹೇಳಿಕೆ ಕೊಟ್ಟಿಲ್ಲ: ರಾಜು ಕಾಗೆ

ಕಾಗವಾಡ: ಚುನಾವಣಾ ಪ್ರಚಾರ ಸಂದರ್ಭದಲ್ಲಿ ವೈಯಕ್ತಿಕವಾಗಿ ಯಾರಿಗೂ ನೋವನ್ನುಂಟು ಮಾಡುವ ಉದ್ದೇಶ ಹೊಂದಿಲ್ಲ. ಅಲ್ಲದೇ ವಿದ್ಯುತ್ ಸಂಪರ್ಕ ಕಡಿತಕ್ಕೆ ಸಂಬಂಧಿಸಿದಂತೆ ಆಡು ಭಾಷೆಯಲ್ಲಿ ಹೇಳಿದ್ದೇನೆ ಹೊರತು, ಯಾರನ್ನು ಬೆದರಿಸಲು ಪ್ರಯತ್ನಿಸಿಲ್ಲ ಎಂದು ರಾಜು ಕಾಗೆ ಸ್ಪಷ್ಟನೆ ನೀಡಿದ್ದಾರೆ.

ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಅವರು, ಕಳೆದ 30 ವರ್ಷಗಳಿಂದ ನಾನು ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ ಸದಸ್ಯನಾಗಿ, ಪಿಎಲ್.ಡಿ ಬ್ಯಾಂಕಿನ ನಿರ್ದೆಶಕನಾಗಿ 5 ಬಾರಿ ಶಾಸಕನಾಗಿ ಕಾಗವಾಡ ಹಾಗೂ ಅಥಣಿ ತಾಲೂಕಿನ ಜನರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ನಾನು ಸಾಪ್ಟ್‌ ಕಾರ್ನರ್‌ ಆಗಿ ಮಾತನಾಡಿದರೇ ಯಾಕೋ ಶಾಸಕರ ಮೂಡ್‌ ಸರಿ ಇಲ್ಲವೆನೋ ಎಂದು ಜನರು ತಿಳಿದುಕೊಳ್ಳುತ್ತಾರೆ. ಜೋರಾಗಿ ಮಾತನಾಡಿದರೆನೇ ಅವರಿಗೊಂದು ಖುಷಿ. ನಾನು ನಿನ್ನೆ ಜುಗುಳ ಗ್ರಾಮದಲ್ಲಿ ಮಾತನಾಡಿದ್ದು ಯಾರಿಗೂ ಬೆದರಿಕೆ ಹಾಕಿಲ್ಲ, ಉತ್ತರ ಕರ್ನಾಟಕದ ಆಡು ಭಾಷೆಯ ಶೈಲಿಯಲ್ಲಿ ಮಾತನಾಡಿರುವೆ. ಅಲ್ಲದೇ ಇಂದಿರಾ ಗಾಂಧಿ, ರಾಜೀವ ಗಾಂಧಿ ನಿಧನದ ನಂತರ ಬೇರೆಯವರು ಪ್ರಧಾನ ಮಂತ್ರಿಗಳಾಗಲಿವೇನು ಪ್ರತಿಯೊಂದಕ್ಕೂ ಪರ್ಯಾಯ ವ್ಯವಸ್ಥೆ ಇರುತ್ತದೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Share this article