ಸಂಸದ ಆಗಲೂ ಪ್ರಧಾನ್‌ಗೆ ಯೋಗ್ಯತೆ ಇಲ್ಲ: ಹರಿಪ್ರಸಾದ್‌

Published : Jul 13, 2026, 11:38 AM IST
BK Hariprasad

ಸಾರಾಂಶ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ಗೊತ್ತಿಲ್ಲ, ಅವರು ವಾಟ್ಸಪ್ ಯುನಿವರ್ಸಿಟಿ ಹಾಗೂ ನಾಗಪುರ್ ಯುನಿವರ್ಸಿಟಿಯಲ್ಲಿ ಕಥೆ ಕೇಳಿಕೊಂಡು ಕುಳಿತಿರುವವರು, ಆತ ಸಂಸದನಾಗಲೂ ಲಾಯಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

 ಬೆಂಗಳೂರು :  ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ಗೊತ್ತಿಲ್ಲ, ಅವರು ವಾಟ್ಸಪ್ ಯುನಿವರ್ಸಿಟಿ ಹಾಗೂ ನಾಗಪುರ್ ಯುನಿವರ್ಸಿಟಿಯಲ್ಲಿ ಕಥೆ ಕೇಳಿಕೊಂಡು ಕುಳಿತಿರುವವರು, ಆತ ಸಂಸದನಾಗಲೂ ಲಾಯಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಭಾನುವಾರ ನಗರದಲ್ಲಿ ಕೆಪಿಸಿಸಿ ಯುವ ಘಟಕ ನೀಟ್ ವಿದ್ಯಾರ್ಥಿಗಳ ಆತ್ಮ*ತ್ಯೆ ತಡೆಗಾಗಿ ಏರ್ಪಡಿಸಿದ್ದ ಸೈಕಲ್ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿ, ಧರ್ಮೇಂದ್ರ ಪ್ರಧಾನ್ ಅವರಲ್ಲಿ ವೈಜ್ಞಾನಿಕ ಚಿಂತನೆಗಳಿಲ್ಲ, ಧಾರ್ಮಿಕ ಧರ್ಮಾಂಧತೆ ಮಾತ್ರ ತುಂಬಿಕೊಂಡಿದೆ. ಆತ ಶಿಕ್ಷಣ ಸಚಿವ ಇರಲಿ, ಎಂಪಿ ಆಗಲು ಯೋಗ್ಯತೆ ಇಲ್ಲದವನು ಇಂದು ಶಿಕ್ಷಣ ಸಚಿವನಾಗಿದ್ದಾನೆ ಎಂದರು.

ನೀವೆಲ್ಲರೂ ‌ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಓದಿ ಮಾರ್ಕ್ಸ್ ಕಾರ್ಡ್ ತಂದರೆ ನಿಮ್ಮ ತಂದೆ ತಾಯಿ ಸಂತೋಷ ಪಡುತ್ತಾರೆ. ಆದರೆ ಮೋದಿ ಡುಪ್ಲಿಕೇಟ್ ಮಾರ್ಕ್ಸ್ ಕಾರ್ಡ್ ಇಟ್ಟುಕೊಂಡು ಸಮಾಧಾನಪಡುತ್ತಿದ್ದಾರೆ. ದೇಶದ ಅಂದ ಭಕ್ತರು ಅದನ್ನು ನೋಡಿ ವ್ಹಾ ವ್ಹಾ ಅಂತಾರೆ ಎಂದು ಟೀಕಿಸಿದರು.

ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರೆ ನಿಮ್ಮ ಹೋರಾಟ ಮುಖ್ಯ. ನಿಮಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ದೇಶದಲ್ಲಿ ಶಿಕ್ಷಣ ವ್ಯವಸ್ಥೆ ವ್ಯಾಪಾರಿಕರಣವಾಗಿದೆ. ಶಿಕ್ಷಣ ಮೂಲಭೂತ ಹಕ್ಕು ಎನ್ನುವುದನ್ನೇ ಎಷ್ಟೋ ಜನ ಮರೆತು ಹೋಗಿದ್ದಾರೆ. ಎಲ್ಲರೂ ಈ ರಾಷ್ಟ್ರದ ಭವಿಷ್ಯ ರೂಪಿಸಲು ನಿಮ್ಮ ಭವಿಷ್ಯ ರೂಪಿಸಲು ರಾಹುಲ್ ಗಾಂಧಿ ರೂಪಿಸಿರುವ ಹೋರಾಟವನ್ನು ಒಂದು ತಾರ್ಕಿಕ ಹಂತಕ್ಕೆ ತಲುಪಿಸಲು ಅವರ ಕೈಜೋಡಿಸಿ ಎಂದರು.

ಮಧ್ಯಪ್ರದೇಶದಲ್ಲಿ ಹಗರಣ:

ಮಧ್ಯಪ್ರದೇಶ ಸರ್ವಿಸ್ ಕಮಿಷನ್ ಪಾಸಾಗಲು ಹಗರಣಗಳ ಮೇಲೆ ಹಗರಣಗಳು ನಡೆದವು. ಅವುಗಳನ್ನು ಮುಚ್ಚಿಹಾಕಲು ಸುಮಾರು 41 ಜನ ಸಾಕ್ಷಿಗಳನ್ನು ಕೊಲೆ ಮಾಡಲಾಯಿತು. ನೂರಕ್ಕೂ ಹೆಚ್ಚು ಮಂದಿ ಆತ್ಮ*ತ್ಯೆ ಮಾಡಿಕೊಂಡರು. ಅದಕ್ಕೆ ಕಾರಣವಾದ ವ್ಯಕ್ತಿ ಇಂದು ಕೇಂದ್ರ ಕೃಷಿ ಸಚಿವ. ಅದೇ ಶಿವರಾಜ್ ಸಿಂಗ್ ಚೌಹಾಣ್. ವಿದ್ಯಾರ್ಥಿಗಳು ಹೋರಾಟ ಮಾಡಲು, ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸರ್ಕಾರ ಬರಬೇಕು. ಆ ಸರ್ಕಾರ ಬರಬೇಕೆಂದರೆ ನೀವೆಲ್ಲಾ ಮನಸ್ಸು ಮಾಡಬೇಕು ನಿಮ್ಮ ಭವಿಷ್ಯದ ಮೇಲೆ ಚೆಲ್ಲಾಟವಾಡುವ ಸರ್ಕಾರಕ್ಕೆ ಸರಿಯಾದ ಬುದ್ದಿ ಕಲಿಸಬೇಕು. ಅದಕ್ಕಾಗಿ ರಾಹುಲ್ ಗಾಂಧಿ ಕೊಟ್ಟಿರುವ ಕಾರ್ಯಕ್ರಮವನ್ನು ದೇಶದ ಮೂಲೆ ಮೂಲೆಗೂ ತಲುಪಿಸಬೇಕು ಎಂದರು.

ಸಚಿವ ಧರ್ಮೇಂದ್ರ ಪ್ರಧಾನ್ ಒಂದು ಕ್ಷಮೆ ಕೇಳಲಿಲ್ಲ

ಕೆಪಿಸಿಸಿಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿ 21 ಮಂದಿ ವಿದ್ಯಾರ್ಥಿಗಳು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಒಂದು ಕ್ಷಮೆ ಕೇಳಲಿಲ್ಲ. ಕೇವಲ ಸಿಬಿಐ ತನಿಖೆ ಎಂದರು. ಯಾರಿಗೂ ಶಿಕ್ಷೆಯಾಗಿಲ್ಲ. ಇದರ ಬಗ್ಗೆ ದೇಶದಾದ್ಯಂತ ವಿದ್ಯಾರ್ಥಿಗಳನ್ನು ಎಚ್ಚರಿಸಲು ಛಾತ್ರೋಂಕಿ ಗೂಂಜ್ (ವಿದ್ಯಾರ್ಥಿ ಧ್ವನಿ) ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆ.9ರಂದು ದೆಹಲಿಯಲ್ಲಿ ಬೃಹತ್ ಹೋರಾಟ ನಡೆಯಲಿದೆ ಎಂದರು.

ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ತಾರಿಕ್ ಭಗವಾನ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಕೆಪಿಸಿಸಿ ಕಚೇರಿಯಿಂದ ಗೋಪಾಲಗೌಡ ಸರ್ಕಲ್, ಕೆ.ಆರ್.ಸರ್ಕಲ್ ಮೂಲಕ, ಮೌರ್ಯ ಸರ್ಕಲ್ ತಲುಪಿ ಅಲ್ಲಿಂದ ಹಳೆ ಕಾಂಗ್ರೆಸ್ ಕಚೇರಿಯವರೆಗೂ ಹರಿಪ್ರಸಾದ್ ಸೈಕಲ್ ತುಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕೈಬಿಚ್ಚಿ ನೀಡಿದ ದಾನ, ಜಾಲತಾಣದ ಫೋಟೋ ಜಮೀರ್‌ ಪಾಲಿಗೆ ಮುಳ್ಳು!
ಸಂಪುಟ ವಿಸ್ತರಣೆ ಚರ್ಚೆಗೆ ಡಿಕೆ, ಬಿಕೆ, ಸಿದ್ದು ನಾಳೆ ದಿಲ್ಲಿಗೆ?